ಕೊಪಾ ಅಮೆರಿಕ : ಕೆನಡಾವನ್ನು ಕೆಡವಿ ಫೈನಲ್ ಗೆ ಪ್ರವೇಶಿಸಿದ ಅರ್ಜೆಂಟೀನ

Update: 2024-07-10 15:21 GMT

 ಲಿಯೊನೆಲ್ ಮೆಸ್ಸಿ | PTI 

ನ್ಯೂ ಜೆರ್ಸಿ: ತನ್ನ 109ನೇ ಅಂತರ್ರಾಷ್ಟ್ರೀಯ ಗೋಲು ಗಳಿಸಿ ಹಲವು ದಾಖಲೆಗಳನ್ನು ಮುರಿದ ವಿಶ್ವಕಪ್ ವಿಜೇತ ನಾಯಕ ಲಿಯೊನೆಲ್ ಮೆಸ್ಸಿ 15 ಬಾರಿಯ ಚಾಂಪಿಯನ್ ಅರ್ಜೆಂಟೀನ ತಂಡವು ಏಳನೇ ಬಾರಿ ಕೊಪಾ ಅಮೆರಿಕ ಟೂರ್ನಿಯಲ್ಲಿ ಫೈನಲ್ ಗೆ ತಲುಪುವುದಕ್ಕೆ ಪ್ರೇರಣೆಯಾದರು.

ಮಂಗಳವಾರ ಮೆಟ್ಲೈಫ್ ಸ್ಟೇಡಿಯಮ್ ನಲ್ಲಿ ನಡೆದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಕಿಕ್ಕಿರಿದ ಪ್ರೇಕ್ಷಕರ ಸಮ್ಮುಖದಲ್ಲಿ ವಿಶ್ವ ಚಾಂಪಿಯನ್ ಅರ್ಜೆಂಟೀನ ತಂಡ ಕೆನಡಾ ತಂಡವನ್ನು 2-0 ಅಂತರದಿಂದ ಮಣಿಸಿತು. ಜೂಲಿಯನ್ ಅಲ್ವಾರೆಝ್ 22ನೇ ನಿಮಿಷದಲ್ಲಿ ಗೋಲು ದಾಖಲಿಸಿ 1-0 ಮುನ್ನಡೆ ಒದಗಿಸಿಕೊಟ್ಟರು. 51ನೇ ನಿಮಿಷದಲ್ಲಿ ಗೋಲ್ಕೀಪರ್ ಮ್ಯಾಕ್ಸಿಮ್ ಕ್ರೆಫೋರನ್ನು ವಂಚಿಸಿ ಗೋಲು ಗಳಿಸಿದ ಮೆಸ್ಸಿ ಅರ್ಜೆಂಟೀನದ ಮುನ್ನಡೆಯನ್ನು ದ್ವಿಗುಣಗೊಳಿಸಿದರು.

ಮೆಸ್ಸಿ ಅವರು ಕೊಪಾ ಅಮೆರಿಕ ಟೂರ್ನಿಯಲ್ಲಿ 14ನೇ ಬಾರಿ ಗೋಲು ದಾಖಲಿಸಿ ಪೆರುವಿನ ಪೌಲೊ ಗುರ್ರೆರೊ ಹಾಗೂ ಚಿಲಿಯ ಎಡ್ವರ್ಡೊ ವರ್ಗಾಸ್ ದಾಖಲೆಯನ್ನು ಸರಿಗಟ್ಟಿದರು. ಪಂದ್ಯಾವಳಿಯ ಸಾರ್ವಕಾಲಿಕ ಶ್ರೇಷ್ಠ ದಾಖಲೆ ಮುರಿಯಲು ಮೂರು ಗೋಲುಗಳ ಅಗತ್ಯವಿದೆ.

109ನೇ ಗೋಲು ಗಳಿಸಿದ ಲಿಯೊನೆಲ್ ಮೆಸ್ಸಿ ಅಂತರ್ರಾಷ್ಟ್ರೀಯ ಗೋಲ್ಸ್ಕೋರರ್ಗಳ ಸಾರ್ವಕಾಲಿಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. 37ರ ಹರೆಯದ ಮೆಸ್ಸಿ ಪೋರ್ಚುಗಲ್ ಸೂಪರ್ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ನಂತರ 2ನೇ ಸ್ಥಾನದಲ್ಲಿದ್ದಾರೆ. ರೊನಾಲ್ಡೊ ಅಂತರ್ರಾಷ್ಟ್ರೀಯ ಫುಟ್ಬಾಲ್ನಲ್ಲಿ 130 ಗೋಲುಗಳೊಂದಿಗೆ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.

ಮೆಸ್ಸಿ ಅರ್ಜೆಂಟೀನದ ಪರ ಹಿಂದಿನ 25 ಪಂದ್ಯಗಳಲ್ಲಿ 28 ಗೋಲುಗಳನ್ನು ಗಳಿಸಿದ್ದಾರೆ. ಕೊಪಾ ಅಮೆರಿಕ ಟೂರ್ನಿಯೊಂದರಲ್ಲಿ 14 ಗೋಲು ಬಾರಿಸಿದ್ದಾರೆ.

ಅರ್ಜೆಂಟೀನ ತಂಡವು ತನ್ನ ಸ್ವಾತಂತ್ರ್ಯದ ದಿನದಂದೇ ಗೆಲುವು ದಾಖಲಿಸಿದ್ದು, ಅಜೇಯ ಗೆಲುವಿನ ಓಟವನ್ನು 10 ಪಂದ್ಯಗಳಿಗೆ ವಿಸ್ತರಿಸಿದೆ. ಫ್ಲೋರಿಡಾದ ಮಿಯಾಮಿ ಗಾರ್ಡನ್ಸ್ನಲ್ಲಿ ರವಿವಾರ(ಭಾರತದ ಕಾಲಮಾನ ಸೋಮವಾರ ಬೆಳಗ್ಗೆ 5:30) ನಡೆಯಲಿರುವ ಫೈನಲ್ ಪಂದ್ಯದಲ್ಲಿ ಉರುಗ್ವೆ ಅಥವಾ ಕೊಲಂಬಿಯಾ ತಂಡವನ್ನು ಎದುರಿಸಲಿದೆ. ಅರ್ಜೆಂಟೀನ ತಂಡ 16ನೇ ಬಾರಿ ಕೊಪಾ ಅಮೆರಿಕ ಪ್ರಶಸ್ತಿ ಜಯಿಸಿ ದಾಖಲೆ ನಿರ್ಮಿಸುವ ಗುರಿ ಇಟ್ಟುಕೊಂಡಿದೆ.

ಅರ್ಜೆಂಟೀನ ತಂಡವು ಸ್ಪೇನ್ ನಿರ್ಮಿಸಿರುವ ದಾಖಲೆಯನ್ನು ಸರಿಗಟ್ಟುವ ಇರಾದೆಯಲ್ಲಿದೆ. 2010ರಲ್ಲಿ ಫಿಫಾ ವಿಶ್ವಕಪ್ ಜಯಿಸಿದ್ದ ಸ್ಪೇನ್ ತಂಡ 2008 ಹಾಗೂ 2012ರಲ್ಲಿ ಯುರೋ ಚಾಂಪಿಯನ್ಶಿಪ್ ಪ್ರಶಸ್ತಿ ಜಯಿಸಿತ್ತು. 2022ರಲ್ಲಿ ಖತರ್ನಲ್ಲಿ ವಿಶ್ವಕಪ್ ಪ್ರಶಸ್ತಿ ಎತ್ತಿಹಿಡಿಯುವ ಮೊದಲು ಅರ್ಜೆಂಟೀನ ತಂಡ 2021ರಲ್ಲಿ ಕೊಪಾ ಅಮೆರಿಕ ಟ್ರೋಫಿ ಜಯಿಸಿತ್ತು.

ಸೆಮಿ ಫೈನಲ್ ಪಂದ್ಯದ ಹಿಂದಿನ ರಾತ್ರಿ ಅರ್ಜೆಂಟೀನದ ಅಭಿಮಾನಿಗಳು ಟೈಮ್ಸ್ ಸ್ಕ್ವೇರ್ನಲ್ಲಿ ಜಮಾಯಿಸಿದ್ದರು. 2026ರ ವಿಶ್ವಕಪ್ ಫೈನಲ್ನ ತಾಣವಾಗಿರುವ ಮೆಟ್ಲೈಟ್ ಸ್ಟೇಡಿಯಮ್ಗೆ ಹೋಗುವ ಮೊದಲು ಮ್ಯಾನ್ಹ್ಯಾಟನ್ ಬೀದಿಗಳಲ್ಲಿ ನೆರೆದಿದ್ದರು. ತೀವ್ರ ಸೆಖೆಯ ಹೊರತಾಗಿಯೂ 80,102 ಮಂದಿ ಪ್ರೇಕ್ಷಕರು ಅರ್ಜೆಂಟೀನವನ್ನು ಬೆಂಬಲಿಸಲು ಆಗಮಿಸಿದ್ದರು. ಕೆಲವು ಕಡೆಗಳಲ್ಲಿ ಮಾತ್ರ ಕೆಂಪು ವಸ್ತ್ರದ ಕೆನಡಾದ ಅಭಿಮಾನಿಗಳು ಕಂಡುಬಂದರು.

ಈ ಪಂದ್ಯವು ಕೆನಡಾ ಫುಟ್ಬಾಲ್ಗೆ ಅತ್ಯಂತ ಮುಖ್ಯವಾಗಿತ್ತು. ಕೆನಡಾವು 1986 ಹಾಗೂ 2022ರಲ್ಲಿ ಫಿಫಾ ವಿಶ್ವಕಪ್ನಲ್ಲಿ ಭಾಗವಹಿಸಿದ್ದಾಗ ಒಂದೂ ಗೋಲು ಗಳಿಸಿರಲಿಲ್ಲ. 2000ರಲ್ಲಿ ಕಾನ್ಕಾಕಾಫ್ ಗೋಲ್ಡ್ ಕಪ್ ಜಯಿಸಿತ್ತು.

ಅರ್ಜೆಂಟೀನ ತಂಡವು ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಕೆನಡಾವನ್ನು 2-0 ಅಂತರದಿಂದ ಸೋಲಿಸಿತ್ತು.

ಕೆನಡಾದ ಸ್ಟಾರ್ ಆಟಗಾರ ಅಲ್ಫಾನ್ಸೊ ಡೇವಿಸ್ 71ನೇ ನಿಮಿಷದಲ್ಲಿ ಕಾಲುನೋವಿನಿಂದಾಗಿ ಮೈದಾನ ತೊರೆದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News