ಕೊಪಾ ಅಮೆರಿಕ : ಕೊಲಂಬಿಯಾ ಫೈನಲ್ ಗೆ , ಅರ್ಜೆಂಟೀನ ಎದುರಾಳಿ
ಚಾರ್ಲೋಟ್(ನಾರ್ತ್ ಕರೋಲಿನಾ: ದ್ವಿತೀಯಾರ್ಧದಲ್ಲಿ 10 ಆಟಗಾರರೊಂದಿಗೆ ಆಡಿದ ಹೊರತಾಗಿಯೂ ಬುಧವಾರ ನಡೆದ ಕೊಪಾ ಅಮೆರಿಕ ಫುಟ್ಬಾಲ್ ಟೂರ್ನಿಯ ಸೆಮಿ ಫೈನಲ್ ಪಂದ್ಯದಲ್ಲಿ ಕೊಲಂಬಿಯಾ ತಂಡವು ಉರುಗ್ವೆ ತಂಡವನ್ನು 1-0 ಗೋಲು ಅಂತರದಿಂದ ಮಣಿಸಿದೆ. ಈ ಮೂಲಕ 23 ವರ್ಷಗಳ ನಂತರ ಮೊದಲ ಬಾರಿ ಕೊಪಾ ಅಮೆರಿಕ ಟೂರ್ನಿಯಲ್ಲಿ ಫೈನಲ್ನಲ್ಲಿ ಆಡುವ ಅವಕಾಶ ಪಡೆದಿದೆ.
ಮೊದಲಾರ್ಧದ 39ನೇ ನಿಮಿಷದಲ್ಲಿ ಹೆಡರ್ನ ಮೂಲಕ ಜೆಫರ್ಸನ್ ಲೆರ್ಮಾ ಗೆಲುವಿನ ಗೋಲು ದಾಖಲಿಸಿದರು. ಸ್ಮರಣೀಯ ಗೆಲುವಿನೊಂದಿಗೆ ಫೈನಲ್ಗೆ ತಲುಪಿರುವ ಕೊಲಂಬಿಯಾ ತಂಡ ರವಿವಾರ ಹಾಲಿ ಚಾಂಪಿಯನ್ ಅರ್ಜೆಂಟೀನದ ಸವಾಲನ್ನು ಎದುರಿಸಲಿದೆ.
ಉರುಗ್ವೆ ತಂಡವು ಶನಿವಾರ ಮೂರನೇ ಸ್ಥಾನಕ್ಕಾಗಿ ಕೆನಡಾ ವಿರುದ್ಧ ಪ್ಲೇ ಆಫ್ ಪಂದ್ಯವನ್ನು ಆಡಲಿದೆ.
ಮೊದಲಾರ್ಧದ ಅಂತ್ಯಕ್ಕೆ ಕೊಲಂಬಿಯಾದ ಡೇನಿಯಲ್ ಮುನೊಝ್ ಎರಡನೇ ಬಾರಿ ಹಳದಿ ಕಾರ್ಡ್ ಪಡೆದು ಮೈದಾನದಿಂದ ಹೊರ ನಡೆದರು. ಆಗ ಉರುಗ್ವೆಗೆ ಮೇಲುಗೈ ಸಾಧಿಸುವ ಅವಕಾಶವಿತ್ತು. ಆದರೆ ಅದು ಇದರ ಲಾಭ ಪಡೆಯುವಲ್ಲಿ ವಿಫಲವಾಯಿತು. ಪಂದ್ಯದ ಆರಂಭದಲ್ಲಿ ಡಾರ್ವಿನ್ ನುನೆಝ್ ಮೂರು ಬಾರಿ ಗೋಲು ಗಳಿಸುವ ಅವಕಾಶ ಪಡೆದಿದ್ದರು. ಮೊದಲ ಪ್ರಯತ್ನದಲ್ಲಿ ಸ್ವಲ್ಪದರಲ್ಲಿ ಗೋಲು ಕೈತಪ್ಪಿದರೆ, ಇನ್ನೆರಡು ಪ್ರಯತ್ನದಲ್ಲಿ ಗುರಿ ತಲುಪಲಾಗಲಿಲ್ಲ.
ಕೊಲಂಬಿಯಾದ ಆಟಗಾರ ಲೆರ್ಮಾ ಹೆಡರ್ನ ಮೂಲಕ ಗೋಲ್ಕೀಪರ್ ಸೆರ್ಗಿಯೊ ರೊಚೆಟ್ರನ್ನು ವಂಚಿಸಿ ಗೋಲು ಗಳಿಸಿದರು. ಜೇಮ್ಸ್ ರೊಡ್ರಿಗಝ್ ಪಂದ್ಯಾವಳಿಯಲ್ಲಿ ಆರನೇ ಬಾರಿ ಅಸಿಸ್ಟ್ ಮಾಡಿ ಗಮನ ಸೆಳೆದರು.
ದ್ವಿತೀಯಾರ್ಧದ 67ನೇ ನಿಮಿಷದಲ್ಲಿ ಉರುಗ್ವೆ ತಂಡದ ಕೋಚ್ ಮಾರ್ಸೆಲಾ ಬೀಲ್ಸಾ ಅವರು ಲುಯಿಸ್ ಸುಯರೆಝ್ರನ್ನು ಮೈದಾನಕ್ಕೆ ಇಳಿಸಿದರು. ಅನುಭವಿ ಸ್ಟ್ರೈಕರ್ ಬಾರಿಸಿದ ಚೆಂಡು ಕ್ರಾಸ್ಬಾರ್ಗೆ ಅಪ್ಪಳಿಸಿದ್ದು , ಇದರಿಂದ ಸುಯರೆಝ್ ನಿರಾಶೆಗೊಂಡರು.
ಅಂತಿಮ ಕ್ಷಣದಲ್ಲಿ ಉರುಗ್ವೆಗೆ ಪಂದ್ಯವನ್ನು ಪೆನಾಲ್ಟಿ ಶೂಟೌಟ್ನತ್ತ ಒಯ್ಯುವ ಸುವರ್ಣಾವಕಾಶ ಲಭಿಸಿತ್ತು. ಆದರೆ ಈ ಅವಕಾಶವನ್ನು ಉರುಗ್ವೆ ತಂಡ ಕೈಚೆಲ್ಲಿತು.
ಸತತ 28 ಪಂದ್ಯಗಳಲ್ಲಿ ಜಯ, ರಾಷ್ಟ್ರೀಯ ದಾಖಲೆ ನಿರ್ಮಿಸಿದ ಕೊಲಂಬಿಯಾ
ಇದೀಗ ಕೊಲಂಬಿಯಾ ತಂಡವು ಅಜೇಯ ಗೆಲುವಿನ ಓಟವನ್ನು 28 ಪಂದ್ಯಗಳಿಗೆ ವಿಸ್ತರಿಸಿದೆ. ಈ ಮೂಲಕ 1992-94ರಲ್ಲಿ ನಿರ್ಮಿಸಿರುವ ತನ್ನದೇ ದಾಖಲೆಯನ್ನು ಉತ್ತಮಪಡಿಸಿಕೊಂಡಿತು. ನೂತನ ರಾಷ್ಟ್ರೀಯ ದಾಖಲೆ ನಿರ್ಮಿಸಿತು.
ಇಟಲಿ ತಂಡ ಅಂತರ್ರಾಷ್ಟ್ರೀಯ ಫುಟ್ಬಾಲ್ನಲ್ಲಿ ದೀರ್ಘ ಸಮಯ ಅಜೇಯ ಗೆಲುವಿನ ದಾಖಲೆ ಕಾಯ್ದುಕೊಂಡಿತ್ತು. ಇಟಲಿ ತಂಡ 2018 ಹಾಗೂ 2021ರ ನಡುವೆ 37 ಪಂದ್ಯಗಳಲ್ಲಿ ಒಂದೂ ಪಂದ್ಯವನ್ನು ಸೋತಿರಲಿಲ್ಲ. ಇಟಲಿಯ ಗೆಲುವಿನ ಓಟಕ್ಕೆ ಸ್ಪೇನ್ ತಡೆಯೊಡ್ಡಿತ್ತು.
ಅರ್ಜೆಂಟೀನ ತಂಡವು ಇಟಲಿಯ 37 ಪಂದ್ಯಗಳ ಅಜೇಯ ಗೆಲುವಿನ ದಾಖಲೆಯನ್ನು ಸರಿಗಟ್ಟುವ ಸನಿಹ ತಲುಪಿತ್ತು. ಆದರೆ 2022ರ ವಿಶ್ವಕಪ್ನಲ್ಲಿ ಸೌದಿ ಅರೇಬಿಯ ವಿರುದ್ಧ ಆಡಿದ್ದ ತನ್ನ ಮೊದಲ ಪಂದ್ಯದಲ್ಲಿ 2-1 ಅಂತರದಿಂದ ಸೋಲನುಭವಿಸಿ ಇಟಲಿ ದಾಖಲೆ ಸರಿಗಟ್ಟುವುದರಿಂದ ವಂಚಿತವಾಗಿತ್ತು.
ಮೆಸ್ಸಿ ದಾಖಲೆ ಮುರಿದ ಜೇಮ್ಸ್ ರೋಡ್ರಿಗಝ್
ಕೊಲಂಬಿಯಾದ ವಿಂಗರ್ ಜೇಮ್ಸ್ ರೋಡ್ರಿಗಝ್ ಕೊಪಾ ಅಮೆರಿಕ ಟೂರ್ನಿಯ ಒಂದೇ ಆವೃತ್ತಿಯಲ್ಲಿ ಅತ್ಯಂತ ಹೆಚ್ಚು ಅಸಿಸ್ಟ್ ಮೂಲಕ ಅರ್ಜೆಂಟೀನದ ಫುಟ್ಬಾಲ್ ಮಾಂತ್ರಿಕ ಲಿಯೊನೆಲ್ ಮೆಸ್ಸಿ ದಾಖಲೆಯನ್ನು ಮುರಿದರು.
ಪ್ರಸಕ್ತ ಟೂರ್ನಿಯಲ್ಲಿ ಆರು ಬಾರಿ ಅಸಿಸ್ಟ್ ಮಾಡಿದ ರೋಡ್ರಿಗಝ್ ಅವರು 2021ರ ಕೊಪಾ ಅಮೆರಿಕ ಅಭಿಯಾನದಲ್ಲಿ ಐದು ಬಾರಿ ಅಸಿಸ್ಟ್ ಮಾಡಿದ್ದ ಮೆಸ್ಸಿ ದಾಖಲೆಯನ್ನು ಹಿಂದಿಕ್ಕಿದರು.
ಸೆಮಿ ಫೈನಲ್ನಲ್ಲಿ 39ನೇ ನಿಮಿಷದಲ್ಲಿ ರೋಡ್ರಿಗಝ್ ಪಿನ್-ಪಾಯಿಂಟ್ ಕ್ರಾಸ್ ನೀಡಿದ್ದು ಇದರ ಲಾಭ ಪಡೆದ ಜೆಫರ್ಸನ್ ಲೆರ್ಮಾ ಅವರು ಕೊಲಂಬಿಯಾ ತಂಡದ ಪರ ಗೆಲುವಿನ ಗೋಲು ಗಳಿಸಿದರು.