ಭಾರತ, ಪಾಕ್ ನಡುವೆ ದ್ವಿಪಕ್ಷೀಯ ಸರಣಿಯ ಆತಿಥ್ಯ ವಹಿಸಲು ಕ್ರಿಕೆಟ್ ಆಸ್ಟ್ರೇಲಿಯ ಉತ್ಸುಕ
ಸಿಡ್ನಿ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಒಪ್ಪಿದರೆ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸರಣಿಗೆ ತಾನು ಆತಿಥ್ಯ ವಹಿಸುವುದಾಗಿ ಕ್ರಿಕೆಟ್ ಆಸ್ಟ್ರೇಲಿಯ (ಸಿಎ) ಹೇಳಿದೆ.
ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳು ತಮ್ಮ ತಮ್ಮ ದ್ವಿಪಕ್ಷೀಯ ಸರಣಿಗಳಿಗಾಗಿ ಈ ವರ್ಷದ ನವೆಂಬರ್ ನಲ್ಲಿ ಆಸ್ಟ್ರೇಲಿಯ ಪ್ರವಾಸ ಕೈಗೊಳ್ಳಲಿವೆ. ಭಾರತವು ಆಸ್ಟ್ರೇಲಿಯದಲ್ಲಿ ನವೆಂಬರ್ 22ರಿಂದ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಬಳಿಕ ಪಾಕಿಸ್ತಾನವು ಆಸ್ಟ್ರೇಲಿಯದ ವಿರುದ್ಧ ಮೂರು ಪಂದ್ಯಗಳ ಏಕದಿನ ಮತ್ತು ಮೂರು ಪಂದ್ಯಗಳ ಟಿ20 ಸರಣಿಗಳನ್ನು ಆಡಲಿದೆ.
ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳು 12 ವರ್ಷಗಳಲ್ಲಿ ದ್ವಿಪಕ್ಷೀಯ ಸರಣಿಯನ್ನು ಆಡಿಲ್ಲ. ಅವುಗಳು ಕೊನೆಯ ದ್ವಿಪಕ್ಷೀಯ ಸರಣಿಯನ್ನು ಆಡಿದ್ದು 2012-13ರಲ್ಲಿ. ಆ ಬಳಿಕ, ಉಭಯ ತಂಡಗಳು ಪರಸ್ಪರರ ವಿರುದ್ಧ ಆಡಿರುವುದು ಏಶ್ಯ ಕಪ್ ಅಥವಾ ಐಸಿಸಿ ಪಂದ್ಯಾವಳಿಗಳಲ್ಲಿ ಮಾತ್ರ.
2022ರ ಟ್ವೆಂಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ, ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಪಂದ್ಯವು ಭಾರೀ ಯಶಸ್ಸು ಕಂಡಿತ್ತು. ಆ ಪಂದ್ಯವನ್ನು ವೀಕ್ಷಿಸಲು 90,293 ಪ್ರೇಕ್ಷಕರು ಕ್ರೀಡಾಂಗಣಕ್ಕೆ ಬಂದಿದ್ದರು, ಆ ಪಂದ್ಯವನ್ನು ಭಾರತವು ಕೊನೆಯ ಓವರ್ ನಲ್ಲಿ ನಾಲ್ಕು ವಿಕೆಟ್ಗಳಿಂದ ಗೆದ್ದಿದೆ. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನವು 20 ಓವರ್ ಗಳಲ್ಲಿ 8 ವಿಕೆಟ್ಗಳನ್ನು ಕಳೆದುಕೊಂಡು 159 ರನ್ಗಳನ್ನು ಗಳಿಸಿತ್ತು. ಬಳಿಕ ಭಾರತವು 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 160 ರನ್ಗಳನ್ನು ಗಳಿಸಿತ್ತು. ಪಂದ್ಯದಲ್ಲಿ ವಿರಾಟ್ ಕೊಹ್ಲಿ 82 ರನ್ ಗಳಿಸಿ ಅಜೇಯರಾಗಿ ಉಳಿದರು.
ಆ ಪಂದ್ಯದ ಯಶಸ್ಸನ್ನು ಕಂಡ ಬಳಿಕ, ಭಾರತ ಮತ್ತು ಪಾಕಿಸ್ತಾನಗಳ ನಡುವೆ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಇನ್ನಷ್ಟು ಪಂದ್ಯಗಳನ್ನು ನಡೆಸುವ ಇಚ್ಛೆಯನ್ನು ಮೆಲ್ಬರ್ನ್ ಕ್ರಿಕೆಟ್ ಕ್ಲಬ್ ಮತ್ತು ವಿಕ್ಟೋರಿಯ ಸರಕಾರ ವ್ಯಕ್ತಪಡಿಸಿವೆ.
ನಮಗೆ ಅವಕಾಶ ಸಿಕ್ಕಿದರೆ, ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ದ್ವಿಪಕ್ಷೀಯ ಸರಣಿಯನ್ನು ಏರ್ಪಡಿಲು ಸಂತೋಷ ಪಡುತ್ತೇವೆ ಎಂದು ಕ್ರಿಕೆಟ್ ಆಸ್ಟ್ರೇಲಿಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಕ್ ಹಾಕ್ಲಿ ಹೇಳಿದರು.