ಪುಣೆ: ಕ್ರಿಕೆಟ್​ ಆಡುವಾಗ ಮೈದಾನದಲ್ಲೇ ಕುಸಿದು ಬಿದ್ದು ಮೃತಪಟ್ಟ ಆಟಗಾರ

Update: 2024-11-29 10:54 GMT

Screengrab: X

ಪುಣೆ: ಮೈದಾನದಲ್ಲಿ ಬ್ಯಾಟಿಂಗ್ ಮಾಡುವಾಗಲೇ ಹೃದಯ ಸ್ತಂಭನಕ್ಕೀಡಾಗಿ ಕ್ರಿಕೆಟಿಗರೊಬ್ಬರು ಮೃತಪಟ್ಟಿರುವ ಘಟನೆ ಇಲ್ಲಿನ ಗರ್ವಾರೆ ಕ್ರೀಡಾಂಗಣದಲ್ಲಿ ಗುರುವಾರ ನಡೆದಿದೆ. ಮೃತ ಕ್ರಿಕೆಟಿಗನನ್ನು ಇಮ್ರಾನ್ ಪಟೇಲ್ ಎಂದು ಗುರುತಿಸಲಾಗಿದ್ದು, ಆರಂಭಿಕ ಆಟಗಾರನಾಗಿ ಮೈದಾನಕ್ಕೆ ಬರುತ್ತಿದ್ದಂತೆಯೆ ಎದೆ ಮತ್ತು ತೋಳು ನೋವಿನ ಕುರಿತು ಅವರು ಅಂಪೈರ್ ಗೆ ದೂರಿದ್ದಾರೆ. ನಂತರ ಅಂಪೈರ್ ಅನುಮತಿ ಪಡೆದು ಪೆವಿಲಿಯನ್ ಗೆ ಮರಳುವಾಗ ದಿಢೀರ್ ಎಂದು ಮೈದಾನದಲ್ಲೇ ಕುಸಿದು ಬಿದ್ದಿದ್ದಾರೆ. ಮೈದಾನದಲ್ಲಿದ್ದ ಇತರ ಆಟಗಾರರು ತಕ್ಷಣವೇ ಅವರತ್ತ ಧಾವಿಸಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಅವರು ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.

ಪಂದ್ಯದ ನೇರ ಪ್ರಸಾರ ನಡೆಯುತ್ತಿದ್ದುದರಿಂದ ಇಡೀ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ತುಂಬಾ ಆರೋಗ್ಯವಂತರಾಗಿದ್ದ, ದೈಹಿಕವಾಗಿ ಸಮರ್ಥರಾಗಿದ್ದ ಇಮ್ರಾನ್ ಪಟೇಲ್ ಹೃದಯ ಸ್ತಂಭನಕ್ಕೀಡಾಗಿ ಮೃತಪಟ್ಟಿರುವುದು ಅನೇಕರನ್ನು ಅಚ್ಚರಿಗೆ ದೂಡಿದೆ. ಆಲ್ ರೌಂಡರ್ ಆಗಿದ್ದ ಇಮ್ರಾನ್ ಪಟೇಲ್, ಪಂದ್ಯದುದ್ದಕ್ಕೂ ತೀವ್ರ ಚಟುವಟಿಕೆಯಿಂದಿದ್ದರು. 

“ಅವರಿಗೆ ಯಾವುದೇ ಅನಾರೋಗ್ಯದ ಸಮಸ್ಯೆ ಇರಲಿಲ್ಲ” ಎಂದು ಪಂದ್ಯದಲ್ಲಿ ಪಾಲ್ಗೊಂಡಿದ್ದ ಮತ್ತೊಬ್ಬ ಆಟಗಾರ ನಸೀರ್ ಖಾನ್ ಹೇಳಿದ್ದಾರೆ. “ಅವರು ತುಂಬಾ ಆರೋಗ್ಯವಾಗಿದ್ದರು. ಆಲ್ ರೌಂಡರ್ ಆಗಿದ್ದ ಅವರು, ಆಟವನ್ನು ತುಂಬಾ ಪ್ರೀತಿಸುತ್ತಿದ್ದರು. ಅವರ ದಿಢೀರ್ ಸಾವಿನಿಂದ ನಾವಿನ್ನೂ ಆಘಾತದಲ್ಲಿದ್ದೇವೆ” ಎಂದೂ ಅವರು ಹೇಳಿದ್ದಾರೆ.

ಇಮ್ರಾನ್ ಪಟೇಲ್ ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಈ ಪ್ರದೇಶದಲ್ಲಿ ಹೆಸರುವಾಸಿ ವ್ಯಕ್ತಿಯಾಗಿದ್ದ ಇಮ್ರಾನ್ ಪಟೇಲ್, ತಮ್ಮದೇ ಕ್ರಿಕೆಟ್ ತಂಡ ಹೊಂದಿದ್ದರು ಹಾಗೂ ರಿಯಲ್ ಎಸ್ಟೇಟ್ ವ್ಯವಹಾರವನ್ನೂ ಮಾಡುತ್ತಿದ್ದರು ಎನ್ನಲಾಗಿದೆ.

ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಪುಣೆಯಲ್ಲಿ ಆಟವಾಡುತ್ತಿದ್ದ ಹಬೀಬ್ ಶೇಖ್ ಎಂಬ ಕ್ರಿಕೆಟಿಗ ಕೂಡಾ ಇದೇ ರೀತಿ ಹೃದಯ ಸ್ತಂಭನಕ್ಕೀಡಾಗಿ ಮೈದಾನದಲ್ಲೇ ಮೃತಪಟ್ಟಿದ್ದರು. ಆದರೆ, ಆರೋಗ್ಯವಂತ ವ್ಯಕ್ತಿಯಾಗಿದ್ದ ಇಮ್ರಾನ್ ಪಟೇಲ್ ಗೆ ಹೋಲಿಸಿದರೆ, ಹಬೀಬ್ ಶೇಖ್ ಮಧುಮೇಹ ರೋಗಿಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News