ಮಾಡು ಮಡಿ ಪಂದ್ಯದಲ್ಲಿ 'ಹ್ಯಾಟ್ರಿಕ್' ಹ್ಯಾಟ್ರಿಕ್ ಮೇಲೆ ಕಮಿನ್ಸ್ ಕಣ್ಣು
ಹೊಸದಿಲ್ಲಿ: ಟಿ20 ವಿಶ್ವಕಪ್ ಪಂದ್ಯಾವಳಿಯ ಸೂಪರ್8 ಹಂತದ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಸೆಂಟ್ ಲೂಸಿಯಾದಲ್ಲಿ ಸೋಮವಾರ ರಾತ್ರಿ ಭಾರತದ ಸವಾಲು ಎದುರಿಸುತ್ತಿದೆ. ಆಸ್ಟ್ರೇಲಿಯಾ ಪಾಲಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ತಂಡದ ಸ್ಟಾರ್ ಬೌಲರ್ ಪ್ಯಾಟ್ ಕಮಿನ್ಸ್ ವಿಶಿಷ್ಟ ಹ್ಯಾಟ್ರಿಕ್ ಮೇಲೆ ಕಣ್ಣಿಟ್ಟಿದ್ದಾರೆ.
ವಿಶ್ವಕಪ್ ಟೂರ್ನಿಯಲ್ಲಿ ಕಮಿನ್ಸ್ ಸತತ ಎರಡು ಹ್ಯಾಟ್ರಿಕ್ ವಿಕೆಟ್ ಪಡೆದ ದಾಖಲೆಯೊಂದಿಗೆ ಭಾರತದ ವಿರುದ್ಧದ ಪಂದ್ಯಕ್ಕೆ ಸಜ್ಜಾಗಿದ್ದಾರೆ. ಸೋಮವಾರದ ಪಂದ್ಯದಲ್ಲಿ ಮೂರನೇ ಹ್ಯಾಟ್ರಿಕ್ ಸಾಧಿಸಿದಲ್ಲಿ, ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಹ್ಯಾಟ್ರಿಕ್ಗಳ ಹ್ಯಾಟ್ರಿಕ್ ಸಾಧಿಸಿದ ಮೊಟ್ಟಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಕಮಿನ್ಸ್ ಪಾತ್ರರಾಗಲಿದ್ದಾರೆ.
ಆಸ್ಟ್ರೇಲಿಯಾ ತಂಡದ ನಾಯಕರೂ ಆಗಿರುವ ಕಮಿನ್ಸ್, ಟಿ20 ವಿಶ್ವಕಪ್ ನಲ್ಲಿ ಎರಡು ಹ್ಯಾಟ್ರಿಕ್ ಗಳನ್ನು ಗಳಿಸಿರುವ ಏಕೈಕ ಬೌಲರ್. ಜತೆಗೆ ಸತತ ಎರಡು ಪಂದ್ಯಗಳಲ್ಲಿ ಹ್ಯಾಟ್ರಿಕ್ ಸಾಧಿಸಿರುವುದು ಮತ್ತೂ ವಿಶೇಷ. ಕಮಿನ್ಸ್ ಕಳೆದ ವರ್ಷ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಹಾಗೂ ಏಕದಿನ ವಿಶ್ವಕಪ್ ನಲ್ಲಿ ಜಯ ಸಾಧಿಸಿದ ಆಸ್ಟ್ರೇಲಿಯಾ ತಂಡದ ನಾಯಕರಾಗಿದ್ದಾರೆ. ಎರಡೂ ಫೈನಲ್ ಗಳಲ್ಲಿ ಆಸ್ಟ್ರೇಲಿಯಾ ತಂಡ ಭಾರತದ ವಿರುದ್ಧ ಜಯ ಸಾಧಿಸಿತ್ತು.
ಅಫ್ಘಾನಿಸ್ತಾನ ವಿರುದ್ಧದ ಸೂಪರ್8 ಹಂತದ ಪಂದ್ಯದಲ್ಲಿ ಕಮಿನ್ಸ್ ಮೂರನೇ ಓವರ್ ನ ಕೊನೆಯ ಎಸೆತದಲ್ಲಿ ರಶೀದ್ ಖಾನ್ ಅವರ ವಿಕೆಟ್ ಕಿತ್ತಿದ್ದರು. ಬಳಿಕ ಮುಂದಿನ ಓವರ್ ನ ಮೊದಲ ಎರಡು ಎಸೆತಗಳಲ್ಲಿ ಕರೀಮ್ ಜನತ್ ಮತ್ತು ಗುಲ್ಬದ್ದೀನ್ ನಯೀಯ್ ಅವರ ವಿಕೆಟ್ ಕಬಳಿಸಿದ್ದರು. ಆದರೆ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋಲು ಅನುಭವಿಸಿದ್ದು, ಅಫ್ಘಾನ್ ವಿರುದ್ಧ ಇದು ಆಸ್ಟ್ರೇಲಿಯಾ ತಂಡದ ಮೊದಲ ಸೋಲು.
ಸೂಪರ್8 ಹಂತದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಕಮಿನ್ಸ್ ಹ್ಯಾಟ್ರಿಕ್ ಸಾಧಿಸಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮೊದಲು ಬಾಂಗ್ಲಾದೇಶದ ಆಲ್ ರೌಂಡರ್ ಮೊಹ್ಮದುಲ್ಲಾ ಅವರನ್ನು 18ನೇ ಓವರ್ ನ ಕೊನೆಯ ಎಸೆತದಲ್ಲಿ ಔಟ್ ಮಾಡಿದ್ದ ಕಮಿನ್ಸ್, 20ನೇ ಓವರ್ ನ ಮೊದಲ ಎರಡು ಎಸೆತಗಳಲ್ಲಿ ಮೆಹದಿ ಹಸನ್ ಮತ್ತು ತೌಹೀದ್ ಹ್ರಿಡಾಯ್ ವಿಕೆಟ್ ಕಿತ್ತಿದ್ದರು. ಈ ಮೂಲಕ ವಿಶ್ವಕಪ್ ಟಿ20ಯಲ್ಲಿ ಹ್ಯಾಟ್ರಿಕ್ ಸಾಧಿಸಿದ ಆಸ್ಟ್ರೇಲಿಯಾದ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಬ್ರೆಟ್ ಲೀ 2007ರ ಟಿ20 ವಿಶ್ವಕಪ್ ನಲ್ಲಿ ಬಾಂಗ್ಲಾದೇಶ ವಿರುದ್ಧ ಹ್ಯಾಟ್ರಿಕ್ ಸಾಧಿಸಿದ್ದರು.