ಆಕಸ್ಮಿಕವಾಗಿ ಶಾಟ್ ಪುಟ್ ಆಟಗಾರ್ತಿಯಾದ ಸಂಚಾರಿ ಪೊಲೀಸ್ ಪುತ್ರಿ
ಲಕ್ನೋ: ಉತ್ತರ ಪ್ರದೇಶದ ಮೀರಠ್ ನ ಸಂಚಾರಿ ಪೊಲೀಸ್ ವಿಭಾಗದ ಮುಖ್ಯ ಪೇದೆಯೊಬ್ಬರ ಪುತ್ರಿ ಕಿರಣ್ ಬಲಿಯಾನ್ ಆಕಸ್ಮಿಕವಾಗಿ ಶಾಟ್ ಪುಟ್ ಪಟುವಾದವರು. ಒಂಬತ್ತು ವರ್ಷಗಳ ಹಿಂದೆ ಜ್ಯೂನಿಯರ್ ಟೂರ್ನಮೆಂಟ್ ನಲ್ಲಿ ಆಕೆಯ ಹೆಸರು ತಪ್ಪಾಗಿ ಸೇರಿಕೊಂಡಿತ್ತು.
ಶುಕ್ರವಾರ ನಡೆದ ಏಷ್ಯನ್ ಗೇಮ್ಸ್ ಶಾಟ್ ಪುಟ್ ನಲ್ಲಿ ಬಲಿಯಾನ್ ಅವರು 72 ವರ್ಷಗಳಲ್ಲೇ ಮೊಟ್ಟಮೊದಲ ಬಾರಿಗೆ ಪದಕ ಗೆದ್ದ ಭಾರತೀಯ ಮಹಿಳೆ ಎನಿಸಿಕೊಂಡರು. 24 ವರ್ಷದ ಬಲಿಯಾನ್ ತಮ್ಮ ಮೂರನೇ ಯತ್ನದಲ್ಲಿ ಈ ಕಬ್ಬಿಣದ ಗುಂಡನ್ನು 17.36 ಮೀಟರ್ ದೂರಕ್ಕೆ ಎಸೆದು ಅಥ್ಲೆಟಿಕ್ಸ್ ನಲ್ಲಿ ಮೊದಲ ದಿನವೇ ಭಾರತಕ್ಕೆ ಪದಕ ಗೆದ್ದುಕೊಟ್ಟರು.
ಇದಕ್ಕೂ ಮುನ್ನ 1951ರಲ್ಲಿ ನವದೆಹಲಿಯಲ್ಲಿ ನಡೆದ ಮೊದಲ ಏಷ್ಯನ್ ಗೇಮ್ಸ್ ನಲ್ಲಿ ಮುಂಬೈನ ಆಂಗ್ಲೋ ಇಂಡಿಯನ್ ಬರ್ಬರಾ ವೆಬ್ ಸ್ಟರ್ ಶಾಟ್ ಪುಟ್ ನಲ್ಲಿ ಕಂಚಿನ ಪದಕ ಗೆದ್ದಿದ್ದರು.
"ನಾನು ಮೀರಠ್ ನವಳು. ತಂದೆ ಸಂಚಾರಿ ಪೊಲೀಸ್ ವಿಭಾಗದ ಹೆಡ್ ಕಾನ್ ಸ್ಟೇಬಲ್. ತಾಯಿ ಗೃಹಿಣಿ. ನನಗೆ ಒಬ್ಬ ಸಹೋದರ ಇದ್ದಾನೆ. ನಾನು ಚಿಕ್ಕವಳಿದ್ದಾಗ ಯಾವ ನಿರ್ದಿಷ್ಟ ಆಟಕ್ಕೂ ಹೊಂದಿಕೊಂಡಿರಲಿಲ್ಲ. ಕೆಲ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದೆ. ಜಾವೆಲಿನ್ ಎಸೆದಿದ್ದೆ. ಆದರೆ 2014ರಲ್ಲಿ ಹುಟ್ಟೂರಿನಲ್ಲಿ ಶಾಟ್ ಪುಟ್ ಕೂಟದಲ್ಲಿ ಪಾಲ್ಗೊಳ್ಳುವುದು ಅನಿವಾರ್ಯವಾಯಿತು. ಮೀರಠ್ ನ ಡಿಪಿಎಸ್ ಶಾಲೆಯಲ್ಲಿ ನಡೆದ ಉತ್ತರ ವಲಯ ಕೂಟದಲ್ಲಿ, ಮತ್ತೊಬ್ಬ ಬಾಲಕಿಯ ಬದಲು ನನ್ನ ಹೆಸರು ತಪ್ಪಾಗಿ ಸೇರಿಕೊಂಡಿತ್ತು. ನಾನು ಭಾಗವಹಿಸಿ, ಮೂವರು ಬಾಲಕಿಯರು ಇದ್ದ ಕೂಟದಲ್ಲಿ ಮೂರನೇ ಸ್ಥಾನ ಪಡೆದೆ. ಅಲ್ಲಿಂದ ನನ್ನ ಪಯಣ ಆರಂಭವಾಯಿತು" ಎಂದು ಕಂಚಿನ ಪದಕ ಗೆದ್ದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಹೇಳಿದರು.
ಬಾಲ್ಯದ ಕೋಚ್ ರಾಬಿನ್ ಸಿಂಗ್ ಆಗಿದ್ದು, ಇದೀಗ ಪಾಟಿಯಾಲಾದ ಎನ್ಐಎಸ್ ನಲ್ಲಿ ಪ್ರಭೀರ್ ಸಿಂಗ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.
ಬಲಿಯಾನ್ ಅವರು ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್ 5 ಕೂಟದಲ್ಲಿ ಸೆಪ್ಟೆಂಬರ್ 10ರಂದು 17.92 ಮೀಟರ್ ದೂರಕ್ಕೆ ಶಾಟ್ ಪುಟ್ ಎಸೆದಿರುವುದು ವೈಯಕ್ತಿಕ ಅತ್ಯುತ್ತಮ ಸಾಧನೆಯಾಗಿದೆ.