ಧೋನಿ ಮೊಣಕಾಲು ನೋವಿನಲ್ಲೂ ಐಪಿಎಲ್ ಆಡುತ್ತಿದ್ದಾರೆಯೇ?
ಹೊಸದಿಲ್ಲಿ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರವಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಎಂ.ಎಸ್. ಧೋನಿ ಬಿರುಸಿನ ಬ್ಯಾಟಿಂಗ್ ನ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು. ಈ ವರ್ಷದ ಐಪಿಎಲ್ ನಲ್ಲಿ ಮೊದಲ ಬಾರಿ ಬ್ಯಾಟಿಂಗ್ ಗೆ ಇಳಿದಿದ್ದ ಸಿ ಎಸ್ ಕೆ ಯ ಮಾಜಿ ನಾಯಕ ಧೋನಿ ಮೊಣಕಾಲಿನ ನೋವಿನಲ್ಲೂ ಟೂರ್ನಮೆಂಟ್ ನಲ್ಲಿ ಆಡುತ್ತಿದ್ದಾರೆಯೇ ಎಂಬ ಪ್ರಶ್ನೆ ಎಲ್ಲರನ್ನು ಕಾಡಲಾರಂಭಿಸಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸಿ ಎಸ್ ಕೆ ಪೋಸ್ಟ್ ಮಾಡಿರುವ ವೀಡಿಯೊದಲ್ಲಿ ಧೋನಿ ಡ್ರೆಸ್ಸಿಂಗ್ ರೂಮಿನತ್ತ ತೆರಳುತ್ತಿದ್ದಾಗ ಕುಂಟುತ್ತಾ ನಡೆಯುತ್ತಿರುವುದು ಕಂಡುಬಂದಿದೆ. ಇದು ಅವರ ಅಭಿಮಾನಿಗಳಲ್ಲಿ ಭಾರೀ ಕಳವಳಕ್ಕೆ ಕಾರಣವಾಗಿದೆ.
42ರ ಹರೆಯದ ಧೋನಿ 2019ರಲ್ಲಿ ಕೊನೆಯ ಬಾರಿ ಭಾರತದ ಪರ ಆಡಿದ್ದರು. ಕಳೆದ ವರ್ಷ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಧೋನಿ ತನ್ನ ಗಾಯದಿಂದ ಇನ್ನಷ್ಟೇ ಸಂಪೂರ್ಣ ಚೇತರಿಸಿಕೊಳ್ಳಬೇಕಾಗಿದೆ ಎಂಬುದನ್ನು ಈ ವೀಡಿಯೊ ಬಿಂಬಿಸುತ್ತಿದೆ.
ಡೆಲ್ಲಿ ವಿರುದ್ಧ ಧೋನಿ 16 ಎಸೆತಗಳಲ್ಲಿ ಔಟಾಗದೆ 37 ರನ್ ಗಳಿಸಿದ್ದರು. ಆದರೆ ಚೆನ್ನೈ 20 ರನ್ನಿಂದ ಪ್ರಸಕ್ತ ಟೂರ್ನಿಯಲ್ಲಿ ಮೊದಲ ಸೋಲು ಕಂಡಿತು.
ಧೋನಿ 20ನೇ ಓವರ್ನಲ್ಲಿ ಒಂದೇ ಕೈಯಲ್ಲಿ ಮಿಡ್-ವಿಕೆಟ್ ನತ್ತ ಸಿಕ್ಸರ್ ಸಿಡಿಸಿ ಗಮನ ಸೆಳೆದಿದ್ದರು. ಟಿ-20 ಕ್ರಿಕೆಟ್ ನಲ್ಲಿ 7,036 ರನ್ ಗಳಿಸಿರುವ ಭಾರತದ ಮೊದಲ ವಿಕೆಟ್ ಕೀಪರ್ ಎನಿಸಿಕೊಂಡಿದ್ದಾರೆ.
ಧೋನಿ 380 ಟಿ-20 ಪಂದ್ಯಗಳಲ್ಲಿ 38.06ರ ಸರಾಸರಿಯಲ್ಲಿ 28 ಅರ್ಧಶತಕಗಳ ಸಹಿತ ಒಟ್ಟು 7,308 ರನ್ ಗಳಿಸಿದ್ದಾರೆ. ಔಟಾಗದೆ 84 ಗರಿಷ್ಠ ವೈಯಕ್ತಿಕ ಸ್ಕೋರಾಗಿದೆ.