ಸೇನೆಯೊಂದಿಗೆ ಸ್ವಲ್ಪ ಸಮಯ ಕಳೆಯಲು ಯೋಚಿಸುತ್ತಿದ್ದೇನೆ ಎಂದ ಧೋನಿ

Update: 2023-12-22 16:22 GMT

ರಾಂಚಿ: 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಮೀಪಿಸುತ್ತಿರುವಂತೆಯೇ ಎಲ್ಲರ ಕಣ್ಣುಗಳು ಮಹೇಂದ್ರ ಸಿಂಗ್ ಧೋನಿಯ ಮೇಲಿವೆ. ಭಾರತ ತಂಡದ ಮಾಜಿ ನಾಯಕ ವರ್ಷಗಳ ಹಿಂದೆಯೇ ಅಂತರ್ರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾಗಿದ್ದರೂ, ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಈಗಲೂ ಪ್ರಭಾವಿ ಆಟಗಾರ ಆಗಿದ್ದಾರೆ.

ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ 2023ರ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದೆ. ಅದು ತಂಡದ ಐದನೇ ಐಪಿಎಲ್ ಪ್ರಶಸ್ತಿಯಾಗಿದೆ.

2023ರ ಪಂದ್ಯಾವಲಿಯ ಫೈನಲ್ ಬಳಿಕ, ಐಪಿಎಲ್ ನಲ್ಲಿ ಆಡುವುದನ್ನು ಮುಂದುವರಿಸುವುದಾಗಿ ಧೋನಿ ಘೋಷಿಸಿದ್ದರು. ಅದು ಅವರ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿತ್ತು.

ಧೋನಿಗೆ ಈಗ 42 ವರ್ಷವಾಗಿದ್ದು, ಅವರ ಕ್ರಿಕೆಟ್ ಭವಿಷ್ಯದ ಬಗ್ಗೆ ಹಲವಾರು ಊಹಾಪೋಹಗಳು ಹುಟ್ಟಿಕೊಂಡಿವೆ.

ಕ್ರಿಕೆಟ್ಗೆ ಹೊರತುಪಡಿಸಿ ನಿಮ್ಮ ಇತರ ಯೋಜನೆಗಳೇನು ಎಂಬ ಪ್ರಶ್ನೆಯನ್ನು ಧೋನಿಗೆ ಕೇಳಲಾಯಿತು. ಅದಕ್ಕೆ ಅವರು ನೀಡಿರುವ ಉತ್ತರ ಕುತೂಹಲಕರವಾಗಿದೆ.

‘‘ಅದರ ಬಗ್ಗೆ ನಾನು ಯೋಚಿಸಿಯೇ ಇಲ್ಲ. ನಾನು ಈಗಲೂ ಕ್ರಿಕೆಟ್ ಆಡುತ್ತಿದ್ದೇನೆ. ಐಪಿಎಲ್ ನಲ್ಲಿ ಈಗಲೂ ಆಡುತ್ತಿದ್ದೇನೆ. ಕ್ರಿಕೆಟ್ ಬಳಿಕ ನಾನು ಏನು ಮಾಡುತ್ತೇನೆ ಎನ್ನುವುದು ಕುತೂಹಲಕರ ವಿಷಯವಾಗಿದೆ. ಸ್ವಲ್ಪ ಸಮಯವನ್ನು ಸೇನೆಯೊಂದಿಗೆ ಕಳೆಯಬೇಕೆಂದು ನಾನು ಯೋಚಿಸುತ್ತಿದ್ದೇನೆ. ಕಳೆದ ಕೆಲವು ವರ್ಷಗಳಲ್ಲಿ ಹಾಗೆ ಮಾಡಲು ನನಗೆ ಸಾಧ್ಯವಾಗಿರಲಿಲ್ಲ’’ ಎಂದು ಧೋನಿ ಹೇಳಿದ್ದಾರೆ.

ಅವರ ಈ ವೀಡಿಯೊ ವೈರಲ್ ಆಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News