ಧೋನಿ ಸಿಎಸ್ ಕೆ ನಾಯಕತ್ವದಿಂದ ಕೆಳಗಿಳಿಯುವುದು ಅನಿವಾರ್ಯವಾಗಿತ್ತು: ಆರ್.ಅಶ್ವಿನ್

Update: 2024-03-22 14:31 GMT

 ಎಂ.ಎಸ್. ಧೋನಿ | Photo: PTI 

ಹೊಸದಿಲ್ಲಿ: ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಋತುರಾಜ್ ಗಾಯಕ್ವಾಡ್ ನಾಯಕನಾಗಿ ಆಯ್ಕೆಯಾಗಿರುವುದು ಆತುರದ ನಿರ್ಧಾರ ಆಗಿರಲಿಲ್ಲ. ಸಿಎಸ್ ಕೆ ನಾಯಕತ್ವದಿಂದ ಕೆಳಗಿಳಿಯುವುದು ಎಂ.ಎಸ್. ಧೋನಿಗೆ ಅನಿವಾರ್ಯವಾಗಿತ್ತು ಎಂದು ಭಾರತದ ಹಿರಿಯ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಪ್ರತಿಪಾದಿಸಿದ್ದಾರೆ.

ನಾಯಕತ್ವ ಹಸ್ತಾಂತರಿಸುವ ಕುರಿತು ಕ್ರಿಕೆಟ್ ದಂತಕತೆ ಧೋನಿ ಅವರು ಬಹಳ ಹಿಂದೆಯೇ ಗಾಯಕ್ವಾಡ್ರೊಂದಿಗೆ ಚರ್ಚಿಸಿರುವ ಸಾಧ್ಯತೆಯಿದೆ ಎಂದರು.

2024ರ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೆ ಒಂದು ದಿನ ಮುಂಚಿತವಾಗಿ ಗುರುವಾರ ಗಾಯಕ್ವಾಡ್ ಅವರು ಸಿಎಸ್ ಕೆ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಮಹತ್ವದ ಘೋಷಣೆ ಮಾಡಲಾಗಿತ್ತು.

2022ರ ಆವೃತ್ತಿಯಲ್ಲೂ ಚೆನ್ನೈ ನಾಯಕತ್ವ ಬದಲಾಯಿಸುವ ಯತ್ನ ನಡೆಸಲಾಗಿತ್ತು. ರವೀಂದ್ರ ಜಡೇಜಗೆ ಚೆನ್ನೈ ತಂಡದ ನಾಯಕತ್ವ ನೀಡಲಾಗಿತ್ತು. ಆದರೆ 8 ಪಂದ್ಯಗಳ ನಂತರ ಧೋನಿ ಮತ್ತೊಮ್ಮೆ ಸಿಎಸ್ ಕೆ ನಾಯಕತ್ವವಹಿಸಿಕೊಂಡಿದ್ದರು.

ಸಿಎಸ್ ಕೆ ಈ ಹಿಂದೆ ಹಲವು ಬಾರಿ ನಾಯಕತ್ವ ಬದಲಾಯಿಸಲು ಪ್ರಯತ್ನಿಸಿರುವುದನ್ನು ಪರಿಗಣಿಸಿದರೆ ಗಾಯಕ್ವಾಡ್ ರನ್ನು ನಾಯಕರನ್ನಾಗಿ ನೇಮಿಸಿರುವ ನಿರ್ಧಾರ ಆಶ್ಚರ್ಯಕರವಾಗಿಲ್ಲ ಎಂದು ಅಶ್ವಿನ್ ಅಭಿಪ್ರಾಯಪಟ್ಟರು.

ಈ ನಿರ್ಧಾರವು ಅನಿವಾರ್ಯವಾಗಿತ್ತು. ಎಂ.ಎಸ್.ಧೋನಿಯ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಅವರು ತಂಡವನ್ನು ಮುಂಚೂಣಿಯಲ್ಲಿ ಇರಿಸುತ್ತಾರೆ. ತಂಡದ ಯೋಗಕ್ಷೇಮದ ಬಗ್ಗೆ ಯೋಚಿಸುತ್ತಾರೆ. ಆದ್ದರಿಂದ ಅವರು ಎರಡು ವರ್ಷಗಳ ಹಿಂದೆ ಜಡೇಜಗೆ ನಾಯಕನ ಪಟ್ಟ ಬಿಟ್ಟುಕೊಟ್ಟಿದ್ದರು. ಇದೀಗ ಋತುರಾಜ್ ಗೆ ನಾಯಕತ್ವ ಹೊಣೆ ಹಸ್ತಾಂತರಿಸಿದ್ದಾರೆ. ಈ ಬಾರಿ ತನಗೆ ಬ್ಯಾಟಿಂಗ್ ನ ಜೊತೆಗೆ ನಾಯಕತ್ವದ ಹೊಣೆ ಸಿಗಲಿದೆ ಎಂದು ಗಾಯಕ್ವಾಡ್ ಗೆ ಮೊದಲೇ ತಿಳಿದಿತ್ತು. ಕಳೆದ ವರ್ಷವೇ ಧೋನಿ ಈ ವಿಚಾರದ ಕುರಿತು ಋತುರಾಜ್ಗೆ ಹೇಳಿರಬೇಕು ಎಂದು ಅಶ್ವಿನ್ ಹೇಳಿದ್ದಾರೆ.

ಅಧಿಕೃತವಾಗಿ ಸಿಎಸ್ ಕೆ ನಾಯಕ ಎಂದು ಹೆಸರಿಸಲ್ಪಟ್ಟ ನಂತರ ಮಾತನಾಡಿದ ಗಾಯಕ್ವಾಡ್, ಹಿಂದಿನ ಋತುವಿನಲ್ಲಿ ತಂಡದ ನಾಯಕತ್ವದ ಬದಲಾವಣೆಯ ಬಗ್ಗೆ ಧೋನಿ ಸೂಕ್ಷ್ಮವಾಗಿ ಸುಳಿವು ನೀಡಿದ್ದರು ಎಂದು ಬಹಿರಂಗಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News