ಧೋನಿಯ ಮಾಜಿ ವ್ಯಾಪಾರ ಪಾಲುದಾರನ ಬಂಧನ
ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಮ್.ಎಸ್. ಧೋನಿಯ ಮಾಜಿ ವ್ಯಾಪಾರ ಪಾಲುದಾರ ಮಿಹಿರ್ ದಿವಾಕರ್ ಎಂಬವರನ್ನು ವಂಚನೆಯ ಆರೋಪದಲ್ಲಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಸ್ವತಃ ಧೋನಿ ಸಲ್ಲಿಸಿದ ಕ್ರಿಮಿನಲ್ ಮೊಕದ್ದಮೆಯ ಆಧಾರದಲ್ಲಿ ಜೈಪುರ ಪೊಲೀಸರು ಅವರ ಮಾಜಿ ವ್ಯಾಪಾರ ಪಾಲುದಾರನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಧೋನಿ ರಾಂಚಿ ಜಿಲ್ಲಾ ನ್ಯಾಯಾಲಯದಲ್ಲಿ ದಿವಾಕರ್ ಮತ್ತು ಸೌಮ್ಯ ದಾಸ್ ಎಂಬವರ ವಿರುದ್ಧ ಮೊಕದ್ದಮೆ ದಾಖಲಿಸಿದ್ದರು. ಕ್ರಿಕೆಟ್ ಅಕಾಡೆಮಿಗಳನ್ನು ಸ್ಥಾಪಿಸುವುದಕ್ಕಾಗಿ ಧೋನಿಯ ಹೆಸರನ್ನು ಅನಧಿಕೃತವಾಗಿ ಬಳಸಿದ ಆರೋಪದಲ್ಲಿ ಆರ್ಕಾ ಸ್ಪೋಟ್ರ್ಸ್ ಮ್ಯಾನೇಜ್‍ಮೆಂಟ್ ಪ್ರೈವೇಟ್ ಲಿಮಿಟೆಡ್‍ನ ನಿರ್ದೇಶಕರಾಗಿರುವ ದಿವಾಕರ್‍ರನ್ನು ಪೊಲೀಸರು ಬಂಧಿಸಿದ್ದಾರೆ.
ಕ್ರಿಕೆಟ್ ಅಕಾಡೆಮಿಗಳನ್ನು ಸ್ಥಾಪಿಸುವುದಕ್ಕೆ ನೀಡಲಾಗಿರುವ ಅಧಿಕಾರವನ್ನು ಧೋನಿ ವಾಪಸ್ ಪಡೆದ ಬಳಿಕವೂ, ಅವರ ಹೆಸರನ್ನು ಬಳಸಿ ದಿವಾಕರ್ ಭಾರತ ಮತ್ತು ವಿದೇಶಗಳಲ್ಲಿ ಹಲವು ಅಕಾಡೆಮಿಗಳನ್ನು ಆರಂಭಿಸಿದ್ದಾರೆ ಎಂದು ಆರೋಪಿಸಲಾಗಿದೆ.
“ಎಮ್.ಎಸ್. ಧೋನಿ ಕ್ರಿಕೆಟ್ ಆ್ಯಂಡ್ ಸ್ಪೋಟ್ರ್ಸ್ ಅಕಾಡೆಮಿ’’ಗಳಿಗಾಗಿ 15 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಸಂಗ್ರಹಿಸಿ ವಂಚಿಸಿದ್ದಾರೆ ಎಂಬ ಆರೋಪವನ್ನೂ ದಿವಾಕರ್ ಎದುರಿಸುತ್ತಿದ್ದಾರೆ.
ಆರ್ಕಾ ಸ್ಪೋಟ್ರ್ಸ್ ಫ್ರಾಂಚೈಸ್ ಶುಲ್ಕವನ್ನು ಕೊಡಬೇಕಾಗಿತ್ತು ಮತ್ತು ಒಪ್ಪಂದದಲ್ಲಿ ನಮೂದಿಸಲಾಗಿರುವ ಅನುಪಾತದಲ್ಲಿ ಲಾಭವನ್ನು ಹಂಚಬೇಕಾಗಿತ್ತು. ಆದರೆ, ಎಲ್ಲಾ ಶರತ್ತುಗಳನ್ನು ಉಲ್ಲಂಘಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ನನ್ನ ಪಾಲುದಾರರು ನನ್ನ ಗಮನಕ್ಕೆ ತಾರದೆಯೇ ಕ್ರಿಕೆಟ್ ಅಕಾಡೆಮಿಗಳನ್ನು ಸ್ಥಾಪಿಸಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಆರೋಪಿಸಿದ್ದಾರೆ. ಕ್ರಿಕೆಟ್ ಅಕಾಡೆಮಿಗಳನ್ನು ಸ್ಥಾಪಿಸಲು ಪಾಲುದಾರರಿಗೆ ಧೋನಿ ನೀಡಿದ್ದ ಅನುಮತಿ ಪತ್ರವನ್ನು 2021 ಆಗಸ್ಟ್ 15ರಂದು ವಾಪಸ್ ಪಡೆಯಲಾಗಿತ್ತು.
ಅನುಮತಿ ಪತ್ರವನ್ನು ವಾಪಸ್ ಪಡೆದ ಹೊರತಾಗಿಯೂ, ಪಾಲುದಾರರು ಧೋನಿಯ ಗಮನಕ್ಕೆ ತಾರದೆ ಮತ್ತು ಅವರಿಗೆ ಯಾವುದೇ ಹಣವನ್ನು ನೀಡದೆ ಅವರ ಹೆಸರಿನಲ್ಲಿ ಕ್ರಿಕೆಟ್ ಅಕಾಡೆಮಿಗಳು ಮತ್ತು ಕ್ರೀಡಾ ಸಂಕೀರ್ಣಗಳ ಸ್ಥಾಪನೆಯನ್ನು ಮುಂದುವರಿಸಿದ್ದರು ಎಂದು ಧೋನಿ ಆರೋಪಿಸಿದ್ದಾರೆ.