ಹಿನ್ನಡೆಯಿಂದ ಚೇತರಿಸಿಕೊಂಡ ಛೋಪ್ರಾಗೆ 3ನೇ ಡೈಮಂಡ್ ಲೀಗ್ ಪ್ರಶಸ್ತಿ

Update: 2023-07-01 03:09 GMT

ಫೋಟೋ: twitter.com/NikhilNaz


ಹೊಸದಿಲ್ಲಿ: ಡೈಮಂಡ್ ಲೀಗ್ನ ದೋಹಾ ಆವೃತ್ತಿಯಲ್ಲಿ ಚೇತೋಹಾರಿ ಪ್ರದರ್ಶನದೊಂದಿಗೆ ಪ್ರಸಕ್ತ ಋತುವನ್ನು ಆರಂಭಿಸಿದ ಒಲಿಂಪಿಕ್ ಚಾಂಪಿಯನ್ ನೀರಜ್ ಛೋಪ್ರಾ ಲೂಸೆನ್ನಲ್ಲಿ ನಡೆದ ಜಾವೆಲಿನ್ ಥ್ರೋ ಚಾಂಪಿಯನ್ಶಿಪ್ನಲ್ಲಿ ಅಗ್ರ ಸ್ಥಾನಿಯಾದರು. ತಮ್ಮ ಐದನೇ ಪ್ರಯತ್ನದಲ್ಲಿ 87.66 ಮೀಟರ್ ಜಾವೆಲಿನ್ ಎಸೆದ ಪ್ರತಿಭಾವಂತ ಜಾವೆಲಿನ್ ಪಟು, ತಮ್ಮ ವೃತ್ತಿಜೀವನದಲ್ಲಿ ಮೂರನೇ ಡೈಮಂಡ್ ಲೀಗ್ ಪ್ರಶಸ್ತಿ ಗೆದ್ದರು. ಕಳೆದ ವರ್ಷ ಇದೇ ನಗರದಲ್ಲಿ ಛೋಪ್ರಾ ತಮ್ಮ ಮೊದಲ ಡೈಮಂಡ್ ಲೀಗ್ ಪ್ರಶಸ್ತಿ ಗೆದ್ದಿದ್ದರು.

ಇನ್ನೊಂದೆಡೆ ಪ್ಯಾರೀಸ್ನಲ್ಲಿ 8.09 ಮೀಟರ್ ಜಿಗಿತದ ಮೂಲಕ ಮೂರನೇ ಸ್ಥಾನ ಗೆದ್ದಿದ್ದ ಲಾಂಗ್ಜಪ್ ಪಟು ಮರಳಿ ಶ್ರೀಶಂಕರ್ ಈ ಪ್ರದರ್ಶನ ಮರುಕಳಿಸುವಲ್ಲಿ ವಿಫಲರಾಗಿ 7.88 ಮೀಟರ್ಗಳೊಂದಿಗೆ ಐದನೇ ಸ್ಥಾನಕ್ಕೆ ತಳ್ಳಲ್ಪಟ್ಟರು.

ಮೊದಲ ಥ್ರೋನಲ್ಲಿ ತಪ್ಪು ಎಸಗಿದ ಛೋಪ್ರಾ ಅಥ್ಲೆಟಿಕ್ ಪ್ರಿಯರಿಗೆ ನಿರಾಸೆ ಮೂಡಿಸಿದರು. ಎರಡನೇ ಪ್ರಯತ್ನದಲ್ಲಿ 83.62 ಮೀಟರ್ ದೂರಕ್ಕೆ ಜಾವೆಲಿನ್ ಎಸೆದರು. ಇದರ ಪರಿಣಾಮವಾಗಿ ಎರಡನೇ ಸುತ್ತಿನ ಅಂತ್ಯದ ವೇಳೆಗೆ ಜುಲಿಯನ್ ವೆಬೆರ್ (86.20) ಮತ್ತು ಜಾಕೂಬ್ ವದ್ಲೇಚ್ (94.71 ಮೀಟರ್) ಅವರ ಬಳಿಕ ಮೂರನೇ ಸ್ಥಾನದಲ್ಲಿ ಉಳಿದರು.

ಮೂರನೇ ಥ್ರೋನಲ್ಲಿ 85.04 ಮೀಟರ್ನೊಂದಿಗೆ ಭಾರತದ ತಾರೆ ಎರಡನೇ ಸ್ಥಾನಕ್ಕೆ ನೆಗೆದರು. ಆದರೆ ವೆಬೆರ್ ತಮ್ಮ ಪ್ರದರ್ಶನವನ್ನು ಉತ್ತಮಪಡಿಸಿಕೊಳ್ಳಲು ವಿಫಲರಾಗುವ ಮೂಲಕ ಅಗ್ರಸ್ಥಾನಕ್ಕೆ ಏರಿದರು. ಆದರೆ ಐದನೇ ಪ್ರಯತ್ನದಲ್ಲಿ 87.6 ಮೀಟರ್ನೊಂದಿಗೆ ತಮ್ಮ ಸ್ಥಾನ ಭದ್ರಪಡಿಸಿಕೊಂಡರು. ಅಂತಿಮ ಪ್ರಯತ್ನದಲ್ಲಿ ವೆಬೆರ್ 87.03 ಮೀಟರ್ಗೆ ತಮ್ಮ ಸಾಧನೆ ಸುಧಾರಿಸಿಕೊಂಡರೂ, ಛೋಪ್ರಾಗೆ ಸವಾಲಾಗಲಿಲ್ಲ. 2020ರ ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ವದ್ಲೇಚ್ ತಮ್ಮ ಆರನೇ ಪ್ರಯತ್ನದಲ್ಲಿ 86.13 ಮೀಟರ್ ಎಸೆದು ಕಂಚಿಗೆ ತೃಪ್ತಿಪಟ್ಟುಕೊಂಡರು.

ಡೈಮಂಡ್ ಲೀಗ್ನ ಮೊನಾಕೊ ಮತ್ತು ಝೂರಿಚ್ ಆವೃತ್ತಿಗಳು ಜುಲೈ 21 ಹಾಗೂ ಆಗಸ್ಟ್ 31ರಂದು ನಡೆಯಲಿದ್ದು, ಅಂತಿಮ ಹಂತದ ಡೈಮಂಡ್ ಲೀಗ್ ಗ್ರ್ಯಾಂಡ್ ಫಿನಾಲೆ ಸೆಪ್ಟೆಂಬರ್ 16-17ರಂದು ಅಮೆರಿಕದ ಯುಜೀನ್ನಲ್ಲಿ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News