ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ದಿನೇಶ್ ಕಾರ್ತಿಕ್
ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ತಂಡದ ಆಟಗಾರ ದಿನೇಶ್ ಕಾರ್ತಿಕ್, ತಮ್ಮ 39ನೇ ಜನ್ಮದಿನದಂದು ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತನಾಗಲಿದ್ದೇನೆ ಎಂದು ಶನಿವಾರ ಪ್ರಕಟಿಸಿದ್ದಾರೆ. ವಿಕೆಟ್ ಕೀಪರ್ ಬ್ಯಾಟರ್ ಆದ ಅವರು, ಎರಡು ದಶಕಗಳಿಂದ ದೇಶಕ್ಕಾಗಿ ಆಟವಾಡಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ ಕ್ರೀಡಾಕೂಟದಲ್ಲಿ ರಾಯಲ್ಸ್ ಚಾಲೆಂಜರ್ಸ್ ತಂಡದ ಪರ ಆಡಿದ ಪಂದ್ಯವೇ ಅಂತಿಮ ಎಂದು ಹೇಳಲಾಗಿತ್ತಾದರೂ, ಈ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಲು ತಮ್ಮ 39ನೇ ಜನ್ಮದಿನವನ್ನು ಅವರು ಆಯ್ದುಕೊಂಡಿದ್ದಾರೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ದಿನೇಶ್ ಕಾರ್ತಿಕ್, "ಸಾಕಷ್ಟು ಯೋಚನೆ ಮಾಡಿದ ನಂತರ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವಾಗಲು ನಾನು ನಿರ್ಧರಿಸಿದ್ದೇನೆ. ನಾನು ನನ್ನ ನಿವೃತ್ತಿಯ ಅಧಿಕೃತ ನಿರ್ಧಾರವನ್ನು ನನ್ನ ಜನ್ಮದಿನದಂದು ಪ್ರಕಟಿಸುವ ಮೂಲಕ ನನ್ನ ವೃತ್ತಿ ಜೀವನಕ್ಕೆ ವಿದಾಯ ಹೇಳಲಿದ್ದೇನೆ. ನನ್ನ ಎದುರಿಗೆ ಹೊಸ ಸವಾಲುಗಳಿರುವುದರಿಂದ ಈ ನಿರ್ಧಾರ ಕೈಗೊಂಡಿದ್ದೇನೆ" ಎಂದು ಬರೆದುಕೊಂಡಿದ್ದಾರೆ.
ದಿನೇಶ್ ಕಾರ್ತಿಕ್ 2004ರಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. 2022ರ ಟಿ-20 ವಿಶ್ವಕಪ್‌ನಲ್ಲಿ ರೋಹಿತ್ ಶರ್ಮ ನಾಯಕತ್ವದಲ್ಲಿ ಅವರು ಭಾರತ ತಂಡದ ಪರ ತಮ್ಮ ಕೊನೆಯ ಪಂದ್ಯವಾಡಿದ್ದರು.
ಎಲ್ಲ ಮಾದರಿಯ ಕ್ರಿಕೆಟ್‌ನ 180 ಪಂದ್ಯಗಳನ್ನಾಡಿರುವ ದಿನೇಶ್ ಕಾರ್ತಿಕ್, ಒಟ್ಟು 3463 ರನ್ ಗಳಿಸಿದ್ದಾರೆ. ಈ ಪೈಕಿ ಒಂದು ಟೆಸ್ಟ್ ಶತಕ ಹಾಗೂ 17 ಅರ್ಧ ಶತಕಗಳನ್ನು ಗಳಿಸಿದ್ದಾರೆ.