ಕಿವೀಸ್ ವಿರುದ್ಧ ಟೆಸ್ಟ್ ಸರಣಿ ಸೋಲಿಗೆ ಹಿರಿಯ ಆಟಗಾರರು ಹೊಣೆ ಹೊರಬೇಕು : ದಿನೇಶ್ ಕಾರ್ತಿಕ್

Update: 2024-10-27 17:16 GMT

PC : @DineshKarthik

ಹೊಸದಿಲ್ಲಿ : ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡದ ವಿರುದ್ಧ ಸರಣಿ ಸೋಲಿನ ಹೊಣೆಯನ್ನು ಅನುಭವಿ ಆಟಗಾರರೇ ತೆಗೆದುಕೊಳ್ಳಬೇಕು. ಮುಖ್ಯ ಕೋಚ್ ಗೌತಮ್ ಗಂಭೀರ್ ಅವರನ್ನು ದೂಷಿಸುವುದರಲ್ಲಿ ಅರ್ಥವಿಲ್ಲ ಎಂದು ಮಾಜಿ ಕ್ರಿಕೆಟಿಗರಾದ ದಿನೇಶ್ ಕಾರ್ತಿಕ್ ಹಾಗೂ ಸಂಜಯ್ ಮಾಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.

ಪುಣೆಯಲ್ಲಿ ಶನಿವಾರ ಕೊನೆಗೊಂಡಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು 113 ರನ್ ಗಳಿಂದ ಸೋತಿತ್ತು. 3 ಪಂದ್ಯಗಳ ಸರಣಿಯಲ್ಲಿ ನ್ಯೂಝಿಲ್ಯಾಂಡ್ ತಂಡವು 2-0 ಅಂತರದಿಂದ ಮುನ್ನಡೆ ಪಡೆಯಿತು. ತವರಿನಲ್ಲಿ ಸತತ 18 ಟೆಸ್ಟ್ ಸರಣಿಗಳನ್ನು ಗೆದ್ದಿದ್ದ ಭಾರತದ ಅಜೇಯ ಓಟಕ್ಕೂ ತಡೆ ಬಿದ್ದಿತ್ತು.

ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜ ಅವರು ಈ ಸರಣಿಯ ಎರಡೂ ಪಂದ್ಯಗಳಲ್ಲಿ ರನ್ ಗಳಿಸಲು ಪರದಾಡಿದ್ದರು.

ಸೀನಿಯರ್ ಆಟಗಾರರು ತಾವು ಮಾಡಿರುವ ಸಾಧನೆ ಏನು ಎಂಬುದನ್ನು ಪ್ರಶ್ನಿಸಿಕೊಳ್ಳಬೇಕು. ಈ ಹೊಣೆಯಿಂದ ಅವರು ನುಣುಚಿಕೊಳ್ಳಲು ಸಾಧ್ಯವಿಲ್ಲ. ತಂಡ ಗೆದ್ದಾಗ ಅಭಿಮಾನಿಗಳು ಸಂಭ್ರಮಿಸುತ್ತಾರೆ. ಆಗ ನೀವು ಕೂಡ ಸಡಗರಪಡುತ್ತೀರಿ. ಸೋತಾಗ ಅಭಿಮಾನಿಗಳು ಟೀಕಿಸುತ್ತಾರೆ. ಅವುಗಳನ್ನು ಎದುರಿಸುವ ಧೈರ್ಯವನ್ನು ಸೀನಿಯರ್ಸ್ ತೋರಿಸಬೇಕಾಗಿತ್ತು. ಹೀಗಾಗಿ ಸೀನಿಯರ್ ಆಟಗಾರರೇ ಸೋಲಿನ ಹೊಣೆ ಹೊರಬೇಕು ಎಂದು ಕ್ರಿಕ್‌ ಬಝ್ ಕಾರ್ಯಕ್ರಮದಲ್ಲಿ ಕಾರ್ತಿಕ್ ಹೇಳಿದ್ದಾರೆ.

ಮುಖ್ಯ ಕೋಚ್ ಗಂಭೀರ್ ಅವರು ಕುರಿತು ಟೀಕೆಗಳು ಬಹಳಷ್ಟು ಕೇಳಿಬರುತ್ತಿವೆ. ಈ ಸೋಲಿನಲ್ಲಿ ಗಂಭೀರ್ ಅವರ ಪಾತ್ರ ಚಿಕ್ಕದು. ಆದರೆ ವಾಶಿಂಗ್ಟನ್ ಸುಂದರ್‌ ರನ್ನು ಅಂತಿಮ-11ರಲ್ಲಿ ಆಯ್ಕೆ ಮಾಡಿ ಕಣಕ್ಕಿಳಿಸುವ ಗಂಭೀರ್ ಕ್ರಮ ಶ್ಲಾಘಿಸಬೇಕು. ಸುಂದರ್ ಉತ್ತಮವಾಗಿ ಬೌಲಿಂಗ್ ಮಾಡಿದ್ದಾರೆ. ಆದರೆ ಸರ್ಫರಾಝ್ ಖಾನ್‌ ಗಿಂತ ಮೊದಲು ಸುಂದರ್‌ರನ್ನು ಬ್ಯಾಟಿಂಗ್‌ಗೆ ಕಳಿಸಿದ್ದು ಯಾಕೆ? ಅವರು ಎಡಗೈ ಬ್ಯಾಟರ್ ಎಂಬ ಕಾರಣಕ್ಕಾಗಿಯೇ? ಇಂತಹ ಯೋಚನೆಯೇ ವಿಚಿತ್ರ. ಈ ವಿಷಯದಲ್ಲಿ ನಾಯಕ ರೋಹಿತ್ ಶರ್ಮಾ ಜಾಗರೂಕರಾಗಿರಬೇಕು. ಬ್ಯಾಟರ್‌ ಗಳ ಸಾಮರ್ಥ್ಯದ ಮೇಲೆ ಕ್ರಮಾಂಕ ನಿರ್ಧರಿಸಬೇಕು ಎಂದು ಇ ಎಸ್‌ ಪಿ ಎನ್‌ ಕ್ರಿಕ್‌ ಇನ್ಫೋಗೆ ಮಾಂಜ್ರೇಕರ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News