ಏಶ್ಯನ್ ಗೇಮ್ಸ್ ನಲ್ಲಿ ಮುಂದುವರಿದ ಅತ್ಲೀಟ್ ಗಳ ಪಾರಮ್ಯ

Update: 2023-10-03 18:07 GMT

Photo : PTI

ಏಶ್ಯನ್ ಗೇಮ್ಸ್ ನಲ್ಲಿ 9ನೇ ದಿನವಾದ ಮಂಗಳವಾರ ಅತ್ಲೀಟ್ ಗಳು ಪಾರಮ್ಯ ಮುಂದುವರಿಸಿದ್ದು, ಫೀಲ್ಡ್ ಹಾಗೂ ಟ್ರ್ಯಾಕ್ ನಲ್ಲಿ ಭಾರತವು ಆರು ಪದಕಗಳನ್ನು ಗೆದ್ದುಕೊಂಡಿದೆ. ಭಾರತೀಯರು ಒಂದೇ ದಿನ 9 ಪದಕಗಳನ್ನು ಜಯಿಸಿ ಪದಕ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಪಾರುಲ್ ಚೌಧರಿ(5000 ಮೀ ಓಟ) ಹಾಗೂ ಅನ್ನು ರಾಣಿ (ಜಾವೆಲಿನ್ ಎಸೆತ) ಚಿನ್ನದ ಪದಕ ಗೆದ್ದುಕೊಟ್ಟರು. ಪುರುಷರ ಡೆಕಾತ್ಲಾನ್ ನಲ್ಲಿ ತೇಜಸ್ವಿನ್ ಶಂಕರ್, ಪುರುಷರ 800 ಮೀ. ಓಟದಲ್ಲಿ ಮುಹಮ್ಮದ್ ಅಫ್ಸಲ್ ಬೆಳ್ಳಿ ಪದಕ ಗೆದ್ದುಕೊಂಡರು. ಮಹಿಳೆಯರ 400 ಮೀ.ಹರ್ಡಲ್ಸ್ ನಲ್ಲಿ ವಿದ್ಯಾ ರಾಮರಾಜ್, ಪುರುಷರ ಟ್ರಿಪಲ್ ಜಂಪ್ ನಲ್ಲಿ ಪ್ರವೀಣ್ ಚಿತ್ರವೇಲ್ ಕಂಚಿನ ಪದಕ ಜಯಿಸಿದರು. ಸ್ಕ್ವಾಷ್ ಸ್ಪರ್ಧೆಯಲ್ಲಿ ಭಾರತವು ಮೂರು ಪದಕಗಳನ್ನು ದೃಢಪಡಿಸಿದೆ. ಸೌರವ್ ಘೋಷಾಲ್(ಪುರುಷರ ಸಿಂಗಲ್ಸ್), ದೀಪಿಕಾ ಪಲ್ಲಿಕಲ್,ಹರಿಂದರ್ಪಾಲ್ ಸಿಂಗ್(ಮಿಕ್ಸೆಡ್ ಡಬಲ್ಸ್) , ಅಭಯ್ ಸಿಂಗ್ ಹಾಗೂ ಅನಾಹತ್ ಸಿಂಗ್(ಮಿಕ್ಸೆಡ್ ಡಬಲ್ಸ್)ಸ್ಕ್ವಾಷ್ನಲ್ಲಿ ಪದಕಗಳನ್ನು ಖಚಿತಪಡಿಸಿದ್ದಾರೆ. ಮಂಗಳವಾರ ಆರ್ಚರ್ಗಳು ಹಾಗೂ ಬಾಕ್ಸರ್ಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ಭಾರತ 100 ಪದಕ ಗೆಲ್ಲುವ ವಿಶ್ವಾಸ ಮೂಡಿಸಿದ್ದಾರೆ. ಬಾಕ್ಸಿಂಗ್ ನಲ್ಲಿ ಲವ್ಲೀನಾ ಬೊರ್ಗೊಹೈನ್ ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿದ್ದಾರೆ. ಪ್ರೀತಿ ಕಂಚಿನ ಪದಕ ಜಯಿಸಿದರು. ಭಾರತೀಯ ಆರ್ಚರ್ಗಳು ಕಾಂಪೌಂಡ್ ಸ್ಪರ್ಧೆಗಳಲ್ಲಿ ಕನಿಷ್ಠ 3 ಪದಕಗಳನ್ನು ಖಾತ್ರಿಪಡಿಸಿದ್ದಾರೆ. ಓಜಾಸ್ ಪ್ರವೀಣ್ ಹಾಗೂ ಅಭಿಷೇಕ್ ವರ್ಮಾ ಪುರುಷರ ಕಾಂಪೌಂಡ್ ವೈಯಕ್ತಿಕ ಸ್ಪರ್ಧೆಯಲ್ಲಿ ಫೈನಲ್ಗೆ ತಲುಪಿದ್ದು ಏಶ್ಯನ್ ಗೇಮ್ಸ್ ನಲ್ಲಿ ಆರ್ಚರಿಯಲ್ಲಿ ಭಾರತ ಮೊತ್ತ ಮೊದಲ ಬಾರಿ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆಲ್ಲುವುದು ಬಹುತೇಕ ಖಚಿತ. ಜ್ಯೋತಿ ಸುರೇಖಾ ಮಹಿಳೆಯರ ಕಾಂಪೌಂಡ್ ವೈಯಕ್ತಿಕ ಆರ್ಚರಿ ಸ್ಪರ್ಧೆಯಲ್ಲಿ ಫೈನಲ್ ತಲುಪಿದ್ದಾರೆ. ಅರ್ಜುನ್ ಸಿಂಗ್ ಹಾಗೂ ಸುನೀಲ್ ಸಿಂಗ್ ಪುರುಷರ ಕಾನೊ ಡಬಲ್ಸ್ 1000 ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದಾರೆ.

ಬಾಕ್ಸಿಂಗ್: ಪ್ರೀತಿ ಪವಾರ್ ಗೆ ಕಂಚು, ಒಲಿಂಪಿಕ್ಸ್ ಟಿಕೆಟ್ ಪಡೆದ ಲವ್ಲೀನಾ ಬೊರ್ಗೊಹೈನ್ 

ಹಾಂಗ್ ಝೌ : ಏಶ್ಯನ್ ಗೇಮ್ಸ್ ನಲ್ಲಿ ಮಂಗಳವಾರ ಫೈನಲ್ ಗೆ ಲಗ್ಗೆ ಇಟ್ಟಿರುವ ವಿಶ್ವ ಚಾಂಪಿಯನ್ ಲವ್ಲೀನಾ ಬೊರ್ಗೊಹೈನ್ ಪ್ಯಾರಿಸ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದಾರೆ. ಇದೇ ವೇಳೆ ಭಾರತದ ಯುವ ಬಾಕ್ಸರ್ ಪ್ರೀತಿ ಪವಾರ್(54 ಕೆಜಿ)ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡರು.

ಟೋಕಿಯೊ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕವನ್ನು ಜಯಿಸಿರುವ ಬೊರ್ಗೊಹೈನ್ 75 ಕೆಜಿ ವಿಭಾಗದಲ್ಲಿ ಥಾಯ್ಲೆಂಡಿನ ಏಶ್ಯನ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ವಿಜೇತೆ ಬೈಸನ್ ಮನಿಕಾನ್ರನ್ನು ಸೋಲಿಸಿದರು. ಒಮ್ಮತದ ತೀರ್ಪಿನಲ್ಲಿ ಗೆಲುವು ದಾಖಲಿಸಿದ ಬೊರ್ಗೊಹೈನ್ ಮುಂಬರುವ ಪ್ಯಾರಿಸ್ ಗೇಮ್ಸ್ ನಲ್ಲಿ ತನ್ನ ಸ್ಥಾನ ಗಿಟ್ಟಿಸಿಕೊಂಡರು.

ಪ್ರೀತಿ ಪವಾರ್ ಎದುರಾಳಿ ಚೀನಾದ ಹಾಲಿ ಫ್ಲೈವೇಟ್ ಚಾಂಪಿಯನ್ ಚಾಂಗ್ ಯುಯಾನ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದರೂ ಅಂತಿಮವಾಗಿ 0-5 ಅಂತರದಿಂದ ಸೋಲುಂಡರು. ಪ್ರೀತಿ ಈಗಾಗಲೇ ಒಲಿಂಪಿಕ್ಸ್ ಗೆ ಟಿಕೆಟ್ ಪಡೆದಿದ್ದಾರೆ.


ಪುರುಷರ ಕ್ಯಾನೊ ಡಬಲ್ 1000 ಮೀ. ಸ್ಪರ್ಧೆ: ಅರ್ಜುನ್ ಸಿಂಗ್, ಸುನೀಲ್ ಸಿಂಗ್ ಗೆ ಕಂಚು

ಹಾಂಗ್ ಝೌ : ಭಾರತದ ಅರ್ಜುನ್ ಸಿಂಗ್ ಹಾಗೂ ಸುನೀಲ್ ಸಿಂಗ್ ಏಶ್ಯನ್ ಗೇಮ್ಸ್ ನಲ್ಲಿ ಪುರುಷರ ಕ್ಯಾನೊ ಡಬಲ್ 1000 ಮೀ.ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಜಯಿಸಿದ್ದಾರೆ.

ಭಾರತೀಯ ಜೋಡಿಯು 3:53.329 ಸೆಕೆಂಡಿನಲ್ಲಿ ಗುರಿ ತಲುಪಿ ಮೂರನೇ ಸ್ಥಾನ ಪಡೆಯಿತು. ಏಶ್ಯನ್ ಗೇಮ್ಸ್ ಇತಿಹಾಸದಲ್ಲಿ ಭಾರತವು ಈ ಸ್ಪರ್ಧೆಯಲ್ಲಿ 2ನೇ ಪದಕವನ್ನು ತನ್ನದಾಗಿಸಿಕೊಂಡಿತು. 1994ರ ಹಿರೋಶಿಮಾ ಗೇಮ್ಸ್ ನಲ್ಲಿ ಪುರುಷರ ಕ್ಯಾನೊ ಡಬಲ್ 1000 ಮೀ. ಸ್ಪರ್ಧೆಯಲ್ಲಿ ಸಿಜಿ ಸದಾನಂದನ್ ಹಾಗೂ ಜಾನಿ ರೊಮ್ಮೆಲ್ ಕಂಚಿನ ಪದಕ ಜಯಿಸಿದ್ದರು.

ಉಝ್ಬೇಕಿಸ್ತಾನ(3:43.796 ಸೆಕೆಂಡ್)ಅತ್ಲೀಟ್ ಗಳು ಚಿನ್ನದ ಪದಕ ಜಯಿಸಿದರೆ, ಕಝಕಿಸ್ತಾನದ ಸ್ಪರ್ಧಿಗಳು 3:49.991 ಸೆಕೆಂಡಿನಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಜಯಿಸಿದರು.


ಮಹಿಳೆಯರ 5,000 ಮೀ. ಓಟ: ಪಾರುಲ್ ಚೌಧರಿಗೆ ಚಿನ್ನ 

ಹಾಂಗ್ ಝೌ : ಏಶ್ಯನ್ ಗೇಮ್ಸ್ ನಲ್ಲಿ ಮಹಿಳೆಯರ 5,000 ಮೀ. ಓಟದಲ್ಲಿ ಪಾರುಲ್ ಚೌಧರಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಇದು ಪ್ರಸಕ್ತ ಗೇಮ್ಸ್ ನಲ್ಲಿ ಭಾರತ ಗೆದ್ದಿರುವ 14ನೇ ಚಿನ್ನದ ಪದಕವಾಗಿದೆ.

ಮಂಗಳವಾರ ನಡೆದ ಸ್ಪರ್ಧೆಯಲ್ಲಿ 28ರ ರ ಹರೆಯದ ಪಾರುಲ್ ಜಪಾನ್ ಓಟಗಾರ್ತಿ ರಿರಿಕಾ ಹಿರೊನಕಾರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದರು. 15:14.75 ಸೆಕೆಂಡಿನಲ್ಲಿ ಗುರಿ ತಲುಪಿದ ಪಾರುಲ್ ಮೊದಲನೇ ಸ್ಥಾನ ಪಡೆದರು.

ಪಾರುಲ್ ಸೋಮವಾರ ಮಹಿಳೆಯರ 3, 000 ಮೀಟರ್ ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ 2ನೇ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದರು. ಇದೀಗ ಎರಡನೇ ಪದಕ ಗೆದ್ದುಕೊಂಡಿದ್ದಾರೆ.


ಮಹಿಳೆಯರ 400 ಮೀ.ಹರ್ಡಲ್ಸ್: ವಿದ್ಯಾ ರಾಮರಾಜ್ ಗೆ ಕಂಚು

ಹಾಂಗ್ ಝೌ : ಏಶ್ಯನ್ ಗೇಮ್ಸ್ ನಲ್ಲಿ ಮಹಿಳೆಯರ 400 ಮೀ. ಹರ್ಡಲ್ಸ್ ನಲ್ಲಿ ಹಿನ್ನಡೆಯಿಂದ ಚೇತರಿಸಿಕೊಂಡ ಭಾರತದ ಓಟಗಾರ್ತಿ ವಿದ್ಯಾ ರಾಮರಾಜ್ ಕಂಚಿನ ಪದಕ ಜಯಿಸಿದರು.

ವಿದ್ಯಾ 55.68 ಸೆಕೆಂಡಿನಲ್ಲಿ ಗುರಿ ತಲುಪಿ ಮೂರನೇ ಸ್ಥಾನ ಪಡೆದರು. ಬಹರೈನ್ನ ಒಲುವಾಕೆಮಿ ಮುಜಿದತ್ 55.09 ಸೆಕೆಂಡಿನಲ್ಲಿ ಗುರಿ ತಲುಪಿ ಕ್ರೀಡಾಕೂಟದ ದಾಖಲೆಯನ್ನು ಮುರಿದು ಚಿನ್ನ ಜಯಿಸಿದರು. ಚೀನಾದ ಮೊ ಜಿಯಾಡಿ ವರ್ಷದ ಶ್ರೇಷ್ಠ ಪ್ರದರ್ಶನ(55.01 ಸೆ.)ದೊಂದಿಗೆ ಬೆಳ್ಳಿ ಪದಕ ಜಯಿಸಿದ್ದಾರೆ.

ವಿದ್ಯಾ ಅವರು 400 ಮೀ.ಹರ್ಡಲ್ಸ್ ಹೀಟ್ಸ್ ನಲ್ಲಿ 55.42 ಸೆಕೆಂಡ್ನಲ್ಲಿ ಗುರಿ ತಲುಪಿ ಓಟದ ರಾಣಿ ಪಿ.ಟಿ. ಉಷಾ ಅವರ 39 ವರ್ಷಗಳ ಹಳೆಯ ರಾಷ್ಟ್ರೀಯ ದಾಖಲೆಯನ್ನು ಸರಿಗಟ್ಟಿದರು.

ವಿದ್ಯಾ ಪ್ರಸಕ್ತ ಏಶ್ಯನ್ ಗೇಮ್ಸ್ ನಲ್ಲಿ 2ನೇ ಪದಕ ಗಳಿಸಿದರು. 4-400ಮೀ. ರಿಲೇ ಮಿಕ್ಸೆಡ್ ಸ್ಪರ್ಧೆಯಲ್ಲಿ ಸೋಮವಾರ ಮುಹಮ್ಮದ್ ಅಜ್ಮಲ್, ಶುಭಾ ವೆಂಕಟೇಶನ್ ಹಾಗೂ ರಾಜೇಶ್ ರಮೇಶ್ ಅವರೊಂದಿಗೆ ಬೆಳ್ಳಿ ಪದಕವನ್ನು ಜಯಿಸಿದ್ದರು.


ಪುರುಷರ ಟ್ರಿಪಲ್ ಜಂಪ್ ಫೈನಲ್: ಪ್ರವೀಣ್ ಚಿತ್ರವೇಲ್ ಗೆ ಕಂಚು

ಹಾಂಗ್ ಝೌ : ಏಶ್ಯನ್ ಗೇಮ್ಸ್ ನಲ್ಲಿ ಮಂಗಳವಾರ ನಡೆದ ಪುರುಷರ ಟ್ರಿಪಲ್ ಜಂಪ್ ಫೈನಲಿನಲ್ಲಿ ಮೂರನೇ ಸ್ಥಾನ ಪಡೆದ ಪ್ರವೀಣ್ ಚಿತ್ರವೇಲ್ ಕಂಚಿನ ಪದಕ ಜಯಿಸಿದರು.

ಪ್ರವೀಣ್ ತನ್ನ ಮೊದಲ ಪ್ರಯತ್ನದಲ್ಲಿ 16.68 ಮೀ.ದೂರಕ್ಕೆ ಜಿಗಿದಿದ್ದು, ಈ ಪ್ರಯತ್ನವೇ ಅವರಿಗೆ ಕಂಚು ಗೆದ್ದುಕೊಟ್ಟಿದೆ. ಅಬ್ದುಲ್ಲಾ ಅಬೂಬಕರ್ (16.62 ಮೀ. )4ನೇ ಸ್ಥಾನ ಪಡೆದರು.


ಡೆಕಾತ್ಲಾನ್: ರಾಷ್ಟ್ರೀಯ ದಾಖಲೆಯೊಂದಿಗೆ ಬೆಳ್ಳಿ ಗೆದ್ದ ತೇಜಸ್ವಿನ್ ಶಂಕರ್

ಹಾಂಗ್ ಝೌ: ಏಶ್ಯನ್ ಗೇಮ್ಸ್ ನಲ್ಲಿ ಡೆಕಾತ್ಲಾನ್ ಸ್ಪರ್ಧೆಯಲ್ಲಿ 10 ಸುತ್ತಿನ ನಂತರ 2ನೇ ಸ್ಥಾನ ಪಡೆದ ಭಾರತದ ತೇಜಸ್ವಿನ್ ಶಂಕರ್ ಬೆಳ್ಳಿ ಪದಕವನ್ನು ಬಾಚಿಕೊಂಡರು.

ಮಂಗಳವಾರ ನಡೆದ ತನ್ನ ಕೊನೆಯ 1500 ಮೀ. ಸ್ಪರ್ಧೆಯಲ್ಲಿ ಶಂಕರ್ 4ನೇ ಸ್ಥಾನ ಪಡೆದರು. ಒಟ್ಟು 7666 ಅಂಕ ಗಳಿಸಿದ ಶಂಕರ್ ಅವರು ಭರತೀಂದ್ರ ಸಿಂಗ್ ನಿರ್ಮಿಸಿದ್ದ ರಾಷ್ಟ್ರೀಯ ದಾಖಲೆ ಮುರಿದು ಬೆಳ್ಳಿ ಪದಕಕ್ಕೆ ಭಾಜನರಾದರು. ಚೀನಾದ ಕ್ಷಿಹಾವೊ ಸನ್ ಮೊದಲ ಸ್ಥಾನ ಪಡೆದರು. ಜಪಾನಿನ ಮರುಯಾಮಾ ಮೂರನೇ ಸ್ಥಾನ ಪಡೆದಿದ್ದಾರೆ.

ಶಂಕರ್ 1974ರ ನಂತರ ಪುರುಷರ ಡೆಕಾತ್ಲಾನ್ ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟಿದ್ದಾರೆ.

ಶಂಕರ್ ಡೆಕಾತ್ಲಾನ್ ಸ್ಪರ್ಧೆಯ ಮೊದಲ ದಿನವಾದ ಸೋಮವಾರ ಡೆಕಾತ್ಲಾನ್ ಲಾಂಗ್ ಜಂಪ್ ನಲ್ಲಿ ತನ್ನ ಪ್ರಾಬಲ್ಯ ಮೆರೆದರು. 7.37 ಮೀ.ದೂರಕ್ಕೆ ಜಿಗಿದು 903 ಅಂಕ ಗಳಿಸಿದರು. ಎತ್ತರ ಜಿಗಿತದಲ್ಲಿ ಶಂಕರ್ 2.21 ಮೀಟರ್ ದೂರವನ್ನು ಯಶಸ್ವಿಯಾಗಿ ದಾಟಿ 1002 ಅಂಕ ಪಡೆದು ಅಗ್ರ ಸ್ಥಾನ ಕಾಯ್ದುಕೊಂಡಿದ್ದರು.


ಸ್ಕ್ವಾಷ್ ಮಿಕ್ಸೆಡ್ ಡಬಲ್ಸ್: ದೀಪಿಕಾ-ಹರಿಂದರ್ ಸೆಮಿ ಫೈನಲ್ ಗೆ

ಹಾಂಗ್ ಝೌ : ದೀಪಿಕಾ ಪಲ್ಲಿಕಲ್ ಹಾಗೂ ಹರಿಂದರ್ ಪಾಲ್ ಸಿಂಗ್ ಸಿಧು ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಸೆಮಿ ಫೈನಲ್ ತಲುಪಿ ಪದಕವನ್ನು ಖಚಿಪಡಿಸಿದರು.

ಮಂಗಳವಾರ ನಡೆದ ಕ್ವಾರ್ಟರ್ ಫೈನಲ್ನಲ್ಲಿ ದೀಪಿಕಾ ಹಾಗೂ ಹರಿಂದರ್ ಫಿಲಿಪ್ಪೀನ್ಸ್ ನ ಜೆಮಿಕಾ ಅರಿಲ್ಬಾಡೊ ಹಾಗೂ ಆ್ಯಂಡ್ರೂ ಗರಿಕಾ ವಿರುದ್ಧ 7-11, 11-5, 11-4 ಅಂತರದಿಂದ ಜಯ ಸಾಧಿಸಿದರು.


800 ಮೀ. ಓಟ: ಬೆಳ್ಳಿಯ ನಗೆ ಬೀರಿದ ಮುಹಮ್ಮದ್ ಅಫ್ಸಲ್ 

ಹಾಂಗ್ ಝೌ : ಏಶ್ಯನ್ ಗೇಮ್ಸ್ ನಲ್ಲಿ ಪುರುಷರ 800 ಮೀ. ಓಟದಲ್ಲಿ ಮುಹಮ್ಮದ್ ಅಫ್ಸಲ್ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ.

ಮಂಗಳವಾರ ನಡೆದ 800 ಓಟದ ಫೈನಲ್ನಲ್ಲಿ ಅಫ್ಸಲ್ 1:48.43 ಸೆಕೆಂಡಿಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆದರು.


ಬಾಕ್ಸಿಂಗ್: ನರೇಂದರ್ ಗೆ ಕಂಚು

ಹಾಂಗ್ ಝೌ : ಭಾರತದ ನರೇಂದರ್ ಏಶ್ಯನ್ ಗೇಮ್ಸ್ ನಲ್ಲಿ ಪುರುಷರ ಬಾಕ್ಸಿಂಗ್ ನ 92 ಕೆಜಿ ಸ್ಪರ್ಧೆಯಲ್ಲಿ ಸೋಲುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿಟ್ಟರು.

ನರೇಂದರ್ ಕಝಕಿಸ್ತಾನದ ಕಾಮ್ಶಿಬೇಕ್ ಕುಂಕಬಾಯೆಬ್ ವಿರುದ್ಧ ಒಮ್ಮತದ ತೀರ್ಪಿನಲ್ಲಿ ಸೋತಿದ್ದಾರೆ.


ಹಾಂಗ್ ಝೌ: ಏಶ್ಯನ್ ಗೇಮ್ಸ್‌ ನಲ್ಲಿ 5,000 ಮೀ. ಓಟದಲ್ಲಿ ಚಿನ್ನ ಜಯಿಸಿದ ಭಾರತದ ಮೊದಲ ಮಹಿಳೆ ಎನಿಸಿಕೊಳ್ಳುವ ಮೂಲಕ ಪಾರುಲ್ ಚೌಧರಿ ಇತಿಹಾಸ ನಿರ್ಮಿಸಿದ್ದಾರೆ. ಪ್ರಸಕ್ತ ಗೇಮ್ಸ್‌ ನಲ್ಲಿ ಪಾರುಲ್ ಗೆದ್ದಿರುವ 2ನೇ ಪದಕ ಇದಾಗಿದೆ. ಮಂಗಳವಾರ ನಡೆದ ಸ್ಪರ್ಧೆಯಲ್ಲಿ 28ರ ರ ಹರೆಯದ ಪಾರುಲ್ ಜಪಾನ್ ಓಟಗಾರ್ತಿ ರಿರಿಕಾ ಹಿರೊನಕಾರನ್ನು ಕೆಲವೇ ಮೀಟರ್ನಲ್ಲಿ ಹಿಂದಿಕ್ಕಿ ಮೊದಲ ಸ್ಥಾನ ಪಡೆದರು. 15:14.75 ಸೆಕೆಂಡ್ನಲ್ಲಿ ಗುರಿ ತಲುಪಿದ ಪಾರುಲ್ ಚಿನ್ನ ಜಯಿಸಿದರು. ಜಪಾನ್ ಓಟಗಾರ್ತಿ ಬೆಳ್ಳಿ ಜಯಿಸಿದರು.

ಪಾರುಲ್ ಸೋಮವಾರ ಮಹಿಳೆಯರ 3,000 ಮೀಟರ್ ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ 2ನೇ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದರು. ಈ ಹಿಂದೆ ಮಹಿಳೆಯರ 5,000 ಮೀ. ರೇಸ್ ನಲ್ಲಿ ಭಾರತದ ಪರ ಸುನಿತಾ ರಾಣಿ(1998ರಲ್ಲಿ ಬೆಳ್ಳಿ ಹಾಗೂ 2002ರಲ್ಲಿ ಕಂಚು), ಒಪಿ ಜೈಶಾ(2006ರಲ್ಲಿ ಕಂಚು), ಪ್ರೀಜಾ ಶ್ರೀಧರನ್(2010ರಲ್ಲಿ ಬೆಳ್ಳಿ) ಹಾಗೂ ಕವಿತಾ ರಾವುತ್(2010ರಲ್ಲಿ ಕಂಚು) ಪದಕ ಜಯಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News