ನಾಳೆ ಬೆಂಗಳೂರಿನಲ್ಲಿ ಇಂಗ್ಲೆಂಡ್-ಶ್ರೀಲಂಕಾ ಸೆಣಸಾಟ

Update: 2023-10-25 18:29 GMT

ಶ್ರೀಲಂಕಾ ಕ್ರಿಕೆಟ್ ತಂಡ | Photo: Twitter//@ICC

ಬೆಂಗಳೂರು: ಹಾಲಿ ಚಾಂಪಿಯನ್ ಇಂಗ್ಲೆಂಡ್ ಕ್ರಿಕೆಟ್ ತಂಡ ಎಂ.ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ಗುರುವಾರ ನಡೆಯಲಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ.

ಪ್ರಸಕ್ತ ವಿಶ್ವಕಪ್ನಲ್ಲಿ ಕಳಪೆ ಆರಂಭ ಪಡೆದಿರುವ ಇಂಗ್ಲೆಂಡ್ ಈತನಕ ಆಡಿರುವ 4 ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಜಯ ಸಾಧಿಸಿದೆ. ದಿನದಿಂದ ದಿನಕ್ಕೆ ಅಂತಿಮ-4ರ ಘಟ್ಟ ತಲುಪುವ ತಂಡದ ವಿಶ್ವಾಸ ಕ್ಷೀಣಿಸುತ್ತಿದೆ.

ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡ ನ್ಯೂಝಿಲ್ಯಾಂಡ್ ವಿರುದ್ಧ 9 ವಿಕೆಟ್ಗಳಿಂದ ಸೋಲುವ ಮೂಲಕ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಿತ್ತು. ಮುಂದಿನ ಪಂದ್ಯದಲ್ಲಿ ಮರು ಸಂಘಟಿತಗೊಂಡ ಇಂಗ್ಲೆಂಡ್ ತಂಡ ಬಾಂಗ್ಲಾದೇಶ ತಂಡವನ್ನು 137 ರನ್ ಅಂತರದಿಂದ ಮಣಿಸಿತು. ಆದರೆ ಅಫ್ಘಾನಿಸ್ತಾನ ವಿರುದ್ದ ತಾನಾಡಿದ 3ನೇ ಪಂದ್ಯದಲ್ಲಿ ಆಘಾತಕಾರಿ ಸೋಲನುಭವಿಸಿತು. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 229 ರನ್ ಅಂತರದಿಂದ ಹೀನಾಯವಾಗಿ ಸೋಲುಂಡಿತು. ಸದ್ಯಕ್ಕೆ 4 ಪಂದ್ಯಗಳಲ್ಲಿ 2 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.

ಇದೇ ವೇಳೆ ಶ್ರೀಲಂಕಾ ತಂಡ ನೆದರ್ಲ್ಯಾಂಡ್ಸ್ ವಿರುದ್ಧ 5 ವಿಕೆಟ್ ಅಂತರದಿಂದ ಜಯ ಸಾಧಿಸಿ ಸ್ವಲ್ಪ ಆತ್ಮವಿಶ್ವಾಸ ಪಡೆದಿದೆ. ಸತತ ಮೂರು ಪಂದ್ಯಗಳಲ್ಲಿ ಸೋತಿದ್ದ ಲಂಕನ್ನರು ಡಚ್ಚರ ವಿರುದ್ಧ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದ್ದರು.

ಲಂಕಾವು 4 ಪಂದ್ಯಗಳಲ್ಲಿ 2 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.

ಶ್ರೀಲಂಕಾದ ವಿಕೆಟ್ಕೀಪರ್-ಬ್ಯಾಟರ್ ಸದೀರ ಸಮರವಿಕ್ರಮ 4 ಪಂದ್ಯಗಳಲ್ಲಿ ಒಟ್ಟು 230 ರನ್ ಗಳಿಸಿದ್ದಾರೆ. ಒಂದು ಶತಕ ಹಾಗೂ ಅರ್ಧಶತಕ ಗಳಿಸಿದ್ದಾರೆ. ನಾಯಕ ಕುಸಾಲ್ ಮೆಂಡಿಸ್ 218 ರನ್ ಗಳಿಸಿದ್ದು, ಎಡಗೈ ಬ್ಯಾಟರ್ ಚರಿತ್ ಅಸಲಂಕ ಟೂರ್ನಿಯಲ್ಲಿ 4 ಪಂದ್ಯಗಳಲ್ಲಿ ಒಟ್ಟು 149 ರನ್ ಗಳಿಸಿ ಉತ್ತಮ ಟಚ್ ನಲ್ಲಿದ್ದಾರೆ.

ಇಂಗ್ಲೆಂಡ್ ಪಾಳಯದಲ್ಲಿ ಡೇವಿಡ್ ಮಲನ್ 4 ಪಂದ್ಯಗಳಲ್ಲಿ ಒಟ್ಟು 192 ರನ್ ಗಳಿಸಿದ್ದಾರೆ. ಜೋ ರೂಟ್ 4 ಪಂದ್ಯಗಳಲ್ಲಿ 172 ರನ್ ಗಳಿಸಲು ಶಕ್ತರಾಗಿದ್ದಾರೆ. ಸ್ಯಾಮ್ ಕರ್ರನ್ ಆಲ್ರೌಂಡ್ ಕೌಶಲ್ಯವು ಚಿನ್ನಸ್ವಾಮಿ ಸ್ಟೇಡಿಯಮ್ ನಲ್ಲಿ ಇಂಗ್ಲೆಂಡ್ಗೆ ಅತ್ಯಂತ ಮುಖ್ಯವಾಗಿದೆ. ಕರ್ರನ್ ವಿಶ್ವಕಪ್ ನಲ್ಲಿ ಇನ್ನಷ್ಟೇ ಮಿಂಚಬೇಕಾಗಿದೆ.

ಏಕದಿನ ಕ್ರಿಕೆಟ್ ನಲ್ಲಿ ಹೆಡ್-ಟು-ಹೆಡ್

ಇಂಗ್ಲೆಂಡ್ ಹಾಗೂ ಶ್ರೀಲಂಕಾ ಏಕದಿನ ಕ್ರಿಕೆಟ್ ನಲ್ಲಿ 78 ಬಾರಿ ಪರಸ್ಪರ ಸ್ಪರ್ಧಿಸಿವೆ. ಇಂಗ್ಲೆಂಡ್ 38 ಬಾರಿ ಜಯ ಸಾಧಿಸಿದೆ. ಲಂಕಾವು 36 ಬಾರಿ ಜಯ ಕಂಡಿದೆ. ಒಂದು ಪಂದ್ಯವು ಟೈ ಆಗಿದ್ದರೆ, ಇನ್ನೊಂದು ಪಂದ್ಯದಲ್ಲಿ ಫಲಿತಾಂಶ ಬಂದಿಲ್ಲ.

ಹಿಂದಿನ 5 ಏಕದಿನ ಪಂದ್ಯಗಳಲ್ಲಿ ಇಂಗ್ಲೆಂಡ್ ಹಾಗೂ ಶ್ರೀಲಂಕಾ ತಲಾ 2 ಬಾರಿ ಜಯ ಸಾಧಿಸಿವೆ. ಈ ಐದು ಪಂದ್ಯಗಳಲ್ಲಿ ಶ್ರೀಲಂಕಾವು ಗರಿಷ್ಠ 366 ರನ್ ಗಳಿಸಿದೆ. ಇಂಗ್ಲೆಂಡ್ ಕನಿಷ್ಠ 132 ರನ್ ಕಲೆಹಾಕಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News