ಪರ್ವತಗಳ ತಪ್ಪಲಿನಲ್ಲಿ ಇಂಗ್ಲೆಂಡ್ ಎದುರಿಸಲಿರುವ ಬಾಂಗ್ಲಾ

Update: 2023-10-09 17:03 GMT

ಸಾಂದರ್ಭಿಕ ಚಿತ್ರ PHOTO : PTI

ಧರ್ಮಶಾಲಾ: ಭಾರತದಲ್ಲಿ ನಡೆಯುತ್ತಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ನಲ್ಲಿ ಮಂಗಳವಾರ ಇಂಗ್ಲೆಂಡ್ ತಂಡವು ಬಾಂಗ್ಲಾದೇಶವನ್ನು ಎದುರಿಸಲಿದೆ.

ಧರ್ಮಶಾಲಾದಲ್ಲಿ ನಡೆಯುವ ಪಂದ್ಯವು ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡಕ್ಕೆ ಪುಟಿದೇಳಲು ಒಂದು ಅವಕಾಶವನ್ನು ಒದಗಿಸಲಿದೆ. ಅಹ್ಮದಾಬಾದ್ನಲ್ಲಿ ನಡೆದ ತನ್ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್, ನ್ಯೂಝಿಲ್ಯಾಂಡ್ ಎದುರು 9 ವಿಕೆಟ್ಗಳ ಬೃಹತ್ ಸೋಲನುಭವಿಸುವ ಮೂಲಕ ಭಾರೀ ಹಿನ್ನಡೆಗೊಳಗಾಗಿತ್ತು.

ಹಾಗಾಗಿ, ಯಾವತ್ತೂ ಅಪಾಯಕಾರಿಯಾಗಿರುವ ಬಾಂಗ್ಲಾದೇಶದ ವಿರುದ್ಧ ಧೀರೋದಾತ್ತ ಪ್ರದರ್ಶನವನ್ನು ನೀಡಬೇಕಾದ ಅನಿವಾರ್ಯತೆಯನ್ನು ಇಂಗ್ಲೆಂಡ್ ಹೊಂದಿದೆ.

ಹಿಮಾಲಯದ ತಪ್ಪಲಲ್ಲಿ ಈ ಪಂದ್ಯ ನಡೆಯಲಿದೆ. ಇಲ್ಲಿನ ಸ್ಥಿತಿಗತಿಯು ಬಾಂಗ್ಲಾದೇಶದ ತವರಿನ ಸ್ಥಿತಿಗತಿಗಿಂತ ತುಂಬಾ ಭಿನ್ನವಾಗಿದೆ. ಆದರೆ, ಇದೇ ಮೈದಾನದಲ್ಲಿ ಬಾಂಗ್ಲಾದೇಶವು ಶನಿವಾರ ಅಫ್ಘಾನಿಸ್ತಾನವನ್ನು ಸೋಲಿಸಿರುವುದು ಅದಕ್ಕೆ ಧೈರ್ಯ ಕೊಟ್ಟಿದೆ. ಆದರೆ, ಅಲ್ಲಿನ ಪರಿಸ್ಥಿತಿಯು ಇಂಗ್ಲೆಂಡ್ಗೆ ಹೆಚ್ಚು ಪೂರಕವಾಗಿದೆ.

ಮಂಗಳವಾರದ ಪಂದ್ಯದಲ್ಲಿ ಇಂಗ್ಲೆಂಡ್ ತಂಡದಲ್ಲಿ ಬೆನ್ ಸ್ಟೋಕ್ಸ್ ಆಡುವುದು ಅನುಮಾನವಾಗಿದೆ. ಅವರು ಭಾರತಕ್ಕೆ ಬಂದಂದಿನಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಅಫ್ಘಾನಿಸ್ತಾನ ವಿರುದ್ಧ ಜಯ ಗಳಿಸಿದ ತಂಡವನ್ನೇ ಬಾಂಗ್ಲಾದೇಶವು ಮಂಗಳವಾರ ಕಣಕ್ಕಿಳಿಸುವುದು ಹೆಚ್ಚು ಕಡಿಮೆ ಖಚಿತವಾಗಿದೆ.

ಸಂಭಾವ್ಯ ತಂಡಗಳು

ಇಂಗ್ಲೆಂಡ್: ಜಾನಿ ಬೇರ್ಸ್ಟೋ, ಡೇವಿಡ್ ಮಲಾನ್, ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ಬಟ್ಲರ್ (ನಾಯಕ ಮತ್ತು ವಿಕೆಟ್ಕೀಪರ್), ಲಿಯಮ್ ಲಿವಿಂಗ್ಸ್ಟೋನ್, ಸ್ಯಾಮ್ ಕರನ್, ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಆದಿಲ್ ರಶೀದ್ ಮತ್ತು ರೀಸ್ ಟೋಪ್ಲೇ.

ಬಾಂಗ್ಲಾದೇಶ: ತಂಝೀದ್ ಹಸನ್, ಲಿಟನ್ ದಾಸ್, ನಜ್ಮುಲ್ ಹುಸೈನ್ ಶಾಂಟೊ, ಶಾಕಿಬ್ ಅಲ್ ಹಸನ್ (ನಾಯಕ೦, ತೌಹೀದ್ ಹೃದಯ್, ಮುಶ್ಫೀಕುರ್ರಹೀಮ್ (ವಿಕೆಟ್ಕೀಪರ್), ಮೆಹಿದಿ ಹಸನ್ ಮಿರಾಝ್, ಮಹ್ಮುದುಲ್ಲಾ/ಮಹೆದಿ ಹಸನ್, ತಸ್ಕಿನ್ ಅಹ್ಮದ್, ಶರೀಫುಲ್ ಇಸ್ಲಾಮ್, ಮುಸ್ತಾಫಿಝೂರ್ ರಹ್ಮಾನ್.

ಮುಖಾಮುಖಿ

ಕಳೆದ ನಾಲ್ಕು ವಿಶ್ವಕಪ್ಗಳಲ್ಲಿ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶಗಳು ಮುಖಾಮುಖಿಯಾಗಿವೆ ಹಾಗೂ ಫಲಿತಾಂಶ ಸಮಬಲವಾಗಿದೆ.2007ರಲ್ಲಿ ಬಾರ್ಬಡೋಸ್ನಲ್ಲಿ ಮೊದಲ ಬಾರಿ ಮುಖಾಮುಖಿಯಾದಾಗ ಇಂಗ್ಲೆಂಡ್ ವಿಜಯಿಯಾಯಿತು. ಹಾಗೂ ನಾಲ್ಕು ವರ್ಷಗಳ ಹಿಂದೆ ಕಾರ್ಡಿಫ್ನಲ್ಲಿಯೂ ಅದು ಜಯ ಗಳಿಸಿತು. ಆದರೆ, 2011 ಮತ್ತು 2015ರಲ್ಲಿ ಬಾಂಗ್ಲಾದೇಶ ಗೆಲುವು ದಾಖಲಿಸಿತು.

ಧರ್ಮಶಾಲಾದಲ್ಲಿ ಕಳೆದ 10 ವರ್ಷಗಳಲ್ಲಿ ಐದು ಏಕದಿನ ಪಂದ್ಯಗಳು ಸಂಪೂರ್ಣವಾಗಿ ನಡೆದಿವೆ. ಅವುಗಳ ಪೈಕಿ ನಾಲ್ಕು ಪಂದ್ಯಗಳನ್ನು ಎರಡನೆಯದಾಗಿ ಬ್ಯಾಟಿಂಗ್ ಮಾಡಿದ ತಂಡ ಸುಲಭವಾಗಿ ಗೆದ್ದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News