ಯೂರೊಕಪ್: ಟರ್ಕಿ ವಿರುದ್ಧ ಗೆದ್ದ ರೊನಾಲ್ಡೊ ಪಡೆ 16ರ ಘಟ್ಟಕ್ಕೆ
ಹೊಸದಿಲ್ಲಿ: ಕ್ರಿಸ್ಟಿಯಾನೊ ರೊನಾಲ್ಡೊ ನೇತೃತ್ವದ ಪೋರ್ಚುಗಲ್ ತಂಡ ಶನಿವಾರ ನಡೆದ ಯೂರೊ ಕಪ್-2024 ಟೂರ್ನಿಯ ಪಂದ್ಯದಲ್ಲಿ ಟರ್ಕಿ ವಿರುದ್ಧ 3-0 ಗೋಲುಗಳ ಸುಲಭ ಜಯ ಸಾಧಿಸಿ ಪ್ರಿ ಕ್ವಾರ್ಟರ್ ಫೈನಲ್ ಹಂತ ತಲುಪಿತು.
ಬೆರ್ನಾರ್ಡೊ ಸಿಲ್ವ, ಬ್ರೂನೊ ಫೆರ್ನಾಂಡಿಸ್ ಮತ್ತು ಟರ್ಕಿಯ ಸಮೆಟ್ ಅಕಯ್ದೀನ್ ಗೊಂದಲದಿಂದ ತಮ್ಮ ಗೋಲು ಪೆಟ್ಟಿಗೆಯಲ್ಲೇ ಹೊಡೆದ ಗೋಲಿನ ನೆರವಿನಿಂದ ಟೂರ್ನಿಯಲ್ಲಿ ಸತತ ಎರಡನೇ ಜಯ ದಾಖಲಿಸಿ, ಎಫ್ ಗುಂಪಿನಲ್ಲಿ ಅಗ್ರಸ್ಥಾನ ಪಡೆಯಿತು.
ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವೆನಿಸಿದ ಪೋರ್ಚುಗಲ್ ತಂಡದ ನಾಯಕ ರೊನಾಲ್ಡೊ ಗೋಲು ಹೊಡೆಯುವ ಅವಕಾಶ ಹೊಂದಿದ್ದರೂ, ಗೋಲು ಹೊಡೆಯಲು ಅತ್ಯಂತ ಸೂಕ್ತ ಸ್ಥಾನದಲ್ಲಿದ್ದ ಬ್ರೂನೊ ಅವರಿಗೆ ಚೆಂಡ್ ಪಾಸ್ ಮಾಡುವ ಮೂಲಕ ಶ್ಲಾಘನೆಗೆ ಪಾತ್ರರಾದರು. ಪಂದ್ಯದುದ್ದಕ್ಕೂ ಪ್ರಾಬಲ್ಯ ಮೆರೆದ ಪೋರ್ಚುಗಲ್ ಆಟಗಾರರಿಗೆ ಟರ್ಕಿ ಯಾವ ಹಂತದಲ್ಲೂ ಸವಾಲಾಗಲಿಲ್ಲ.
ಟೂರ್ನಿಯ ಮತ್ತೊಂದು ಪಂದ್ಯದಲ್ಲಿ ಜೆಕ್ ರಿಪಬ್ಲಿಕ್ ತಂಡ, ಮೊದಲ ಬಾರಿಗೆ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಜಾರ್ಜಿಯಾ ವಿರುದ್ಧ 1-1 ಗೋಲುಗಳ ಡ್ರಾ ಸಾಧಿಸಿತು.