ಏಶ್ಯಕಪ್ ಪ್ರಶಸ್ತಿ ಜಯಿಸಿದರೂ ಏಕದಿನ ಕ್ರಿಕೆಟ್ ನಲ್ಲಿ ಭಾರತಕ್ಕೆ ನಂ.1 ಸ್ಥಾನ ಸಿಗದು
ಹೊಸದಿಲ್ಲಿ: ಏಶ್ಯಕಪ್ ನ ಸೂಪರ್-4 ಹಂತದಲ್ಲಿ ಬಾಂಗ್ಲಾದೇಶ ವಿರುದ್ಧ 6 ರನ್ ಅಂತರದಿಂದ ಸೋತಿರುವ ಭಾರತವು ಎಲ್ಲ ಮಾದರಿ ಕ್ರಿಕೆಟಿನಲ್ಲಿ ನಂ.1 ತಂಡವಾಗುವ ವಿಶ್ವಾಸ ಕಮರಿ ಹೋಗಿದೆ.
ಬಾಂಗ್ಲಾದೇಶ ವಿರುದ್ಧದ ಏಶ್ಯಕಪ್ ಪಂದ್ಯಕ್ಕಿಂತ ಮೊದಲು ಭಾರತವು ಐಸಿಸಿ ಏಕದಿನ ಟೀಮ್ ರ್ಯಾಂಕಿಂಗ್ ನಲ್ಲಿ 116 ರೇಟಿಂಗ್ ಪಾಯಿಂಟ್ಸ್ ನೊಂದಿಗೆ 2ನೇ ಸ್ಥಾನ ವಶಪಡಿಸಿಕೊಂಡಿತ್ತು. ಅಗ್ರ ರ್ಯಾಂಕಿನ ಆಸ್ಟ್ರೇಲಿಯಕ್ಕಿಂತ(118) ಎರಡು ಅಂಕದಿಂದ ಹಿಂದಿತ್ತು.
ಈಗಾಗಲೇ ಟೆಸ್ಟ್ ಹಾಗೂ ಟಿ-20 ರ್ಯಾಂಕಿಂಗ್ ನಲ್ಲಿ ಪ್ರಾಬಲ್ಯ ಸಾಧಿಸಿರುವ ಭಾರತಕ್ಕೆ ಏಕದಿನ ಕ್ರಿಕೆಟಿನಲ್ಲೂ ನಂ.1 ಸ್ಥಾನಕ್ಕೇರುವ ಸುವರ್ಣಾವಕಾಶ ಒದಗಿ ಬಂದಿತ್ತು.
ಭಾರತವು ನಂ.1 ಸ್ಥಾನಕ್ಕೇರಲು ಬಾಂಗ್ಲಾದೇಶ ವಿರುದ್ಧ ಏಶ್ಯಕಪ್ ನ ಸೂಪರ್-4 ಪಂದ್ಯವನ್ನು ಗೆಲ್ಲಬೇಕಾಗಿತ್ತು. ದಕ್ಷಿಣ ಆಫ್ರಿಕಾವು ಆಸ್ಟ್ರೇಲಿಯ ವಿರುದ್ಧ 5 ಪಂದ್ಯಗಳ ಸರಣಿಯ 4ನೇ ಪಂದ್ಯವನ್ನು ಗೆಲ್ಲಬೇಕಾಗಿತ್ತು. ಆದರೆ ಇಲ್ಲಿ ಭಾರತವು ಕೇವಲ 6 ರನ್ನಿಂದ ಸೋಲುಂಡರೆ ಆಫ್ರಿಕಾ 164 ರನ್ನಿಂದ ಭರ್ಜರಿ ಗೆಲುವು ಸಾಧಿಸಿದೆ.
ಈ ಸೋಲು ಭಾರತ ಎಲ್ಲ ಮಾದರಿ ಕ್ರಿಕೆಟ್ನಲ್ಲಿ ನಂ.1 ಸ್ಥಾನಕ್ಕೇರುವುದನ್ನು ನಿರಾಕರಿಸಿದೆ. ಮಾತ್ರವಲ್ಲ 114 ಅಂಕದೊಂದಿಗೆ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯ ನಂತರ 3ನೇ ಸ್ಥಾನಕ್ಕೆ ಕುಸಿಯುವಂತೆ ಮಾಡಿದೆ. ಆಸ್ಟ್ರೇಲಿಯ ಹಾಗೂ ಪಾಕಿಸ್ತಾನ ಕೆಲವೇ ರೇಟಿಂಗ್ ಪಾಯಿಂಟ್ ಅಂತರದಲ್ಲಿವೆ. ಆಸ್ಟ್ರೇಲಿಯ 115.259 ಹಾಗೂ ಪಾಕಿಸ್ತಾನ 114.889 ರೇಟಿಂಗ್ ಪಾಯಿಂಟ್ ನೊಂದಿಗೆ ಕ್ರಮವಾಗಿ ಮೊದಲ ಹಾಗೂ 2ನೇ ಸ್ಥಾನದಲ್ಲಿವೆ.
ಒಂದು ವೇಳೆ ಆಸ್ಟ್ರೇಲಿಯವು ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಪಂದ್ಯವನ್ನು ಸೋತರೆ, ಭಾರತವು ರವಿವಾರ ಏಶ್ಯಕಪ್ ಚಾಂಪಿಯನ್ಸ್ ಪಟ್ಟಕ್ಕೇರಿದರೂ ಕೂಡ ಭಾರತವು ನಂ.1 ರ್ಯಾಂಕಿಗೆ ಏರುವುದಿಲ್ಲ. ಈ ಸನ್ನಿವೇಶದಲ್ಲಿ ಆಸ್ಟ್ರೇಲಿಯದ ಸೋಲು ಪಾಕಿಸ್ತಾನಕ್ಕೆ ಮತ್ತೆ ನಂ.1 ಸ್ಥಾನದ ಬಾಗಿಲು ತೆರೆಯಲು ಕಾರಣವಾಗಬಹುದು.
ಭಾರತವು ಸೆ.22ರಂದು ಆರಂಭವಾಗಲಿರುವ 3 ಪಂದ್ಯಗಳ ಸರಣಿಯ ಆತಿಥ್ಯ ವಹಿಸಲಿದ್ದು ನಂ.1 ಸ್ಥಾನಕ್ಕಾಗಿ ಹೋರಾಟವು ಮುಂದುವರಿಸಲಿದೆ.
ಈ ಸರಣಿಯು ವಿಶ್ವಕಪ್ ಗಿಂತ ಮೊದಲು ಉಭಯ ತಂಡಗಳಿಗೆ ಆತ್ಮವಿಶ್ವಾಸವನ್ನು ಒದಗಿಸಲಿದೆ. ಮಾತ್ರವಲ್ಲ ಟೂರ್ನಿಗಿಂತ ಮೊದಲು ಯಾವುದು ನಂ.1 ಏಕದಿನ ತಂಡ ಎನ್ನುವುದನ್ನು ದೃಢಪಡಿಸಲಿದೆ.