2026ರ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯ : ಬ್ರೆಝಿಲ್‌ಗೆ ನಾಲ್ಕನೇ ಸೋಲು

Update: 2024-09-11 14:34 GMT

PC : sportstar.thehindu.com

ಅಸುನ್ಸಿಯಾನ್(ಪರಾಗ್ವೆ) : ಆತಿಥೇಯ ಪರಾಗ್ವೆ ವಿರುದ್ಧ 7ನೇ ಸುತ್ತಿನ ಪಂದ್ಯದಲ್ಲಿ 0-1 ಗೋಲು ಅಂತರದಿಂದ ಸೋಲನುಭವಿಸಿರುವ ಐದು ಬಾರಿಯ ವಿಶ್ವ ಚಾಂಪಿಯನ್ ಬ್ರೆಝಿಲ್ ಫುಟ್ಬಾಲ್ ತಂಡ 2026ರ ಫಿಫಾ ವಿಶ್ವಕಪ್ ಅರ್ಹತಾ ಅಭಿಯಾನದಲ್ಲಿ ಮತ್ತೊಂದು ಹಿನ್ನಡೆ ಅನುಭವಿಸಿದೆ. ಅರ್ಹತಾ ಸುತ್ತಿನಲ್ಲಿ ಆಡಿರುವ 5ನೇ ಪಂದ್ಯದಲ್ಲಿ ನಾಲ್ಕನೇ ಸೋಲು ಕಂಡಿದೆ.

ಡಿಯಾಗೊ ಗೊಮೆಝ್ ಮೊದಲಾರ್ಧದ 20ನೇ ನಿಮಿಷದಲ್ಲಿ ಗಳಿಸಿದ ಗೋಲು ಬ್ರೆಝಿಲ್ ಸೋಲಿಗೆ ಕಾರಣವಾಯಿತು. ವಿನಿಶಿಯಸ್ ಜೂನಿಯರ್‌ರಂತಹ ಸ್ಟಾರ್ ಆಟಗಾರರಿದ್ದರೂ ಬ್ರೆಝಿಲ್‌ಗೆ ಗೋಲು ಸಮಬಲಗೊಳಿಸಲು ಸಾಧ್ಯವಾಗಲಿಲ್ಲ. ಈ ಸೋಲಿನೊಂದಿಗೆ ದಕ್ಷಿಣ ಅಮೆರಿಕ ದೇಶಗಳ ಅಂಕಪಟ್ಟಿಯಲ್ಲಿ 10 ಅಂಕ ಗಳಿಸಿರುವ ಬ್ರೆಝಿಲ್ ಐದನೇ ಸ್ಥಾನದಲ್ಲಿದೆ.

ಬ್ರೆಝಿಲ್ 2026ರ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದುದ್ದಕ್ಕೂ ಪರದಾಟ ನಡೆಸಿದೆ. ಅಂಕಪಟ್ಟಿಯಲ್ಲಿ ಸದ್ಯ ಬ್ರೆಝಿಲ್ ತಂಡ ವೆನೆಝುವೆಲಾದೊಂದಿಗೆ ಟೈ ಸಾಧಿಸಿದೆ. ಆದರೆ ಗೋಲು ವ್ಯತ್ಯಾಸದಲ್ಲಿ ಮುಂದಿದೆ. ಬ್ರೆಝಿಲ್ ಸದ್ಯ ಐದನೇ ಸ್ಥಾನದಲ್ಲಿದೆ. ಒಟ್ಟು 48 ತಂಡಗಳು ಭಾಗವಹಿಸಲಿರುವ ಮುಂಬರುವ ವಿಶ್ವಕಪ್ ಟೂರ್ನಿಗೆ ದಕ್ಷಿಣ ಅಮೆರಿಕದ ಅಗ್ರ ಆರು ತಂಡಗಳು ನೇರ ಪ್ರವೇಶ ಪಡೆಯುತ್ತವೆ. ಏಳನೇ ಸ್ಥಾನ ಪಡೆಯುವ ತಂಡವು ಪ್ಲೇ ಆಫ್‌ಗೆ ಪ್ರವೇಶಿಸಲಿದೆ.

ಅಂಕಪಟ್ಟಿಯಲ್ಲಿರುವ 10 ತಂಡಗಳ ಪೈಕಿ ಕೊನೆಯ 3 ಸ್ಥಾನದಲ್ಲಿರುವ ತಂಡಗಳು ನಿರ್ಗಮಿಸಲಿವೆ.

ಕಳೆದ ವಾರ ಇಕ್ವೆಡಾರ್ ವಿರುದ್ಧ 1-0 ಅಂತರದಿಂದ ಜಯ ಸಾಧಿಸಿದ್ದ ಬ್ರೆಝಿಲ್ ಮತ್ತೊಮ್ಮೆ ಸೋಲಿನ ಸುಳಿಗೆ ಸಿಲುಕಿದೆ. ಕೋಚ್ ಡೊರಿವಲ್ ಜೂನಿಯರ್ ಮಾರ್ಗದರ್ಶನದಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಬ್ರೆಝಿಲ್ ತಂಡ ವಿಫಲವಾಗುತ್ತಿದ್ದು, ತಂಡದ ಪ್ರದರ್ಶನವನ್ನು ಸುಧಾರಿಸಬೇಕಾದ ಒತ್ತಡವನ್ನು ಡೊರಿವಲ್ ಜೂನಿಯರ್ ಎದುರಿಸುತ್ತಿದ್ದಾರೆ.

ಅರ್ಹತೆ ಪಡೆಯುವುದು ಸುಲಭವಲ್ಲ. ಇದು ಕಷ್ಟಕರ ಸಮಯ. ನಾವು ಅದನ್ನು ನಿರ್ವಹಿಸಬೇಕಾಗಿದೆ. ನಾವು ಕಷ್ಟಪಟ್ಟು ಕೆಲಸ ಮಾಡಲಿದ್ದೇವೆ. ಪಿಚ್‌ನಲ್ಲಿ ಫಲಿತಾಂಶ ಪಡೆಯುವುದು ಉತ್ತಮ ಉತ್ತರವಾಗಿದೆ ಎಂದು ಡಿಫೆಂಡರ್ ಮಾರ್ಕ್ವಿನೋಸ್ ಹೇಳಿದ್ದಾರೆ.

ಬ್ರೆಝಿಲ್ ತಂಡ ಚಿಲಿ ವಿರುದ್ಧ ನಡೆಯಲಿರುವ ಮುಂದಿನ ಅರ್ಹತಾ ಪಂದ್ಯದಲ್ಲಿ ಚೇತರಿಸಿಕೊಳ್ಳುವತ್ತ ಚಿತ್ತ ಹರಿಸಿದೆ. ಚಿಲಿ ಹಾಗೂ ಪೆರು ತಂಡಗಳ ವಿರುದ್ಧದ ಪಂದ್ಯಗಳು ವಿಶ್ವಕಪ್‌ಗೆ ನೇರ ಅರ್ಹತೆ ಗಿಟ್ಟಿಸಿಕೊಳ್ಳಲು ಬ್ರೆಝಿಲ್‌ಗೆ ನಿರ್ಣಾಯಕವಾಗಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News