ಐದನೇ ಟ್ವೆಂಟಿ-20: ವೆಸ್ಟ್‌ಇಂಡೀಸ್ ಗೆಲುವಿಗೆ 166 ರನ್ ಗುರಿ ನೀಡಿದ ಭಾರತ
ಫ್ಲೋರಿಡ : ಸೂರ್ಯಕುಮಾರ್ ಯಾದವ್ ಅರ್ಧಶತಕದ(61 ರನ್, 44 ಎಸೆತ, 4 ಬೌಂಡರಿ, 3 ಸಿಕ್ಸರ್)ಸಹಾಯದಿಂದ ಭಾರತ ಕ್ರಿಕೆಟ್ ತಂಡ ವೆಸ್ಟ್‌ಇಂಡೀಸ್ ತಂಡಕ್ಕೆ 5ನೇ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯದ ಗೆಲುವಿಗೆ 166 ರನ್ ಗುರಿ ನೀಡಿದೆ.
ರವಿವಾರ ಟಾಸ್ ಜಯಿಸಿದ ಭಾರತ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಮಳೆಬಾಧಿತ ಪಂದ್ಯದಲ್ಲಿ ಭಾರತ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 165 ರನ್ ಗಳಿಸಿತು.
4ನೇ ಪಂದ್ಯದಲ್ಲಿ ಭರ್ಜರಿ ಆರಂಭ ಒದಗಿಸಿದ್ದ ಯಶಸ್ವಿ ಜೈಸ್ವಾಲ್ (5 ರನ್) ಹಾಗೂ ಶುಭಮನ್ ಗಿಲ್(9 ರನ್) 3ನೇ ಓವರ್‌ನಲ್ಲಿ ಪೆವಿಲಿಯನ್ ಹಾದಿ ಹಿಡಿದರು. ಆಗ 3ನೇ ವಿಕೆಟ್‌ಗೆ 49 ರನ್ ಜೊತೆಯಾಟ ನಡೆಸಿದ ಸೂರ್ಯಕುಮಾರ್ ಹಾಗೂ ತಿಲಕ್ ವರ್ಮಾ(27 ರನ್,18 ಎಸೆತ) ತಂಡವನ್ನು ಆಧರಿಸಿದರು. ತಿಲಕ್ ವರ್ಮಾ ಹಾಗೂ ಸಂಜು ಸ್ಯಾಮ್ಸನ್(13 ರನ್,9 ಎಸೆತ) ಬೆನ್ನುಬೆನ್ನಿಗೆ ಔಟಾದರು.
ಆಗ ನಾಯಕ ಹಾರ್ದಿಕ್ ಪಾಂಡ್ಯ(14 ರನ್,18 ಎಸೆತ ) ಜೊತೆ ಕೈಜೋಡಿಸಿದ ಸೂರ್ಯಕುಮಾರ್ 5ನೇ ವಿಕೆಟ್‌ಗೆ 43 ರನ್ ಜೊತೆಯಾಟದಲ್ಲಿ ಭಾಗಿಯಾಗಿ ತಂಡದ ಮೊತ್ತ ಹೆಚ್ಚಿಸಲು ಯತ್ನಿಸಿದರು.
ವೆಸ್ಟ್‌ಇಂಡೀಸ್ ಪರ ರೊಮಾರಿಯೊ ಶೆಫರ್ಡ್(4-31)ಯಶಸ್ವಿ ಬೌಲರ್ ಎನಿಸಿಕೊಂಡರು. ಅಕೀಲ್ ಹುಸೇನ್(2-24), ಜೇಸನ್ ಹೋಲ್ಡರ್(2-36), ರೋಸ್ಟನ್ ಚೇಸ್(1-25) 5 ವಿಕೆಟ್ ಹಂಚಿಕೊಂಡರು.