ಮೊದಲ ಏಕದಿನ: ವೆಸ್ಟ್ಇಂಡೀಸ್ ವಿರುದ್ದ ಆಸ್ಟ್ರೇಲಿಯಕ್ಕೆ 8 ವಿಕೆಟ್ ಜಯ

Update: 2024-02-02 15:32 GMT

Photo: PTI 

ಮೆಲ್ಬರ್ನ್: ನಾಯಕ ಸ್ಟೀವ್ ಸ್ಮಿತ್(ಔಟಾಗದೆ 79 ರನ್), ಆಲ್ರೌಂಡರ್ ಕ್ಯಾಮರೂನ್ ಗ್ರೀನ್(ಔಟಾಗದೆ 77 ರನ್) ಹಾಗೂ ಆರಂಭಿಕ ಆಟಗಾರ ಜೋಸ್ ಇಂಗ್ಲಿಸ್(65 ರನ್) ಆಕರ್ಷಕ ಅರ್ಧಶತಕಗಳ ನೆರವಿನಿಂದ ಆಸ್ಟ್ರೇಲಿಯ ಕ್ರಿಕೆಟ್ ತಂಡ ಶುಕ್ರವಾರ ನಡೆದ 3 ಪಂದ್ಯಗಳ ಏಕದಿನ ಸರಣಿಯ ಆರಂಭಿಕ ಪಂದ್ಯದಲ್ಲಿ ವೆಸ್ಟ್ಇಂಡೀಸ್ ತಂಡವನ್ನು 8 ವಿಕೆಟ್ ಅಂತರದಿಂದ ಮಣಿಸಿದೆ.

ಸ್ಮಿತ್ ಹಾಗೂ ಗ್ರೀನ್3ನೇ ವಿಕೆಟ್ ಗೆ ಮುರಿಯದ ಜೊತೆಯಾಟದಲ್ಲಿ 149 ರನ್ ಸೇರಿಸಿದರೆ, ಇಂಗ್ಲಿಸ್ ಬಿರುಸಿನ ಅರ್ಧಶತಕ ಗಳಿಸಿದರು. ಹೀಗಾಗಿ ಆಸ್ಟ್ರೇಲಿಯ 232 ರನ್ ಗುರಿಯನ್ನು 39 ಓವರ್ನೊಳಗೆ ತಲುಪಿತು.

ಸ್ಮಿತ್ 79 ಎಸೆತಗಳಲ್ಲಿ 79 ರನ್ ಗಳಿಸಿದರೆ, ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಗ್ರೀನ್ 104 ಎಸೆತಗಳಲ್ಲಿ ಔಟಾಗದೆ 77 ರನ್ ಗಳಿಸಿದರು.

ಆರಂಭಿಕ ಬ್ಯಾಟರ್ ಇಂಗ್ಲಿಸ್ 43 ಎಸೆತಗಳಲ್ಲಿ 10 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 65 ರನ್ ಗಳಿಸಿ ಆಸೀಸ್ ರನ್ ಚೇಸ್ ಗೆ ವೇದಿಕೆ ನಿರ್ಮಿಸಿಕೊಟ್ಟರು.

ಇದು ಆಸ್ಟ್ರೇಲಿಯವು ಏಕದಿನ ಕ್ರಿಕೆಟ್ ನಲ್ಲಿ ಗಳಿಸಿದ ಸತತ 10ನೇ ಗೆಲುವು. ಇದರಲ್ಲಿ ಕಳೆದ ವರ್ಷ ಭಾರತ ವಿರುದ್ಧ ವಿಶ್ವಕಪ್ ಗೆಲುವು ಕೂಡ ಸೇರಿದೆ.

ಮೊದಲ ಪಂದ್ಯವನ್ನು ಸೋತಿರುವ ವೆಸ್ಟ್ಇಂಡೀಸ್ ಇದೀಗ ಸರಣಿ ಕ್ಲೀನ್ ಸ್ವೀಪ್ ನಿಂದ ಪಾರಾಗಬೇಕಾದ ಒತ್ತಡದಲ್ಲಿದೆ.

ಚೊಚ್ಚಲ ಪಂದ್ಯವನ್ನಾಡಿದ ಆಸ್ಟ್ರೇಲಿಯದ ವೇಗದ ಬೌಲರ್ ಕ್ಸೇವಿಯರ್ ಬಾರ್ಟ್ಲೆಟ್ 9 ಓವರ್ಗಳಲ್ಲಿ 17 ರನ್ ಗೆ 4 ವಿಕೆಟ್ ಗಳನ್ನು ಉರುಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.

ಗ್ರೀನ್ 62 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರೆ, ಸ್ಮಿತ್ 58 ಎಸೆತಗಳಲ್ಲಿ 50 ರನ್ ಗಳಿಸಿದ್ದಾರೆ. ಮ್ಯಾಥ್ಯೂ ಫೋರ್ಡ್ ಎಸೆದ 4ನೇ ಓವರ್ನಲ್ಲಿ ಮೂರು ಬೌಂಡರಿ ಗಳಿಸಿದ್ದ ಇಂಗ್ಲಿಸ್ ಕೇವಲ 28 ಎಸೆತಗಳಲ್ಲಿ ಅರ್ಧಶತಕವನ್ನು ಪೂರೈಸಿದರು. ಗುಡಕೇಶ್ ಮೋಟಿ ಬೌಲಿಂಗ್ನಲ್ಲಿ ರಿವರ್ಸ್ಸ್ವೀಪ್ಗೆ ಯತ್ನಿಸಿದ ಇಂಗ್ಲಿಸ್, ಅಥನಾಝ್ಗೆ ಕ್ಯಾಚ್ ನೀಡಿದರು. ಇಂಗ್ಲಿಸ್ ಔಟಾದಾಗ ಆಸ್ಟ್ರೇಲಿಯ 84 ರನ್ ಗೆ 2 ವಿಕೆಟ್ ಕಳೆದುಕೊಂಡಿತು.

*ವೆಸ್ಟ್ಇಂಡೀಸ್ 231: ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ವೆಸ್ಟ್ಇಂಡೀಸ್ 48.4 ಓವರ್ಗಳಲ್ಲಿ 231 ರನ್ಗೆ ಆಲೌಟಾಯಿತು. ಕೀಸಿ ಕಾರ್ಟಿ 108 ಎಸೆತಗಳಲ್ಲಿ 88 ರನ್ ಗೆ ವಿಕೆಟ್ ಒಪ್ಪಿಸುವ ಮೂಲಕ ತನ್ನ ಚೊಚ್ಚಲ ಏಕದಿನ ಶತಕದಿಂದ ವಂಚಿತರಾದರು.

ಸಹ ವೇಗಿ ಲ್ಯಾನ್ಸ್ ಮೊರಿಸ್(0-59) ಜೊತೆ ಮೊತ್ತ ಮೊದಲ ಏಕದಿನ ಪಂದ್ಯವನ್ನಾಡಿದ ಬಾರ್ಟ್ಲೆಟ್ ಆರಂಭಿಕ ಬ್ಯಾಟರ್ ಜಸ್ಟಿನ್ ಗ್ರೀವ್ಸ್(1 ರನ್) ಹಾಗೂ ಅಲಿಕ್ ಅಲ್ಕರಾಝ್(5ರನ್)ವಿಕೆಟನ್ನು ಪಡೆದು ಕನಸಿನ ಆರಂಭ ಪಡೆದರು.

ಉತ್ತಮವಾಗಿ ಚೆಂಡನ್ನು ಸ್ವಿಂಗ್ ಮಾಡಿದ ಬಾರ್ಟ್ಲೆಟ್ ನಾಯಕ ಶಾಯ್ ಹೋಪ್(12ರನ್)ವಿಕೆಟನ್ನು ಉರುಳಿಸಿದರು. ರೋಸ್ಟನ್ ಚೇಸ್ ಹಾಗೂ ಕಾರ್ಟಿ 5ನೇ ವಿಕೆಟ್ಗೆ 110 ರನ್ ಜೊತೆಯಾಟದಲ್ಲಿ ಭಾಗಿಯಾದರು. ಚೇಸ್(59 ರನ್, 67 ಎಸೆತ)ಸ್ವೀಪ್ ಮಾಡಲು ಯತ್ನಿಸುವಾಗ ಎಡಗೈ ಸ್ಪಿನ್ನರ್ ಝಂಪಾಗೆ ವಿಕೆಟ್ ಒಪ್ಪಿಸಿದರು. ಕಾರ್ಟಿ ರನೌಟಾಗುವ ಮೂಲಕ ಶತಕದಿಂದ ವಂಚಿತರಾದರು.

ಆಸೀಸ್ ಬೌಲಿಂಗ್ನಲ್ಲಿ ಬಾರ್ಟ್ಲೆಟ್ (4-17)ಯಶಸ್ವಿ ಪ್ರದರ್ಶನ ನೀಡಿದರೆ, ಕ್ಯಾಮರೂನ್ ಗ್ರೀನ್(2-40) ಹಾಗೂ ಸೀನ್ ಅಬಾಟ್(2-42) ತಲಾ ಎರಡು ವಿಕೆಟ್ ಗಳನ್ನು ಪಡೆದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News