ಮೊದಲ ಟೆಸ್ಟ್: ಭಾರತದ ವಿರುದ್ಧ ವೆಸ್ಟ್ಇಂಡೀಸ್ ಕಳಪೆ ಆರಂಭ
ಡೊಮಿನಿಕಾ: ಭಾರತ ವಿರುದ್ಧ ಬುಧವಾರ ಆರಂಭವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ 45 ಓವರ್ಗಳ ಅಂತ್ಯಕ್ಕೆ 103 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಗಳನ್ನು ಕಳೆದುಕೊಂಡು ಕಳಪೆ ಆರಂಭ ಪಡೆದಿದೆ. ಟಾಸ್ ಜಯಿಸಿದ ವೆಸ್ಟ್ ಇಂಡೀಸ್ ನಾಯಕ ಕ್ರೆಗ್ ಬ್ರಾತ್ವೇಟ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.
ಇನಿಂಗ್ಸ್ ಆರಂಭಿಸಿದ ನಾಯಕ ಬ್ರಾತ್ವೇಟ್(20 ರನ್, 46 ಎಸೆತ)ಹಾಗೂ ತ್ಯಾಗನರೇನ್ ಚಂದರ್ಪಾಲ್(12 ರನ್,44 ಎಸೆತ)ಮೊದಲ ವಿಕೆಟ್ಗೆ 31 ರನ್ ಸೇರಿಸಿ ಸಾಧಾರಣ ಆರಂಭ ನೀಡಿದರು. ಈ ಜೋಡಿಯನ್ನು ಸ್ಪಿನ್ನರ್ ಆರ್.ಅಶ್ವಿನ್ ಬೇರ್ಪಡಿಸಿದರು.
ರೇಮನ್ ರೆಫೆರ್(2 ರನ್) ಹಾಗೂ ಬ್ಲಾಕ್ವುಡ್(14 ರನ್)ಬೇಗನೆ ವಿಕೆಟ್ ಒಪ್ಪಿಸಿದರು. ಅಲಿಕ್ ಅಥನಾಝ್ (ಔಟಾಗದೆ 34 ರನ್) ಹಾಗೂ ಜೇಸನ್ ಹೋಲ್ಡರ್(ಔಟಾಗದೆ 11) ಕ್ರೀಸ್ ಕಾಯ್ದುಕೊಂಡಿದ್ದಾರೆ. ಅಶ್ವಿನ್(2-34) ಹಾಗೂ ರವೀಂದ್ರ ಜಡೇಜ(2-24) ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಶಾರ್ದೂಲ್ ಠಾಕೂರ್(1-15) ಒಂದು ವಿಕೆಟ್ ಪಡೆದರು.
ಭಾರತದ 21ರ ಹರೆಯದ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಹಾಗೂ ವಿಕೆಟ್ಕೀಪರ್-ಬ್ಯಾಟರ್ ಇಶಾನ್ ಕಿಶನ್ ಟೆಸ್ಟ್ ಕ್ರಿಕೆಟಿಗೆ ಪಾದಾರ್ಪಣೆಗೈದರು. ಸ್ಥಳೀಯ ಆಟಗಾರ ಅಲಿಕ್ ಅಥನಾಝ್ ವೆಸ್ಟ್ಇಂಡೀಸ್ ಪರ ಚೊಚ್ಚಲ ಪಂದ್ಯವನ್ನಾಡಿದರು.
ಈ ವರ್ಷದ ಐಪಿಎಲ್ ನಲ್ಲಿ ಮಿಂಚಿದ್ದ ಜೈಸ್ವಾಲ್ ನಾಯಕ ರೋಹಿತ್ ಶರ್ಮಾರಿಂದ ಟೆಸ್ಟ್ ಕ್ಯಾಪ್ ಸ್ವೀಕರಿಸಿದರೆ, ಇಶಾನ್ ಗೆ ರನ್ ಮಿಶನ್ ವಿರಾಟ್ ಕೊಹ್ಲಿ ಟೆಸ್ಟ್ ಕ್ಯಾಪ್ ನೀಡಿದರು. ಜೈಸ್ವಾಲ್, ರೋಹಿತ್ರೊಂದಿಗೆ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಇಶಾನ್ ಮಧ್ಯಮ ಸರದಿಯಲ್ಲಿ ಆಡಲಿದ್ದಾರೆ.
ಯಶಸ್ವಿ ಜೈಸ್ವಾಲ್ ಸದ್ಯ 15 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯದಲ್ಲಿ 71.28 ಸರಾಸರಿ ಹೊಂದಿದ್ದಾರೆ. ವಿನೋದ್ ಕಾಂಬ್ಳಿ ಚೊಚ್ಚಲ ಟೆಸ್ಟ್ ಪಂದ್ಯ ಆಡುವಾಗ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಗರಿಷ್ಠ ಸರಾಸರಿ(27 ಪಂದ್ಯ, 88.37)ಹೊಂದಿದ್ದರು.