ಮೊದಲ ಟ್ವೆಂಟಿ-20: ಭಾರತದ ಗೆಲುವಿಗೆ 150 ರನ್ ಗುರಿ ನೀಡಿದ ವಿಂಡೀಸ್
ಟ್ರಿನಿಡಾಡ್: ನಾಯಕ ರೊವ್‌ಮನ್ ಪೊವೆಲ್(48 ರನ್, 32 ಎಸೆತ) ಹಾಗೂ ನಿಕೊಲಸ್ ಪೂರನ್(41 ರನ್, 34 ಎಸೆತ)ಒಂದಷ್ಟು ಪ್ರತಿರೋಧ ಒಡ್ಡಿದರೂ ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡ ಭಾರತ ವಿರುದ್ಧ ಮೊದಲ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 149 ರನ್ ಗಳಿಸಲಷ್ಟೇ ಶಕ್ತವಾಯಿತು. ಅತ್ಯುತ್ತಮ ಬೌಲಿಂಗ್ ಸಂಘಟಿಸಿದ ಭಾರತವು ಆತಿಥೇಯ ವಿಂಡೀಸ್ ತಂಡವನ್ನು 150ರೊಳಗೆ ನಿಯಂತ್ರಿಸಿತು.
ಗುರುವಾರ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ 4.1ನೇ ಓವರ್‌ನಲ್ಲಿ ಆರಂಭಿಕ ಬ್ಯಾಟರ್ ಕೈಲ್ ಮೇಯರ್ಸ್(1) ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆಯಿತು. ಸ್ಪಿನ್ನರ್ ಯಜುವೇಂದ್ರ ಚಹಾಲ್(2-24)ವಿಂಡೀಸ್‌ಗೆ ಆರಂಭಿಕ ಆಘಾತ ನೀಡಿದರು.
ಬ್ರೆಂಡನ್ ಕಿಂಗ್(28 ರನ್, 19 ಎಸೆತ) ಹಾಗೂ ಜಾನ್ಸನ್ ಚಾರ್ಲ್ಸ್(3 ರನ್) ಔಟಾದಾಗ ಜೊತೆಯಾದ ಪೂರನ್ ಹಾಗೂ ಪೊವೆಲ್ 4ನೇ ವಿಕೆಟ್‌ಗೆ 38 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಪೂರನ್ ಔಟಾದ ನಂತರ ಹೆಟ್ಮೆಯರ್(10 ರನ್, 12 ಎಸೆತ) ಜೊತೆಗೂಡಿದ ಪೊವೆಲ್ 5ನೇ ವಿಕೆಟ್‌ಗೆ ಇನ್ನೂ 38 ರನ್ ಸೇರಿಸಿದರು. ವಿಂಡೀಸ್ ಪರ ನಾಯಕ ಪೊವೆಲ್ ಗರಿಷ್ಠ ಸ್ಕೋರ್ ಗಳಿಸಿದರು.
ಭಾರತದ ಪರ ಚಹಾಲ್(2-24) ಹಾಗೂ ಅರ್ಷದೀಪ್ ಸಿಂಗ್(2-31) ತಲಾ ಎರಡು ವಿಕೆಟ್‌ಗಳನ್ನು ಪಡೆದರು. ಕುಲದೀಪ್ ಯಾದವ್(1-20) ಹಾಗೂ ಹಾರ್ದಿಕ್ ಪಾಂಡ್ಯ(1-27)ತಲಾ ಒಂದು ವಿಕೆಟ್ ಪಡೆದರು.
ವಿಂಡೀಸ್ ತಂಡದಲ್ಲಿ ಪೂರನ್ ಹಾಗೂ ಜೇಸನ್ ಹೋಲ್ಡರ್ ಆಡುವ ಬಳಗಕ್ಕೆ ಪುನರಾರಂಭ ಮಾಡಿದರು. ಭಾರತದ ವೇಗಿ ಮುಕೇಶ್ ಕುಮಾರ್ ಹಾಗೂ ಬ್ಯಾಟರ್ ತಿಲಕ್ ವರ್ಮಾ ಮೊದಲ ಬಾರಿ ಟಿ-20ಯಲ್ಲಿ ಆಡುವ ಅವಕಾಶ ಪಡೆದರು.