ನಮ್ಮ ಪಾಲಿಗೆ ಎಂದೆಂದಿಗೂ ನೀವೇ ಸ್ಟಾರ್ : ವಿನೇಶ್ ಫೋಗಟ್ ಅರ್ಜಿ ವಜಾಕ್ಕೆ ಬೇಸರ ವ್ಯಕ್ತಪಡಿಸಿದ ಭಾರತದ ಕ್ರೀಡಾಪಟುಗಳು
ಹೊಸದಿಲ್ಲಿ: ತನ್ನ ಒಲಿಂಪಿಕ್ಸ್ ಅನರ್ಹತೆ ವಿರುದ್ಧ ಕುಸ್ತಿಪಟು ವಿನೇಶ್ ಫೋಗಟ್ ಸಲ್ಲಿಸಿರುವ ಮೇಲ್ಮನವಿಯನ್ನು ತಿರಸ್ಕರಿಸಿದ ಕ್ರೀಡಾ ನ್ಯಾಯ ಮಂಡಳಿ(ಸಿಎಎಸ್)ನಿರ್ಧಾರದ ಬಗ್ಗೆ ಭಾರತೀಯ ಕ್ರೀಡಾ ಸಮುದಾಯ ನಿರಾಶೆ ವ್ಯಕ್ತಪಡಿಸಿದೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 100 ಗ್ರಾಂ ಅಧಿಕ ತೂಕದ ಕಾರಣದಿಂದ 50 ಕೆಜಿ ಫೈನಲ್‌ನಿಂದ ಅನರ್ಹಗೊಂಡಿದ್ದನ್ನು ಪ್ರಶ್ನಿಸಿ ವಿನೇಶ್ ಸಲ್ಲಿಸಿದ್ದ ಮನವಿಯನ್ನು ಬುಧವಾರ ಸಿಎಎಸ್‌ನ ತಾತ್ಕಾಲಿಕ ವಿಭಾಗವು ತಿರಸ್ಕರಿಸಿತು. ಈ ಮೂಲಕ ವಿನೇಶ್‌ರ ಬೆಳ್ಳಿ ಪದಕ ಪಡೆಯುವ ಆಸೆಯೂ ಕೈಗೂಡಲಿಲ್ಲ.
ಇದು ನಿರಾಶಾದಾಯಕವಾಗಿದೆ. ಆದರೆ ನಾವು ಅದರ ಬಗ್ಗೆ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಪ್ಯಾರಿಸ್ ಗೇಮ್ಸ್‌ನಲ್ಲಿ ಭಾರತ ಹಾಕಿ ತಂಡ ಸತತ 2ನೇ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆಲ್ಲಲು ನೆರವಾಗಿ ಇತ್ತೀಚೆಗೆ ನಿವೃತ್ತರಾಗಿದ್ದ ಹಾಕಿ ದಂತಕಥೆ ಪಿ.ಆರ್.ಶ್ರೀಜೇಶ್ ಪಿಟಿಐ ವೀಡಿಯೊಗೆ ತಿಳಿಸಿದರು.
ಈ ಕತ್ತಲೆಯಲ್ಲಿ ನಿಮ್ಮ ಪದಕವನ್ನು ಕಸಿದುಕೊಳ್ಳಲಾಗಿದೆ. ನೀವು ಇಂದು ಇಡೀ ಪ್ರಪಂಚದಲ್ಲಿ ವಜ್ರದಂತೆ ಹೊಳೆಯುತ್ತಿದ್ದೀರಿ. ವಿಶ್ವ ವಿಜೇತ ವಿನೇಶ್ ಫೋಗಟ್ ದೇಶದ ಕೊಹಿನೂರ್ ವಜ್ರ. ವಿಶ್ವದೆಲ್ಲೆಡೆ ವಿನೇಶ್ ಫೋಗಟ್ ಬಗ್ಗೆ ಚರ್ಚೆಯಾಗುತ್ತಿದೆ. ಯಾರಿಗೆ ಪದಕ ಬೇಕೊ ಅದನ್ನು 15-15 ರೂಪಾಯಿಗೆ ಖರೀದಿಸಿ. ನಿಜವಾದ ಶ್ರೇಷ್ಠತೆಯನ್ನು ಪದಕಗಳಿಂದ ಮಾತ್ರ ಅಳೆಯಲಾಗುವುದಿಲ್ಲ ಎಂದು ವಿನೇಶ್ ಮೇಲ್ಮನವಿ ವಜಾಗೊಂಡ ನಂತರ ಬಜರಂಗ್ ಪುನಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದು ಬೇಸರ ಸುದ್ದಿ. ಆದರೆ ನಾವು ಏನು ಹೇಳಲು ಸಾಧ್ಯವಿಲ್ಲ. ಒಬ್ಬ ಕ್ರೀಡಾಪಟು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾನೆ. ಯಾರಿಗಾದರೂ ಈ ರೀತಿಯಾದರೆ ಅದು ನೋವುಂಟು ಮಾಡುತ್ತದೆ. ನಮ್ಮ ಪಾಲಿಗೆ ವಿನೇಶ್ ಅವರು ಯಾವಾಗಲೂ ಸ್ಟಾರ್ ಆಗಿಯೇ ಇರುತ್ತಾರೆ ಎಂದು ಹಾಕಿ ಆಟಗಾರ ಜರ್ಮನ್‌ಪ್ರೀತ್ ಸಿಂಗ್ ಹೇಳಿದ್ದಾರೆ.
ಅವರು ತಲೆ ಎತ್ತಿ ನಡೆಯಬೇಕು. ಅವರು ನಮಗೆ ಹಾಗೂ ದೇಶಕ್ಕೆ ಚಾಂಪಿಯನ್ ಆಗಿದ್ದಾರೆ ಎಂದು ಇನ್ನೋರ್ವ ಹಾಕಿ ಆಟಗಾರ ಅಮಿತ್ ರೋಹಿದಾಸ್ ಅಭಿಪ್ರಾಯಪಟ್ಟರು.
ಸಿಎಎಸ್ ತೀರ್ಪು ಅತ್ಯಂತ ದುರದೃಷ್ಟಕರ. ಇದು ನಮಗೆ ತೀವ್ರ ಹಿನ್ನಡೆ ಉಂಟು ಮಾಡಿದೆ. ತೀರ್ಪು ನಮ್ಮ ಪರ ಇರಬಹುದೆಂಬ ವಿಶ್ವಾಸವಿತ್ತು. ಭಾರತೀಯ ಕುಸ್ತಿ ಹಾಗೂ ದೇಶಕ್ಕೆ ಇದು ದುರದೃಷ್ಟಕರ ಸಂಗತಿ ಎಂದು ರಾಷ್ಟ್ರೀಯ ಕುಸ್ತಿ ಕೋಚ್ ವೀರೇಂದ್ರ ದಹಿಯಾ ಹೇಳಿದ್ದಾರೆ.
ಭಾರತದ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷೆ ಪಿ.ಟಿ. ಉಷಾ ನ್ಯಾಯಾಲಯದ ತೀರ್ಪಿಗೆ ಆಘಾತ ಹಾಗೂ ಬೇಸರ ವ್ಯಕ್ತಪಡಿಸಿದರು.