ಫ್ರೆಂಚ್ ಓಪನ್: ಸಾತ್ವಿಕ್‌ಸಾಯಿರಾಜ್-ಚಿರಾಗ್ ಶೆಟ್ಟಿ ಚಾಂಪಿಯನ್

Update: 2024-03-10 17:41 GMT

Photo : olympics

ಪ್ಯಾರಿಸ್: ಭಾರತದ ಅಗ್ರ ಶ್ರೇಯಾಂಕದ ಆಟಗಾರರಾದ ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ 2024ರ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಪುರುಷರ ಡಬಲ್ಸ್ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ರವಿವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸಾತ್ವಿಕ್ ಹಾಗೂ ಚಿರಾಗ್ ಚೈನೀಸ್ ತೈಪೆಯ ಲೀ ಜ್ಹಿ-ಹ್ಯೂ ಹಾಗೂ ಯಾಂಗ್ ಪೊ-ಸುಯಾನ್ ವಿರುದ್ಧ 21-11, 21-17 ನೇರ ಗೇಮ್‌ಗಳ ಅಂತರದಿಂದ ಜಯ ಸಾಧಿಸಿದರು.

ಸಾತ್ವಿಕ್ ಹಾಗೂ ಚಿರಾಗ್ ಈ ಹಿಂದೆ 2022ರಲ್ಲಿ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿದ್ದರು. ಇದೀಗ ಎರಡನೇ ಬಾರಿ ಚಾಂಪಿಯನ್ ಕಿರೀಟ ಧರಿಸಿದರು. ಈ ಜೋಡಿ 2019ರ ಆವೃತ್ತಿಯ ಫ್ರೆಂಚ್ ಓಪನ್ ಟೂರ್ನಿಯಲ್ಲಿ ರನ್ನರ್ಸ್ ಅಪ್ ಆಗಿತ್ತು.

ಸಾತ್ವಿಕ್ ಹಾಗೂ ಚಿರಾಗ್ ಮೊದಲ ಗೇಮ್‌ನ್ನು 21-11ರಿಂದ ಸುಲಭವಾಗಿ ಗೆದ್ದರು. ಎರಡನೇ ಗೇಮ್‌ನಲ್ಲೂ ಹೆಚ್ಚು ಹೋರಾಟವನ್ನು ಎದುರಿಸಲಿಲ್ಲ.

ಮಾಜಿ ಚಾಂಪಿಯನ್‌ಗಳಾದ ಸಾತ್ವಿಕ್ ಹಾಗೂ ಚಿರಾಗ್ ಸೆಮಿ ಫೈನಲ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್‌ಗಳಾದ ದಕ್ಷಿಣ ಕೊರಿಯಾದ ಕಾಂಗ್ ಮಿನ್‌ಹ್ಯೂಕ್ ಹಾಗೂ ಸಿಯೊ ಸೆವುಂಗ್ಜೆ ಅವರನ್ನು ಕೇವಲ 40 ನಿಮಿಷಗಳಲ್ಲಿ 21-13, 21-16 ನೇರ ಗೇಮ್‌ಗಳ ಅಂತರದಿಂದ ಮಣಿಸಿ ಬಿಡಬ್ಲ್ಯುಫ್ ಟೂರ್‌ನಲ್ಲಿ ಈ ವರ್ಷ ಮೂರನೇ ಬಾರಿ ಫೈನಲ್‌ಗೆ ತಲುಪಿದರು.

ಮೊದಲ ಗೇಮ್‌ನಲ್ಲಿ ದಕ್ಷಿಣ ಕೊರಿಯಾ ಆಟಗಾರರು ಕಠಿಣ ಸವಾಲೊಡ್ಡಿದ್ದು 5-5ರಿಂದ ಸಮಬಲಗೊಳಿಸಿದರು. ಸಾತ್ವಿಕ್ ಹಾಗೂ ಚಿರಾಗ್ ತಕ್ಷಣವೇ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದು ಸತತ ಆರು ಪಾಯಿಂಟ್ಸ್ ಗಳಿಸಿದರು. ಆ ನಂತರ ಹಿಂತಿರುಗಿ ನೋಡಿಲ್ಲ.

ಎರಡನೇ ಗೇಮ್‌ನಲ್ಲೂ ಸಾತ್ವಿಕ್ ಹಾಗೂ ಚಿರಾಗ್ ತಮ್ಮ ಶ್ರೇಷ್ಠ ಪ್ರದರ್ಶನ ಮುಂದುವರಿಸಿದರು. ಕಾಂಗ್ ಹಾಗೂ ಸೆಯೊ ಮರಳಿ ಹೋರಾಡಲು ಯತ್ನಿಸಿದರೂ ಸಾತ್ವಿಕ್ ಹಾಗೂ ಚಿರಾಗ್ ಆರಂಭಿಕ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಶಕ್ತರಾದರು. 40 ನಿಮಿಷಗಳ ಹೋರಾಟದಲ್ಲಿ ಭಾರತೀಯ ಜೋಡಿ ವಿಜಯಶಾಲಿಯಾಯಿತು.

ಲಕ್ಷ್ಯ ಸೇನ್‌ಗೆ ಸೋಲು: ಪುರುಷರ ಸಿಂಗಲ್ಸ್ ಸ್ಪರ್ಧಾವಳಿಯ ಸೆಮಿ ಫೈನಲ್‌ನಲ್ಲಿ ವಿಶ್ವದ ನಂ.19ನೇ ಆಟಗಾರ ಲಕ್ಷ್ಯ ಸೇನ್ ಸೋಲನುಭವಿಸಿ ನಿರಾಸೆಗೊಳಿಸಿದರು.

ಲಕ್ಷ್ಯ ಸೇನ್ ಥಾಯ್ಲೆಂಡ್‌ನ 8ನೇ ರ್ಯಾಂಕಿನ ಕುನ್ಲವುಟ್ ವಿಟಿಡ್‌ಸರ್ನ್ ವಿರುದ್ಧ 21-19, 13-21, 11-21 ಅಂತರದಿಂದ ಸೋತಿದ್ದಾರೆ.

ಸೇನ್ ಆರಂಭದಲ್ಲಿ ಮೊದಲ ಗೇಮ್‌ನಲ್ಲಿ 6-3 ಮುನ್ನಡೆ ಪಡೆದು ಪ್ರಾಬಲ್ಯ ಸಾಧಿಸಿದರು. ಪ್ರತಿ ಹೋರಾಟ ನೀಡಿದ ಕುನ್ಲವುಟ್ 15-15ರಿಂದ ಸಮಬಲಗೊಳಿಸಿದರು. ಸೇನ್ ತನ್ನ ಕೌಶಲ್ಯವನ್ನು ಪ್ರದರ್ಶಿಸಿ, ಶಕ್ತಿಶಾಲಿ ಸ್ಮ್ಯಾಶ್‌ಗಳ ಮೂಲಕ ಮೊದಲ ಗೇಮ್ ಅನ್ನು 21-19 ಅಂತರದಿಂದ ಜಯಿಸಿದರು.

ಸೇನ್ ಎರಡನೇ ಗೇಮ್‌ನಲ್ಲಿ ಕಳಪೆ ಪ್ರದರ್ಶನ ನೀಡಿ ಕುನ್ಲವುಟ್ ಮರು ಹೋರಾಡಲು ಅನುವು ಮಾಡಿಕೊಟ್ಟರು. ಥಾಯ್ಲೆಂಡ್ ಶಟ್ಲರ್ ಮೂರನೇ ಗೇಮ್‌ನಲ್ಲೂ ತನ್ನ ಪ್ರಾಬಲ್ಯ ಮುಂದುವರಿಸಿದ್ದು ಫೈನಲ್‌ನಲ್ಲಿ ತನ್ನ ಸ್ಥಾನ ಪಡೆದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News