ಕ್ರಿಕೆಟ್‌ಗೆ ಗುರ್ಕೀರತ್ ಸಿಂಗ್ ಮಾನ್ ವಿದಾಯ
ಮುಂಬೈ: 2016ರಲ್ಲಿ ನಡೆದ ಆಸ್ಟ್ರೇಲಿಯ ಪ್ರವಾಸದಲ್ಲಿ ಮೂರು ಏಕದಿನ ಪಂದ್ಯಗಳನ್ನು ಆಡಿರುವ ಗುರ್ಕೀರತ್ ಸಿಂಗ್ ಮಾನ್ ಶುಕ್ರವಾರ ಅಂತರ್‌ರಾಷ್ಟ್ರೀಯ ಮತ್ತು ಭಾರತೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
ಆಸ್ಟ್ರೇಲಿಯ ವಿರುದ್ಧದ ಏಕದಿನ ಸರಣಿಯಲ್ಲಿ, 33 ವರ್ಷದ ಆಟಗಾರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಜೊತೆಗೆ 10 ಓವರ್‌ಗಳನ್ನು ಬೌಲ್ ಮಾಡಿದ್ದರು.
ಪಂಜಾಬ್ ತಂಡದಲ್ಲಿ ಆಗಾಗ ಸ್ಥಾನ ಪಡೆಯುತ್ತಾ ಆಗಾಗ ಹೊರಬೀಳುತ್ತಿದ್ದ ಅವರು ಅಂತಿಮವಾಗಿ ನಿವೃತ್ತಿ ಘೋಷಿಸಿದ್ದಾರೆ. ಅವರು ತನ್ನ ಕೊನೆಯ ಐಪಿಲ್ ಪಂದ್ಯವನ್ನು 2020ರ ಋತುವಿನಲ್ಲಿ ಆಡಿದ್ದರು.
‘‘ನನ್ನ ಅಮೋಘ ಕ್ರಿಕೆಟ್ ಪ್ರಯಾಣಕ್ಕೆ ಇಂದು ನಾನು ಕೊನೆಯನ್ನು ಘೋಷಿಸುತ್ತಿದ್ದೇನೆ. ಭಾರತದ ಪರವಾಗಿ ಆಡಿರುವುದು ನನ್ನ ಭಾಗ್ಯವಾಗಿತ್ತು’’ ಎಂದು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.
2015-16ರ ರಣಜಿ ಟ್ರೋಫಿಯ ಅವಧಿಯಲ್ಲಿ ಅವರು ಅತ್ಯುತ್ತಮ ಫಾರ್ಮ್‌ನಲ್ಲಿದ್ದರು. ಆಗ ಅವರು ದ್ವಿಶತಕವೊಂದನ್ನು ಬಾರಿಸಿದ್ದರು.
2021-22ರ ವಿಜಯ್ ಹಝಾರೆ ಟ್ರೋಫಿಯಲ್ಲಿ ಅವರು ಪಂಜಾಬ್‌ನ ಗರಿಷ್ಠ ರನ್ ಗಳಿಕೆದಾರರಾಗಿದ್ದರು.
ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್, ಡೆಲ್ಲಿ ಡೇರ್‌ಡೆವಿಲ್ಸ್ (ಈಗ ಡೆಲ್ಲಿ ಕ್ಯಾಪಿಟಲ್ಸ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಆಡಿದದರು.
ಅವರು ಇನ್ನು ವಿದೇಶಗಳ ಟಿ20 ಲೀಗ್‌ಗಳಲ್ಲಿ ಆಡುವ ಸಾಧ್ಯತೆಯಿದೆ.