ಹಾರ್ದಿಕ್ ಪಾಂಡ್ಯ ಅವರ ಬೌಲಿಂಗ್, ನಾಯಕತ್ವ ವಿಫಲವಾಗಿದೆ: ಸುನೀಲ್ ಗವಾಸ್ಕರ್ ಕಿಡಿ
ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ರವಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ಮುಂಬೈ ಇಂಡಿಯನ್ಸ್ ತಂಡವು ನಾಲ್ಕನೇ ಸೋಲು ಕಂಡ ನಂತರ ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾಗೂ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಟೀಕೆಗೆ ಗುರಿಯಾಗಿದ್ದಾರೆ. ಪಾಂಡ್ಯ ಅವರ ಬೌಲಿಂಗ್ ಹಾಗೂ ನಾಯಕತ್ವ ವಿಫಲವಾಗಿದೆ ಎಂದು ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಟೀಕಿಸಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ವಹಿಸಿಕೊಂಡಿರುವ ಪಾಂಡ್ಯ ಅವರಿಗೆ ಅಭಿಮಾನಿಗಳಿಂದಲೇ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತಮ್ಮ ತಂಡ ಸೋಲು ಕಂಡ ನಂತರ ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ. ಗವಾಸ್ಕರ್ ಹಾಗೂ ಇಂಗ್ಲೆಂಡ್ ನ ಮಾಜಿ ನಾಯಕ ಕೆವಿನ್ ಪೀಟರ್ಸನ್ ಕೂಡ ಪಾಂಡ್ಯ ವಿರುದ್ಧ ಕಿಡಿಕಾರಿದ್ದಾರೆ.
ಸಿಎಸ್ಕೆ ತಂಡದ ಪರವಾಗಿ ಕೊನೆಯ ಓವರ್ನಲ್ಲಿ ಬ್ಯಾಟಿಂಗ್ಗೆ ಆಗಮಿಸಿದ್ದ ಎಂ.ಎಸ್.ಧೋನಿ ಅವರು ಹಾರ್ದಿಕ್ ಪಾಂಡ್ಯ ಅವರ ಎಸೆತದಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ್ದರು. ಒಟ್ಟು 20 ರನ್ ಕಲೆ ಹಾಕಿದ್ದರು. ಚೆನ್ನೈ ತಂಡವು ಮುಂಬೈ ವಿರುದ್ಧ 20 ರನ್ ಗಳ ಜಯ ದಾಖಲಿಸಿತ್ತು.
ಪಾಂಡ್ಯ ಅವರ ಬೌಲಿಂಗ್ ಹಾಗೂ ನಾಯಕತ್ವ ಉತ್ತಮವಾಗಿರಲಿಲ್ಲ. ಸಿಎಸ್ಕೆ ಪರವಾಗಿ ಶಿವಂ ದುಬೆ ಹಾಗೂ ಋತುರಾಜ್ ಗಾಯಕ್ವಾಡ್ ಅತ್ಯುತ್ತಮ ಬ್ಯಾಟಿಂಗ್ ಮಾಡಿದ್ದರು. ಆದರೆ ಮುಂಬೈ ತಂಡವನ್ನು 185-190 ರನ್ ಗೆ ಕಟ್ಟಿಹಾಕಬೇಕಾಗಿತ್ತು. ಬಹುಶಃ ನಾನು ದೀರ್ಘಕಾಲದಿಂದ ನೋಡಿದ್ದರಲ್ಲಿ ಅತ್ಯಂತ ಕೆಟ್ಟ ರೀತಿಯ ಬೌಲಿಂಗ್ ಅದಾಗಿತ್ತು ಎಂದು ಗವಾಸ್ಕರ್ ಹೇಳಿದ್ದಾರೆ.
ಧೋನಿ ಸಿಕ್ಸರ್ ಹೊಡೆಯಲೆಂದೇ ಅಂತಹ ಎಸೆತಗಳನ್ನು ನೀಡಿದಂತಿತ್ತು. ಯಾವುದೇ ಬೌಲರ್ ಗೆ ಒಂದು ಸಿಕ್ಸರ್ ಹೊಡೆಯುವುದು ಸಾಮಾನ್ಯ. ಆದರೆ ಈ ಬ್ಯಾಟರ್ ಸಿಕ್ಸರ್ ಹೊಡೆಯಲೆಂದೇ ಸಜ್ಜಾಗಿದ್ದಾಗ ಅವರಿಗೆ ಮತ್ತೊಂದು ಲೆಂಗ್ತ್ ಬಾಲ್ ಹಾಕಿದ್ದು ಸರಿಯಲ್ಲ. ಬಳಿಕ ಮತ್ತೊಂದು ಫುಲ್ಟಾಸ್ ಹಾಕಿದ್ದರಿಂದಲೇ ಅವರಿಗೆ ಇನ್ನೊಂದು ಸಿಕ್ಸರ್ ಹೊಡೆಯಲು ಸುಲಭವಾಯಿತು ಎಂದರು.
ಪೀಟರ್ಸನ್ ಕಿಡಿ:
ಹಾರ್ದಿಕ್ ಪಾಂಡ್ಯ ಅವರ ಮೇಲೆ ಮೈದಾನದಲ್ಲಿನ ಅಭಿಮಾನಿಗಳ ಅಬ್ಬರವೂ ಕೂಡ ಪರಿಣಾಮ ಬೀರುತ್ತಿದೆ ಎಂದು ನಾನು ಭಾವಿಸುತ್ತೇನೆ. ಅವರು ಟಾಸ್ ವೇಳೆ ನಗುತ್ತಾರೆ. ತುಂಬಾ ಸಂತೋಷವಾಗಿರುವಂತೆ ತೋರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಅವರು ಸಂತೋಷವಾಗಿರುವುದಿಲ್ಲ. ನಾನು ಕೂಡ ಆ ಹಂತ ದಾಟಿದ್ದೇನೆ. ಹೀಗಾಗಿ ಅದೆಲ್ಲವೂ ನಿಮ್ಮ ಮೇಲೆ ಪರಿಣಾಮಬೀರುತ್ತದೆ ಎಂದು ನಾನು ಹೇಳಬಲ್ಲೆ ಎಂದು 43 ವರ್ಷದ ಮಾಜಿ ಬ್ಯಾಟರ್ ಪೀಟರ್ಸನ್ ಹೇಳಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡವು ಎ.18ರಂದು ಚಂಡೀಗಡದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಾಡಲಿದೆ.