ಸ್ಪರ್ಧಾತ್ಮಕ ಕ್ರಿಕೆಟಿಗೆ ಹಾರ್ದಿಕ್ ಪಾಂಡ್ಯ ಪುನರಾಗಮನ
ನವಿ ಮುಂಬೈ: ದೀರ್ಘ ಸಮಯದಿಂದ ಕಾಡುತ್ತಿದ್ದ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಭಾರತದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸೋಮವಾರ ಸ್ಪರ್ಧಾತ್ಮಕ ಕ್ರಿಕೆಟ್ ಗೆ ವಾಪಸಾಗಿದ್ದಾರೆ.
ಡಿ.ವೈ.ಪಾಟೀಲ್ ಟಿ-20 ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಂಡ್ಯ 3 ಓವರ್ಗಳಲ್ಲಿ 22 ರನ್ ಗೆ 2 ವಿಕೆಟ್ ಪಡೆದಿದ್ದಾರೆ. ಪಾಂಡ್ಯ ಪ್ರತಿನಿಧಿಸಿರುವ ರಿಲಯನ್ಸ್ ವನ್ ತಂಡವು ಭಾರತ್ ಪೆಟ್ರೋಲಿಯಮ್ ಕಾರ್ಪೋರೇಶನ್ ಲಿಮಿಟೆಡ್ ತಂಡದ ವಿರುದ್ಧ ಡಿವೈ ಪಾಟೀಲ್ ಕ್ರಿಕೆಟ್ ಅಕಾಡಮಿಯಲ್ಲಿ ನಡೆದ ಕಡಿಮೆ ಮೊತ್ತದ ಪಂದ್ಯದಲ್ಲಿ 2 ವಿಕೆಟ್ ಜಯ ಸಾಧಿಸಿದೆ.
ಅಕ್ಟೋಬರ್ನಲ್ಲಿ ಪುಣೆಯಲ್ಲಿ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಕಾಲುನೋವಿಗೆ ಒಳಗಾದ ನಂತರ ಪಾಂಡ್ಯ ಸಕ್ರಿಯ ಕ್ರಿಕೆಟ್ನಿಂದ ದೂರ ಉಳಿದಿದ್ದರು. ಇದೀಗ ಅವರು ಮುಂಬರುವ ಐಪಿಎಲ್ಗೆ ವಾಪಸಾಗಲು ಸಜ್ಜಾಗುತ್ತಿದ್ದಾರೆ. ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ನೂತನ ನಾಯಕನಾಗಿ ಪಾಂಡ್ಯ ಆಯ್ಕೆಯಾಗಿದ್ದಾರೆ.
ರಿಲಯನ್ಸ್ ವನ್ ತಂಡದಲ್ಲಿ ಮುಂಬೈ ಇಂಡಿಯನ್ಸ್ ಆಟಗಾರರಾದ ತಿಲಕ್ ವರ್ಮಾ, ನೇಹಾಲ್ ವಧೇರ, ಆಕಾಶ್ ಮಧ್ವಾಲ್, ನಮನ್ ಧಿರ್ ಹಾಗೂ ಪಿಯೂಷ್ ಚಾವ್ಲಾ ಅವರಿದ್ದಾರೆ.
ಡಿ.ವೈ.ಪಾಟೀಲ್ ಟಿ-20 ಕಪ್ ಕಾರ್ಪೋರೇಟ್ ಟೂರ್ನಮೆಂಟ್ ಆಗಿದ್ದು ಒಟ್ಟು 16 ತಂಡಗಳು ಭಾಗವಹಿಸುತ್ತಿವೆ.
ಭಾರತದ ವಿಕೆಟ್ಕೀಪರ್-ಬ್ಯಾಟರ್ ಇಶಾನ್ ಕಿಶನ್ ವಿಶ್ವಕಪ್ ನಂತರ ಕ್ರಿಕೆಟ್ನಿಂದ ದೂರ ಉಳಿದಿದ್ದು, ಸ್ಪರ್ಧಾತ್ಮಕ ಕ್ರಿಕೆಟಿಗೆ ವಾಪಸಾಗಲಿದ್ದಾರೆ. ಕಿಶನ್ ಮಂಗಳವಾರ ಆರ್ ಬಿ ಐ ಪರ ಆಡಲಿದ್ದಾರೆ.