14 ವರ್ಷಗಳ ಹಳೆಯ ಸಿಕ್ಸರ್ ದಾಖಲೆಯನ್ನು ಉತ್ತಮಪಡಿಸಿಕೊಂಡ ಹರಿಣ ಪಡೆ
ಚಟ್ಟೋಗ್ರಾಮ್ : ಬಾಂಗ್ಲಾದೇಶ ವಿರುದ್ಧ ಬುಧವಾರ 2ನೇ ಟೆಸ್ಟ್ ಪಂದ್ಯದ ವೇಳೆ ಬೃಹತ್ ಮೊತ್ತ ಗಳಿಸಿರುವ ದಕ್ಷಿಣ ಆಫ್ರಿಕಾ ತಂಡವು ಸಿಕ್ಸರ್ ಸಿಡಿಸುವಿಕೆಯಲ್ಲಿ ತನ್ನ 14 ವರ್ಷಗಳ ಹಳೆಯ ದಾಖಲೆಯೊಂದನ್ನು ಉತ್ತಮಪಡಿಸಿಕೊಂಡಿದೆ.
ಹರಿಣ ಪಡೆ ದ್ವಿತೀಯ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಒಟ್ಟು 17 ಸಿಕ್ಸರ್‌ಗಳನ್ನು ಸಿಡಿಸಿದೆ. 2010ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ದಾಖಲಿಸಿದ್ದ ತನ್ನ ಶ್ರೇಷ್ಠ ಪ್ರದರ್ಶನ(15 ಸಿಕ್ಸರ್)ವನ್ನು ಉತ್ತಮಪಡಿಸಿಕೊಂಡಿದೆ.
ಎರಡನೇ ದಿನದಾಟವಾದ ಬುಧವಾರ 2 ವಿಕೆಟ್‌ಗಳ ನಷ್ಟಕ್ಕೆ 307 ರನ್‌ನಿಂದ ತನ್ನ ಮೊದಲ ಇನಿಂಗ್ಸ್ ಮುಂದುವರಿಸಿದ ದಕ್ಷಿಣ ಆಫ್ರಿಕಾ ತಂಡವು ಬ್ಯಾಟಿಂಗ್‌ನಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದಿದ್ದು 144.2 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 577 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿದೆ. ನಾಯಕ ಮರ್ಕ್ರಮ್ 55 ಎಸೆತಗಳಲ್ಲಿ 2 ಬೌಂಡರಿ ಸಹಿತ 33 ರನ್ ಗಳಿಸಿದರು.
ಔಟಾಗದೆ 141 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಆರಂಭಿಕ ಆಟಗಾರ ಟೋನಿ ಡಿ ರೆರ್ಝಿ ಅವರು ತೈಜುಲ್ ಇಸ್ಲಾಂಗೆ ವಿಕೆಟ್ ಒಪ್ಪಿಸುವ ಮೊದಲು 269 ಎಸೆತಗಳಲ್ಲಿ 12 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಸಹಿತ 177 ರನ್ ಗಳಿಸಿದ್ದಾರೆ. ಔಟಾಗದೆ 18 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಬೆಡಿಂಗ್‌ಹ್ಯಾಮ್ 59 ರನ್(78 ಎಸೆತ) ಗಳಿಸಿ ಔಟಾದರು. ಕೆಳ ಕ್ರಮಾಂಕದಲ್ಲಿ ವಿಯಾನ್ ಮುಲ್ದರ್ 150 ಎಸೆತಗಳಲ್ಲಿ 8 ಬೌಂಡರಿ, 4 ಸಿಕ್ಸರ್‌ಗಳ ಸಮೇತ ಔಟಾಗದೆ 105 ರನ್ ಗಳಿಸಿದರು. ಸೆನುರನ್ ಮುತ್ತುಸ್ವಾಮಿ ಔಟಾಗದೆ 68 ರನ್(75 ಎಸೆತ) ಕೊಡುಗೆ ನೀಡಿದರು.
ಬಾಂಗ್ಲಾದೇಶದ ಪರ ತೈಜುಲ್ ಇಸ್ಲಾಮ್ 198 ರನ್‌ಗೆ 5 ವಿಕೆಟ್ ಗೊಂಚಲು ಪಡೆದರು. ಆದರೆ ಅವರ ಪ್ರಯತ್ನವು ದಕ್ಷಿಣ ಆಫ್ರಿಕಾವನ್ನು ಕಟ್ಟಿಹಾಕಲು ಸಾಧ್ಯವಾಗಲಿಲ್ಲ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿರುವ ದಕ್ಷಿಣ ಆಫ್ರಿಕಾ ತಂಡವು ಸದ್ಯ ಸುಸ್ಥಿತಿಯಲ್ಲಿದೆ.
ಮೊದಲ ಇನಿಂಗ್ಸ್ ಆರಂಭಿಸಿರುವ ಬಾಂಗ್ಲಾದೇಶ ತಂಡವು 9 ಓವರ್ ಗಳಲ್ಲಿ 4 ವಿಕೆಟ್ ಗಳ ನಷ್ಟಕ್ಕೆ 38 ರನ್ ಗಳಿಸಿದೆ. ಕಗಿಸೊ ರಬಾಡ(2-8) ಮತ್ತೊಮ್ಮೆ ಮಿಂಚಿದ್ದಾರೆ.
*ಟೆಸ್ಟ್ ಪಂದ್ಯದ ಇನಿಂಗ್ಸ್‌ವೊಂದರಲ್ಲಿ ದಕ್ಷಿಣ ಆಫ್ರಿಕಾದ ಗರಿಷ್ಠ ಸಿಕ್ಸರ್‌ಗಳು
17: ಚಟ್ಟೋಗ್ರಾಮ್ ನಲ್ಲಿ 2024ರಲ್ಲಿ ಬಾಂಗ್ಲಾದೇಶ ವಿರುದ್ಧ
15: ಬಾಸ್ಸೆಟೆರೆಯಲ್ಲಿ 2010ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ
12: ಕೇಪ್‌ಟೌನ್ ನಲ್ಲಿ 2009ರಲ್ಲಿ ಆಸ್ಟ್ರೇಲಿಯ ವಿರುದ್ಧ
12: ಸೆಂಚೂರಿಯನ್ ನಲ್ಲಿ 2010ರಲ್ಲಿ ಭಾರತ ವಿರುದ್ಧ