ಸನ್ ರೈಸರ್ಸ್ ಹೈದರಾಬಾದ್ ನ ಮೊದಲ 3 ಐಪಿಎಲ್ ಪಂದ್ಯಗಳಿಗೆ ಹಸರಂಗ ಅಲಭ್ಯ

Update: 2024-03-19 15:24 GMT

ಹಸರಂಗ | Photo: PTI 

ಹೊಸದಿಲ್ಲಿ: ಬಾಂಗ್ಲಾದೇಶ ವಿರುದ್ಧ ಮಾರ್ಚ್ 22 ರಿಂದ ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾ ತಂಡದಲ್ಲಿ ಸ್ಥಾನ ಪಡೆದಿರುವ ಆಲ್ರೌಂಡರ್ ವನಿಂದು ಹಸರಂಗ ಸನ್ ರೈಸರ್ಸ್ ಹೈದರಾಬಾದ್ ಆಡಲಿರುವ ಈ ವರ್ಷದ ಐಪಿಎಲ್ ನ ಕನಿಷ್ಠ ಮೊದಲ ಮೂರು ಪಂದ್ಯಗಳಿಂದ ವಂಚಿತರಾಗಲಿದ್ದಾರೆ.

ಶ್ರೀಲಂಕಾದ ಪರ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಿರುವ ಹಸರಂಗ ಈ ಹಿಂದೆ ಆಗಸ್ಟ್ ನಲ್ಲಿ ಸೀಮಿತ ಓವರ್ ಕ್ರಿಕೆಟ್ ನಲ್ಲಿ ಗಮನ ಹರಿಸಲು ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿಯಾಗುವುದಾಗಿ ಘೋಷಿಸಿದ್ದರು.

ಆದರೆ 26ರ ಹರೆಯದ ಹಸರಂಗ ಇತ್ತೀಚೆಗೆ ಶ್ರೀಲಂಕಾ ಘೋಷಿಸಿರುವ 17 ಸದಸ್ಯರ ಟೆಸ್ಟ್ ತಂಡದಲ್ಲಿ ಹೊಸ ಸ್ಪಿನ್ನರ್ ನಿಶಾನ್ ಪೆರಿಸ್ ಜೊತೆಗೆ ಸ್ಥಾನ ಪಡೆದಿದ್ದರು.

ಮೊದಲ ಟೆಸ್ಟ್ ಪಂದ್ಯವು ಮಾರ್ಚ್ 22ರಿಂದ 26ರ ತನಕ ಸಿಲ್ಹಟ್ ನಲ್ಲಿ ನಡೆಯಲಿದೆ. ಎರಡನೇ ಟೆಸ್ಟ್ ಪಂದ್ಯವು ಚಟ್ಟೋಗ್ರಾಮ್ನಲ್ಲಿ ಮಾರ್ಚ್ 30ರಿಂದ ಎಪ್ರಿಲ್ 3ರ ತನಕ ನಡೆಯಲಿದೆ.

ಹಸರಂಗ ಅವರು 1.5 ಕೋಟಿ ರೂ.ಗೆ ಸನ್ ರೈಸರ್ಸ್ ತಂಡದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಐಪಿಎಲ್ ವೇಳಾಪಟ್ಟಿಯ ಮೊದಲೆರಡು ವಾರಗಳಲ್ಲಿ ಹೈದರಾಬಾದ್ ತಂಡ ಮಾರ್ಚ್ 23ರಂದು ಕೋಲ್ಕತಾದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಆ ನಂತರ ಮಾರ್ಚ್ 27ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಹೈದರಾಬಾದ್ ನಲ್ಲಿ ಸೆಣಸಾಡಲಿದೆ. ಮಾರ್ಚ್ 31ರಂದು ಅಹ್ಮದಾಬಾದ್ಗೆ ಪ್ರಯಾಣಿಸಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ.

ಬಲಗೈ ಸ್ಪಿನ್ನರ್ ಹಸರಂಗ ಎಪ್ರಿಲ್ 5ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಹೈದರಾಬಾದ್ ನಲ್ಲಿ ನಿಗದಿಯಾಗಿರುವ ಪಂದ್ಯದಲ್ಲಿ ಆಡುವ ಕುರಿತು ಇನ್ನೂ ಖಚಿತವಾಗಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News