‘ಆತ ಐದು ಐಪಿಎಲ್ ಕಪ್ ಗೆದ್ದಿದ್ದಾನೆ; ಹಲವರು ಒಂದನ್ನೂ ಗೆದ್ದಿಲ್ಲ”: ಕೊಹ್ಲಿ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ ಗೌತಮ್ ಗಂಭೀರ್
ಕೊಲೊಂಬೊ: “ಆತ ಐದು ಐಪಿಎಲ್ ಕಪ್ ಗೆದ್ದಿದ್ದಾನೆ; ಹಲವರು ಒಂದನ್ನೂ ಗೆದ್ದಿಲ್ಲ” ಎಂದು ರೋಹಿತ್ ಶರ್ಮ ನಾಯಕತ್ವದ ಕುರಿತು ವಿರಾಟ್ ಕೊಹ್ಲಿ ಹಾಗೂ ರಾಹುಲ್ ದ್ರಾವಿಡ್ ನೀಡಿದ್ದ ಎಚ್ಚರಿಕೆಯ ವಿರುದ್ಧ ಖ್ಯಾತ ಬ್ಯಾಟರ್ ಗೌತಮ್ ಗಂಭೀರ್ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ ಎಂದು hindustantimes.com ವರದಿ ಮಾಡಿದೆ.
ಇನ್ನು ಮೂರು ವಾರಗಳಲ್ಲಿ ಸ್ವದೇಶದಲ್ಲಿ ಏಕದಿನ ವಿಶ್ವಕಪ್ ಪ್ರಾರಂಭವಾಗುವುದಕ್ಕೂ ಮುನ್ನ ಏಷ್ಯಾ ಕಪ್ ನಲ್ಲಿ ಭಾರತಕ್ಕೆ ಮಹತ್ವದ ಗೆಲುವು ಲಭಿಸಿದ್ದು,ಇದರಿಂದ ರೋಹಿತ್ ಶರ್ಮರ ನಾಯಕತ್ವಕ್ಕೆ ದೊಡ್ಡ ಉತ್ತೇಜನ ದೊರೆತಂತಾಗಿದೆ. ಏಷ್ಯಾ ಕಪ್ ನಲ್ಲಿ ಬಾಂಗ್ಲಾದೇಶ ತಂಡವನ್ನು ಹೊರತುಪಡಿಸಿ, ಉಳಿದೆಲ್ಲ ಪಂದ್ಯಗಳಲ್ಲೂ ಭಾರತ ತಂಡವು ಸುಲಭ ಜಯ ಗಳಿಸಿರುವುದರಿಂದ ರೋಹಿತ್ ಶರ್ಮರ ನಾಯಕತ್ವದ ಕುರಿತು ಎದ್ದಿದ್ದ ಎಲ್ಲ ಪ್ರಶ್ನೆಗಳು ಹಿನ್ನೆಲೆಗೆ ಸರಿದಂತಾಗಿವೆ. ಈ ಹಿನ್ನೆಲೆಯಲ್ಲಿ ಗೌತಮ್ ಗಂಭೀರ್ ಅವರ ಹೇಳಿಕೆಯು ಕ್ರಿಕೆಟ್ ವಲಯದಲ್ಲಿ ವಿವಾದಕ್ಕೆ ನಾಂದಿ ಹಾಡಿದೆ.
ಇಂದು ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡದ ವೇಗದ ಬೌಲರ್ ಮುಹಮ್ಮದ್ ಸಿರಾಜ್ ಅವರ ಮಿಂಚಿನ ದಾಳಿಗೆ ಕುಸಿದ ಶ್ರೀಲಂಕಾ ತಂಡವು ಕೇವಲ 50 ರನ್ ಗೆ ಆಲೌಟ್ ಆಯಿತು. ಸಿರಾಜ್ 7 ಓವರ್ ಗಳಲ್ಲಿ 21 ರನ್ ಗಳನ್ನು ಮಾತ್ರ ನೀಡಿ 6 ವಿಕೆಟ್ ಗಳನ್ನು ಕಬಳಿಸಿದರು. ಮತ್ತಿಬ್ಬರು ವೇಗದ ಬೌಲರ್ ಗಳಾದ ಹಾರ್ದಿಕ್ ಪಾಂಡ್ಯ (2.2-0-3-3) ಹಾಗೂ ಜಸ್ ಪ್ರೀತ್ ಬೂಮ್ರಾ (5-1-23-1) ಕೂಡಾ ಶ್ರೀಲಂಕಾ ತಂಡದ ಪಾಲಿಗೆ ಮಾರಕವಾದರು. ನಂತರ ಬ್ಯಾಟಿಂಗ್ ಮಾಡಿದ ಭಾರತ ತಂಡವು ಇಶಾನ್ ಕಿಶನ್ ಅವರ ಅಜೇಯ 23 ರನ್ ಹಾಗೂ ಶುಭಮನ್ ಗಿಲ್ ಅವರ ಅಜೇಯ 27 ರನ್ ಗಳ ನೆರವಿನಿಂದ 10 ವಿಕೆಟ್ ಅಂತರದ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಭಾರತ ತಂಡವು ದಾಖಲೆಯ ಏಳನೇ ಬಾರಿಗೆ ಏಷ್ಯಾ ಕಪ್ ಅನ್ನು ಜಯಿಸಿತು.