ಡಿಆರ್ ಎಸ್ ನಿಯಮದಲ್ಲಿ ಬದಲಾವಣೆ ತಂದ ಐಸಿಸಿ

Update: 2024-01-04 17:00 GMT

ಐಸಿಸಿ| Photo: PTI 

ಹೊಸದಿಲ್ಲಿ : ತೀರ್ಪು ಮರುಪರಿಶೀಲನಾ ವ್ಯವಸ್ಥೆ (ಡಿಆರ್ ಎಸ್)ಯ ನಿಯಮಗಳು ಮತ್ತು ಜಜ್ಜುಗಾಯಕ್ಕೆ ಒಳಗಾದ ಆಟಗಾರನ ಸ್ಥಾನಕ್ಕೆ ಬದಲಿ ಆಟಗಾರರನ್ನು ಇಳಿಸುವ ನಿಯಮಗಳಿಗೆ ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯು ಗಮನಾರ್ಹ ಬದಲಾವಣೆಗಳನ್ನು ತಂದಿದೆ.

2023 ಡಿಸೆಂಬರ್ 12ರಿಂದ ಜಾರಿಗೆ ಬಂದಿರುವ ಹೊಸ ನಿಯಮಗಳು, ತೀರ್ಪು ನೀಡುವ ಪ್ರಕ್ರಿಯೆಗೆ ಸ್ಪಷ್ಟತೆ ಮತ್ತು ನ್ಯಾಯಸಮ್ಮತೆಯನ್ನು ತರುವ ಉದ್ದೇಶವನ್ನು ಹೊಂದಿವೆ.

ಸ್ಟಂಪಿಂಗ್ ಮರುಪರಿಶೀಲನೆಗೆ ಸಂಬಂಧಿಸಿದ ನಿಯಮಗಳಲ್ಲಿ ಮುಖ್ಯವಾಗಿ ಬದಲಾವಣೆಗಳನ್ನು ಮಾಡಲಾಗಿದೆ. ಇನ್ನು ಸ್ಟಂಪಿಂಗ್ ತೀರ್ಪಿನ ಮರುಪರಿಶೀಲನೆ ವೇಳೆ ಸೈಡ್-ಆನ್ ರಿಪ್ಲೇಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ವಿಕೆಟ್ ಹಿಂದುಗಡೆ ಕ್ಯಾಚ್ ಆಗಿದೆಯೇ ಎನ್ನುವುದನ್ನು ಗಮನಕ್ಕೆ ತೆಗೆದುಕೊಳ್ಳಲಾಗುವುದಿಲ್ಲ.

ಸ್ಟಂಪಿಂಗ್ ಮತ್ತು ವಿಕೆಟ್ ಹಿಂದುಗಡೆ ಕ್ಯಾಚ್ ಮರುಪರಿಶೀಲನೆಗೆ ಮನವಿ ಮಾಡಬಯಸುವ ತಂಡಗಳು ಇನ್ನು ಮುಂದೆ ಅವೆರಡು ಉದ್ದೇಶಗಳಿಗೆ ಪ್ರತ್ಯೇಕ ಮನವಿಗಳನ್ನು ಮಾಡಬೇಕಾಗುತ್ತದೆ. ಒಂದೇ ಮನವಿಯಲ್ಲಿ ಹಲವು ಔಟ್ ಗಳ ಮರುಪರಿಶೀಲನೆಗೆ ಮುಂದಾಗುವ ಮೂಲಕ ವ್ಯವಸ್ಥೆಯನ್ನು ಶೋಷಣೆಗೆ ಒಳಪಡಿಸುವುದರಿಂದ ತಂಡಗಳನ್ನು ತಡೆಯಲು ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅದೇ ವೇಳೆ, ಜಜ್ಜು ಗಾಯಕ್ಕೆ ಒಳಗಾದ ಆಟಗಾರನ ಸ್ಥಾನದಲ್ಲಿ ಬದಲಿ ಆಟಗಾರನನ್ನು ತರುವ ವಿಷಯದಲ್ಲೂ ಐಸಿಸಿ ಸ್ಪಷ್ಟತೆ ತಂದಿದೆ.

ಹೊಸ ನಿಮಯಗಳ ಪ್ರಕಾರ, ಗಾಯಕ್ಕೆ ಒಳಗಾಗುವ ವೇಳೆಗೆ ಆಟಗಾರ ಬೌಲಿಂಗ್ ಮಾಡುವುದರಿಂದ ಅಮಾನತಾಗಿದ್ದರೆ ಬದಲಿ ಆಟಗಾರನಿಗೆ ಬೌಲಿಂಗ್ ಮಾಡಲು ಅವಕಾಶವಿರುವುದಿಲ್ಲ.

ಅದೂ ಅಲ್ಲದೆ, ಮೈದಾನದಲ್ಲಿ ಗಾಯದ ತಪಾಸಣೆ ಮಾಡುವುದು ಮತ್ತು ಚಿಕಿತ್ಸೆ ನೀಡುವ ಅವಧಿಯನ್ನು ನಾಲ್ಕು ನಿಮಿಷಕ್ಕೆ ಸೀಮಿತಗೊಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News