ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿ-2023: ವಿರಾಟ್ ಕೊಹ್ಲಿ, ರವೀಂದ್ರ ಜಡೇಜ ಸಹಿತ ನಾಲ್ವರು ನಾಮನಿರ್ದೇಶನ
ಹೊಸದಿಲ್ಲಿ: 2023ರ ಐಸಿಸಿ ವರ್ಷದ ಕ್ರಿಕೆಟಿಗರಿಗೆ ನೀಡುವ ಸರ್ ಗ್ಯಾರಿಫೀಲ್ಡ್ ಸೋಬರ್ಸ್ ಟ್ರೋಫಿಗೆ ಭಾರತದ ಕ್ರಿಕೆಟ್ ಸ್ಟಾರ್ ಗಳಾದ ವಿರಾಟ್ ಕೊಹ್ಲಿ ಹಾಗೂ ಆಲ್ರೌಂಡರ್ ರವೀಂದ್ರ ಜಡೇಜ ಸಹಿತ ನಾಲ್ವರು ನಾಮನಿರ್ದೇಶನಗೊಂಡಿದ್ದಾರೆ.
ಈ ಪ್ರತಿಷ್ಠಿತ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಇನ್ನಿಬ್ಬರು ಆಟಗಾರರೆಂದರೆ: ಆಸ್ಟ್ರೇಲಿಯದ ವಿಶ್ವಕಪ್ ವಿಜೇತ ನಾಯಕ ಪ್ಯಾಟ್ ಕಮಿನ್ಸ್ ಹಾಗೂ ವಿಶ್ವಕಪ್ ಫೈನಲ್ ಪಂದ್ಯದ ಹೀರೊ ಟ್ರಾವಿಸ್ ಹೆಡ್.
2023ರಲ್ಲಿ ಸಾಕಷ್ಟು ರನ್ ಗಳಿಸಿರುವ ಕೊಹ್ಲಿ ಮೂರನೇ ಬಾರಿ ಸರ್ ಗ್ಯಾರಿಫೀಲ್ಡ್ ಸೋಬರ್ಸ್ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಕಳೆದ ವರ್ಷ ಕೊಹ್ಲಿ ಅವರು ಐತಿಹಾಸಿಕ 50ನೇ ಏಕದಿನ ಶತಕ ಗಳಿಸಿ ಐಸಿಸಿ ಹಾಲ್ ಆಫ್ ಫೇಮ್ ಸಚಿನ್ ತೆಂಡುಲ್ಕರ್ ದಾಖಲೆಯನ್ನು ಮುರಿದಿದ್ದರು. ವಿಶ್ವಕಪ್ನಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಕೊಹ್ಲಿ ಒಟ್ಟು 2,048 ಅಂತರ್ರಾಷ್ಟ್ರೀಯ ರನ್ ಗಳಿಸಿದ್ದಾರೆ.
ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 765 ರನ್ ಗಳಿಸಿದ್ದ ಕೊಹ್ಲಿ ಭಾರತ ತಂಡ ಫೈನಲ್ ಗೆ ತಲುಪುವಲ್ಲಿ ನೆರವಾಗಿದ್ದರು.
ರವೀಂದ್ರ ಜಡೇಜ 2023ರಲ್ಲಿ ಒಟ್ಟು 66 ವಿಕೆಟ್ ಗಳನ್ನು ಕಬಳಿಸಿದ್ದು, ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ ಒಟ್ಟು 613 ರನ್ ಗಳಿಸಿದ್ದರು. ಎರಡು ಫೈನಲ್ ಪಂದ್ಯಗಳಲ್ಲಿ ಭಾರತದ ಸ್ಪಿನ್ ದಾಳಿಗೆ ಉಪಯುಕ್ತ ಕೊಡುಗೆ ನೀಡಿದ್ದರು.
ಪ್ಯಾಟ್ ಕಮಿನ್ಸ್ 2023ರಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾಗೂ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಫೈನಲ್ನಲ್ಲಿ ಜಯ ಸಾಧಿಸಿದ್ದರು. ಕಮಿನ್ಸ್ 2019ರಲ್ಲಿ ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದರು. ಅಸಾಧಾರಣ ನಾಯಕತ್ವದ ಕೌಶಲ್ಯ ಪ್ರದರ್ಶನ ಹಾಗೂ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ನಲ್ಲಿ 59 ವಿಕೆಟ್ ಗಳನ್ನು ಉರುಳಿಸಿ 2023ರಲ್ಲಿ ಹೊಸ ಎತ್ತರಕ್ಕೆ ತಲುಪಿದ್ದರು.
ಟ್ರಾವಿಸ್ ಹೆಡ್ ಪಾಲಿಗೆ 2023 ಅದೃಷ್ಟದ ವರ್ಷವಾಗಿತ್ತು. ಹೆಡ್ ಆಸ್ಟ್ರೇಲಿಯದ ಗೆಲುವಿನ ಅಭಿಯಾನದಲ್ಲಿ ಮುಖ್ಯ ಪಾತ್ರವಹಿಸಿದ್ದರು. 2023ರಲ್ಲಿ ನಿರ್ಣಾಯಕ ಕ್ಷಣಗಳಲ್ಲಿ ಉದಯೋನ್ಮುಖ ಆಟಗಾರನಾಗಿ ಹೊರಹೊಮ್ಮಿದ್ದರು. ಎರಡೂ ಫೈನಲ್(ವಿಶ್ವ ಟೆಸ್ಟ್ ಚಾಂಪಿಯನ್ಶಿಪ್, ವಿಶ್ವಕಪ್)ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.
ಆಲ್ರೌಂಡರ್ ಹೆಡ್ ಎಲ್ಲ ಪ್ರಕಾರದ ಪಂದ್ಯಗಳಲ್ಲಿ ಸುಮಾರು 1,700 ರನ್ ಗಳಿಸಿದ್ದು, ಪ್ರಮುಖ ವಿಕೆಟ್ ಉರುಳಿಸಿ ಅಮೂಲ್ಯ ಕೊಡುಗೆ ನೀಡಿದ್ದರು.
ಹೆಡ್ ಅವರು ಉಸ್ಮಾನ್ ಖ್ವಾಜಾ, ಆರ್.ಅಶ್ವಿನ್ ಹಾಗೂ ಜೋ ರೂಟ್ ಜೊತೆಗೆ 2023ರ ಐಸಿಸಿ ಪುರುಷರ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.
*ಐಸಿಸಿ ಪ್ರಶಸ್ತಿ 2023-ನಾಮನಿರ್ದೇಶಿತರು
ಐಸಿಸಿ ವರ್ಷದ ಪುರುಷರ ಕ್ರಿಕೆಟಿಗನಿಗೆ ನೀಡುವ ಸರ್ ಗ್ಯಾರಿಫೀಲ್ಡ್ ಸೋಬರ್ಸ್ ಟ್ರೋಫಿ: ಪ್ಯಾಟ್ ಕಮಿನ್ಸ್(ಆಸ್ಟ್ರೇಲಿಯ), ಟ್ರಾವಿಸ್ ಹೆಡ್(ಆಸ್ಟ್ರೇಲಿಯ), ರವೀಂದ್ರ ಜಡೇಜ(ಭಾರತ), ವಿರಾಟ್ ಕೊಹ್ಲಿ(ಭಾರತ).
ಐಸಿಸಿ ವರ್ಷದ ಮಹಿಳಾ ಕ್ರಿಕೆಟರ್ ಪ್ರಶಸ್ತಿ: ಚಾಮರಿ ಅಥಪತ್ತು(ಶ್ರೀಲಂಕಾ), ಅಶ್ಲೆ ಗಾರ್ಡನರ್(ಆಸ್ಟ್ರೇಲಿಯ), ಬೆಥ್ ಮೂನಿ(ಆಸ್ಟ್ರೇಲಿಯ), ನಾಟ್ಸಿವೆರ್-ಬ್ರಂಟ್(ಇಂಗ್ಲೆಂಡ್)
ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ: ಆರ್. ಅಶ್ವಿನ್(ಭಾರತ), ಟ್ರಾವಿಸ್ ಹೆಡ್(ಆಸ್ಟ್ರೇಲಿಯ),ಉಸ್ಮಾನ್ ಖ್ವಾಜಾ(ಆಸ್ಟ್ರೇಲಿಯ), ಜೋ ರೂಟ್(ಇಂಗ್ಲೆಂಡ್)
ಐಸಿಸಿ ವರ್ಷದ ಪುರುಷರ ಏಕದಿನ ಕ್ರಿಕೆಟಿಗ ಪ್ರಶಸ್ತಿ: ಶುಭಮನ್ ಗಿಲ್(ಭಾರತ), ವಿರಾಟ್ ಕೊಹ್ಲಿ(ಭಾರತ), ಡ್ಯಾರಿಲ್ ಮಿಚೆಲ್(ನ್ಯೂಝಿಲ್ಯಾಂಡ್), ಮುಹಮ್ಮದ್ ಶಮಿ(ಭಾರತ)
ಐಸಿಸಿ ವರ್ಷದ ಮಹಿಳೆಯರ ಏಕದಿನ ಕ್ರಿಕೆಟಿಗ ಪ್ರಶಸ್ತಿ: ಚಾಮರಿ ಅಥಪತ್ತು(ಶ್ರೀಲಂಕಾ), ಅಶ್ಲೆ ಗಾರ್ಡನರ್(ಆಸ್ಟ್ರೇಲಿಯ), ಅಮೆಲಿಯಾ ಕೆರ್ರ್(ನ್ಯೂಝಿಲ್ಯಾಂಡ್), ನ್ಯಾಟ್ ಸಿವೆರ್-ಬ್ರಂಟ್(ಇಂಗ್ಲೆಂಡ್)
ಐಸಿಸಿ ವರ್ಷದ ಪುರುಷರ ಟ್ವೆಂಟಿ-20 ಕ್ರಿಕೆಟಿಗ ಪ್ರಶಸ್ತಿ: ಮಾರ್ಕ್ ಚಾಪ್ಮನ್(ನ್ಯೂಝಿಲ್ಯಾಂಡ್), ಅಲ್ಪೇಶ್ ರಾಮ್ಜಾನಿ(ಉಗಾಂಡ), ಸಿಕಂದರ್ ರಝಾ(ಝಿಂಬಾಬ್ವೆ), ಸೂರ್ಯಕುಮಾರ್ ಯಾದವ್(ಭಾರತ)
ಐಸಿಸಿ ವರ್ಷದ ಮಹಿಳೆಯರ ಟಿ-20 ಕ್ರಿಕೆಟಿಗ ಪ್ರಶಸ್ತಿ: ಚಾಮರಿ ಅಥಪಟ್ಟು(ಶ್ರೀಲಂಕಾ), ಸೋಫಿ ಎಕ್ಸೆಲ್ಸ್ಟೋನ್(ಇಂಗ್ಲೆಂಡ್), ಹೇಲಿ ಮ್ಯಾಥ್ಯೂಸ್(ವೆಸ್ಟ್ಇಂಡೀಸ್), ಎಲ್ಲಿಸ್ ಪೆರ್ರಿ(ಆಸ್ಟ್ರೇಲಿಯ)
ಐಸಿಸಿ ವರ್ಷದ ಉದಯೋನ್ಮುಖ ಪುರುಷರ ಕ್ರಿಕೆಟಿಗ ಪ್ರಶಸ್ತಿ: ಜೆರಾಲ್ಡ್ ಕೊಯೆಟ್ಝಿ(ದಕ್ಷಿಣ ಆಫ್ರಿಕಾ), ಯಶಸ್ವಿ ಜೈಸ್ವಾಲ್(ಭಾರತ), ದಿಲ್ಶನ್ ಮದುಶಂಕ(ಶ್ರೀಲಂಕಾ), ರಚಿನ್ ರವೀಂದ್ರ(ನ್ಯೂಝಿಲ್ಯಾಂಡ್)
ಐಸಿಸಿ ವರ್ಷದ ಉದಯೋನ್ಮುಖ ಮಹಿಳೆಯರ ಕ್ರಿಕೆಟಿಗ ಪ್ರಶಸ್ತಿ:ಮರುಫಾ ಅಖ್ತರ್(ಬಾಂಗ್ಲಾದೇಶ), ಲೌರೆನ್ ಬೆಲ್(ಇಂಗ್ಲೆಂಡ್), ಡಾರ್ಸಿ ಕಾರ್ಟರ್(ಸ್ಕಾಟ್ಲೆಂಡ್), ಫೋಬ್ ಲಿಚ್ಫೀಲ್ಡ್(ಆಸ್ಟ್ರೇಲಿಯ).