ಐಸಿಸಿ ರ‍್ಯಾಂಕಿಂಗ್: ಮೂರನೇ ಸ್ಥಾನಕ್ಕೇರಿದ ವಿರಾಟ್ ಕೊಹ್ಲಿ, ಶುಭಮನ್ ಗಿಲ್ ಅಗ್ರ ಸ್ಥಾನ ಭದ್ರ

Update: 2023-11-22 16:29 GMT

Photo Credit –Instagram

ಹೊಸದಿಲ್ಲಿ: ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನದ ನಂತರ ಭಾರತದ ಬ್ಯಾಟರ್ ವಿರಾಟ್ ಕೊಹ್ಲಿ ಏಕದಿನ ರ‍್ಯಾಂಕಿಂಗ್ನಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ.

ಟೂರ್ನಮೆಂಟ್ನಲ್ಲಿ 765 ರನ್ ಕೊಡುಗೆ ನೀಡಿರುವ ಕೊಹ್ಲಿ ಒಂದು ಸ್ಥಾನ ಮೇಲಕ್ಕೇರಿದ್ದಾರೆ. ಅಗ್ರಸ್ಥಾನದಲ್ಲಿ ಮುಂದುವರಿದಿರುವ ತನ್ನ ಸಹ ಆಟಗಾರ ಶುಭಮನ್ ಗಿಲ್ಗಿಂತ ಕೊಹ್ಲಿ ಕೇವಲ 35 ರೇಟಿಂಗ್ ಪಾಯಿಂಟ್ಸ್ನಿಂದ ಹಿಂದಿದ್ದಾರೆ.

ಗಿಲ್ 826 ರೇಟಿಂಗ್ ಪಾಯಿಂಟ್ಸ್ನೊಂದಿಗೆ ಅಗ್ರ ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ. ಪಾಕಿಸ್ತಾನದ ನಾಯಕ ಬಾಬರ್ ಆಝಮ್ಗಿಂತ 2 ಅಂಕದಿಂದ ಮುಂದಿದ್ದಾರೆ. ಆಝಮ್ 824 ಪಾಯಿಂಟ್ಸ್ ಗಳಿಸಿದ್ದಾರೆ.

ಕೊಹ್ಲಿ ಇದೀಗ 791 ಪಾಯಿಂಟ್ಸ್ ಗಳಿಸಿದ್ದಾರೆ. ಭಾರತದ ನಾಯಕ ರೋಹಿತ್ ಶರ್ಮಾ ವಿಶ್ವಕಪ್ನಲ್ಲಿ ಶ್ರೇಷ್ಠ ಪ್ರದರ್ಶನ ನೀಡುವ ಮೂಲಕ (597 ರನ್) ಅಗ್ರ-2 ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ರೋಹಿತ್ ಸದ್ಯ 769 ಅಂಕದೊಂದಿಗೆ 4ನೇ ಸ್ಥಾನದಲ್ಲಿದ್ದಾರೆ.

ಕೊಹ್ಲಿ 2017 ಹಾಗೂ 2021ರ ನಡುವೆ ಸುಮಾರು 4 ವರ್ಷಗಳ ಕಾಲ ಸತತ 1,258 ದಿನಗಳ ತನಕ ನಂ.1 ರ‍್ಯಾಂಕ್ನಲ್ಲಿದ್ದರು. ಗಿಲ್ ವಿಶ್ವಕಪ್ ವೇಳೆಗೆ ಅಗ್ರ ಸ್ಥಾನ ಅಲಂಕರಿಸುವ ತನಕ ಪಾಕ್ ಬ್ಯಾಟರ್ ಬಾಬರ್ ಇತ್ತೀಚೆಗಿನ ವರ್ಷಗಳಲ್ಲಿ ಹೆಚ್ಚಿನ ಸಮಯ ನಂ.1 ಸ್ಥಾನದಲ್ಲಿದ್ದರು.

ದಕ್ಷಿಣ ಆಫ್ರಿಕಾದ ಓಪನರ್ ಕ್ವಿಂಟನ್ ಡಿಕಾಕ್ ಏಕದಿನ ಬ್ಯಾಟರ್ ರ‍್ಯಾಂಕಿಂಗ್ನಲ್ಲಿ 2 ಸ್ಥಾನ ಕೆಳ ಜಾರಿ ಐದನೇ ಸ್ಥಾನಕ್ಕೆ ಕುಸಿದಿದ್ದಾರೆ. ನ್ಯೂಝಿಲ್ಯಾಂಡ್ನ ಬಲಗೈ ಬ್ಯಾಟರ್ ಡ್ಯಾರಿಲ್ ಮಿಚೆಲ್ ವಿಶ್ವಕಪ್ನಲ್ಲಿ 552 ರನ್ ಗಳಿಸಿದ ಕಾರಣ ಆರನೇ ಸ್ಥಾನಕ್ಕೇರಿದ್ದಾರೆ.

ವಿಶ್ವಕಪ್ ಫೈನಲ್ನಲ್ಲಿ ಶತಕ ಸಿಡಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಆಸ್ಟ್ರೇಲಿಯದ ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ 28 ಸ್ಥಾನ ಭಡ್ತಿ ಪಡೆದು 15ನೇ ಸ್ಥಾನ ತಲುಪಿದ್ದಾರೆ.

ಬೌಲಿಂಗ್ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಕೇಶವ ಮಹಾರಾಜ್ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ. ಭಾರತದ ಜೋಡಿ ಮುಹಮ್ಮದ್ ಸಿರಾಜ್(3ನೇ) ಹಾಗೂ ಜಸ್ಟ್ರೀತ್ ಬುಮ್ರಾ(4ನೇ) ಅಗ್ರ-10 ಏಕದಿನ ಬೌಲರ್ಗಳಾಗಿ ಮುಂದುವರಿದಿದ್ದಾರೆ. ಕುಲದೀಪ್ ಯಾದವ್ ಒಂದು ಸ್ಥಾನ ಕೆಳಜಾರಿ 6ನೇ ಸ್ಥಾನದಲ್ಲಿದ್ದಾರೆ.

ತನ್ನ ಯಶಸ್ವಿ ವಿಶ್ವಕಪ್ ಅಭಿಯಾನದ ನಂತರ ಆಸ್ಟ್ರೇಲಿಯದ ಹೆಚ್ಚಿನ ಆಟಗಾರರು ರ‍್ಯಾಂಕಿಂಗ್ನಲ್ಲಿ ಭಡ್ತಿ ಪಡೆದಿದ್ದಾರೆ. ಹಿರಿಯ ವೇಗಿ ಜೋಶ್ ಹೇಝಲ್ವುಡ್ 4 ಸ್ಥಾನ ಮೇಲಕ್ಕೇರಿ 2ನೇ ಸ್ಥಾನದಲ್ಲಿದ್ದಾರೆ. ಸಹ ವೇಗಿ ಮಿಚೆಲ್ ಸ್ಟಾರ್ಕ್ 8 ಸ್ಥಾನ ಭಡ್ತಿ ಪಡೆದು 12ನೇ ರ‍್ಯಾಂಕ್ನಲ್ಲಿದ್ದಾರೆ. ನಾಯಕ ಪ್ಯಾಟ್ ಕಮಿನ್ಸ್ 7 ಸ್ಥಾನ ಮೇಲಕ್ಕೇರಿ 12ನೇ ಸ್ಥಾನದಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News