ಟಿ20 ವಿಶ್ವಕಪ್: ಹತಾಶೆಯಿಂದ ಬ್ಯಾಟ್ ಎಸೆದ ರಶೀದ್ ಖಾನ್‍ಗೆ ಐಸಿಸಿ ಛೀಮಾರಿ
ದುಬೈ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧದ ಸೂಪರ್8 ಹಂತದ ಪಂದ್ಯದಲ್ಲಿ ಸಹ ಆಟಗಾರ ಕರೀಂ ಜನತ್ ರನ್ ಕರೆಗೆ ಸ್ಪಂದಿಸದಿದ್ದಾಗ ಹತಾಶೆಯಿಂದ ಬ್ಯಾಟ್ ಎಸೆದ ಅಫ್ಘಾನಿಸ್ತಾನ ತಂಡದ ನಾಯಕ ರಶೀದ್ ಖಾನ್ ಅವರಿಗೆ ಐಸಿಸಿ ಅಧಿಕೃತವಾಗಿ ಛೀಮಾರಿ ಹಾಕಿದೆ.
ಅಫ್ಘಾನಿಸ್ತಾನ ಇನ್ನಿಂಗ್ಸ್ ನ ಕೊನೆಯ ಓವರ್ ನಲ್ಲಿ ಈ ಘಟನೆ ನಡೆದಿತ್ತು. ನಾಯಕ ರಶೀದ್ ಖಾನ್ ಅವರು ಎರಡನೇ ರನ್ ಪಡೆಯುವ ಪ್ರಯತ್ನದಲ್ಲಿದ್ದಾಗ ಎರಡನೇ ರನ್ ಓಡಲು ಜನತ್ ನಿರಾಕರಿಸಿದ್ದರು.
"ರಶೀದ್ ಖಾನ್, ಆಟಗಾರರಿಗೆ ಮತ್ತು ಆಟಗಾರರ ಬೆಂಬಲ ಸಿಬ್ಬಂದಿಗೆ ಇರುವ ಐಸಿಸಿ ನೀತಿಸಂಹಿತೆಯ 2.9ನೇ ವಿಧಿಯನ್ನು ಉಲ್ಲಂಘಿಸಿದ್ದಾರೆ. ಇದು ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಆಟಗಾರರು ಅಥವಾ ಆಟಗಾರರ ಬಳಿಗೆ ಅಸಮರ್ಪಕವಾಗಿ ಅಥವಾ ಅಪಾಯಕಾರಿ ರೀತಿಯಲ್ಲಿ ಚೆಂಡು (ಅಥವಾ ಕ್ರಿಕೆಟ್‍ಗೆ ಸಂಬಂಧಿಸಿದ ಇತರ ಸಾಧನಗಳನ್ನು) ಎಸೆಯುದಕ್ಕೆ ಸಂಬಂಧಿಸಿದೆ" ಎಂದು ಐಸಿಸಿ ಪ್ರಕಟಣೆ ಹೇಳಿದೆ.
ಇದರ ಜತೆಗೆ ರಶೀದ್ ಅವರ ಶಿಸ್ತು ದಾಖಲೆಗೆ ಒಂದು ಪ್ರತಿಕೂಲಕಾರಿ ಅಂಶವನ್ನು ಸೇರಿಸಲಾಗಿದೆ. ಇದು 24 ತಿಂಗಳು ಅವಧಿಯಲ್ಲಿ ರಶೀದ್ ಖಾನ್ ಪಾಲಿಗೆ ಇದು ಮೊದಲ ಘಟನೆಯಾಗಿದೆ.
ರಶೀದ್ ಖಾನ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಐಸಿಸಿ ಮ್ಯಾಚ್‍ರೆಫರಿಗಳ ಎಮಿರೇಟ್ಸ್ ಎಲೈಟ್‍ನ ರಿಚಿ ರಿಚಡ್ರ್ಸನ್ ಪ್ರಸ್ತಾವಿಸಿದ ಶಿಕ್ಷೆಯನ್ನು ಸ್ವೀಕರಿಸಿದ್ದಾರೆ. ಇದರಿಂದ ಅಧಿಕೃತ ವಿಚಾರಣೆಯ ಅಗತ್ಯವಿಲ್ಲ ಎಂದು ಹೇಳಲಾಗಿದೆ.