ಐಸಿಸಿ ಟೆಸ್ಟ್ ರ‍್ಯಾಂಕಿಂಗ್ : ನಂ.1 ಸ್ಥಾನ ಉಳಿಸಿಕೊಂಡ ಅಶ್ವಿನ್
ಹೊಸದಿಲ್ಲಿ: ಭಾರತದ ಪ್ರಮುಖ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬುಧವಾರ ಬಿಡುಗಡೆಯಾದ ಹೊಸ ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಮತ್ತೊಂದೆಡೆ ಹೈದರಾಬಾದ್ ನಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಮುಗಿದ ನಂತರ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ನಾಲ್ಕನೇ ಸ್ಥಾನಕ್ಕೇರಿದ್ದಾರೆ.
ಇಂಗ್ಲೆಂಡ್ ವಿರುದ್ಧ 28 ರನ್ನಿಂದ ಸೋತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಚೆನ್ನೈ ಸ್ಪಿನ್ನರ್ ಅಶ್ವಿನ್ ಆರು ವಿಕೆಟ್ ಗೊಂಚಲು ಕಬಳಿಸಿದ್ದರು. ಬುಮ್ರಾ ಕೂಡ ಈ ಪಂದ್ಯದಲ್ಲಿ ಆರು ವಿಕೆಟ್ ಗಳನ್ನು ಕಬಳಿಸಿದ್ದಾರೆ.
ಆರನೇ ಸ್ಥಾನ ಪಡೆದಿರುವ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಬೌಲಿಂಗ್ ಪಟ್ಟಿಯಲ್ಲಿ ಅಗ್ರ-10ರಲ್ಲಿರುವ ಭಾರತದ ಮೂರನೇ ಬೌಲರ್ ಆಗಿದ್ದಾರೆ.
ಟೆಸ್ಟ್ ಆಲ್ರೌಂಡರ್ ರ್ಯಾಂಕಿಂಗ್ ನಲ್ಲಿ ಜಡೇಜ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಜೋ ರೂಟ್ ನಾಲ್ಕನೇ ಸ್ಥಾನಕ್ಕೇರಿದ್ದು, ಒಂದು ವೇಳೆ ಇಂಗ್ಲೆಂಡ್ನ ಹಿರಿಯ ಬ್ಯಾಟರ್ ಉತ್ತಮ ಬೌಲಿಂಗ್ ಪ್ರದರ್ಶನ ಮುಂದುವರಿಸಿದರೆ ಜಡೇಜಗೆ ಸವಾಲಾಗಬಹುದು.
ಬ್ಯಾಟಿಂಗ್ ಕೌಶಲ್ಯದ ಮೂಲಕ ಪ್ರಸಿದ್ದಿ ಪಡೆದಿರುವ 33ರ ಹರೆಯದ ರೂಟ್ ಹೈದರಾಬಾದ್ ಟೆಸ್ಟ್ನಲ್ಲಿ ಐದು ವಿಕೆಟ್ ಗಳನ್ನು ಉರುಳಿಸುವ ಮೂಲಕ ಸ್ಪಿನ್ ಬೌಲಿಂಗ್ನಲ್ಲಿ ಮೋಡಿ ಮಾಡಿದ್ದರು. ಎರಡನೇ ಇನಿಂಗ್ಸ್ನಲ್ಲಿ ಇಂಗ್ಲೆಂಡ್ನ ಬೌಲಿಂಗ್ ದಾಳಿಯನ್ನೂ ಆರಂಭಿಸಿದ್ದರು.
ಈ ಪ್ರಯತ್ನದ ಫಲವಾಗಿ ರೂಟ್ ಟೆಸ್ಟ್ ಆಲ್ರೌಂಡರ್ ಗಳ ಪಟ್ಟಿಯಲ್ಲಿ ಒಂದು ಸ್ಥಾನ ಮೇಲಕ್ಕೇರಿ ನಾಲ್ಕನೇ ಸ್ಥಾನ ತಲುಪಿದ್ದಾರೆ.
ರೂಟ್ ಅವರು ಅಶ್ವಿನ್ ಹಾಗೂ ಶಕೀಬ್ ಅಲ್ ಹಸನ್ ನಂತರದ ಸ್ಥಾನದಲ್ಲಿದ್ದಾರೆ. ಅಕ್ಷರ್ ಪಟೇಲ್ 6ನೇ ಸ್ಥಾನಕ್ಕೆ ಕುಸಿದಿದ್ದಾರೆ.
ವಿರಾಟ್ ಕೊಹ್ಲಿ ಆರನೇ ಸ್ಥಾನಕ್ಕೇರಿದ್ದು, ಭಾರತದ ಏಕೈಕ ಟಾಪ್-10 ಬ್ಯಾಟರ್ ಆಗಿದ್ದಾರೆ.
ಎರಡನೇ ಇನಿಂಗ್ಸ್ನಲ್ಲಿ 196 ರನ್ ಸಿಡಿಸಿ ಭಾರತಕ್ಕೆ ಸೋಲಿನ ಆಘಾತ ನೀಡಿದ್ದ ಇಂಗ್ಲೆಂಡ್ನ ಒಲಿ ಪೋಪ್ 20 ಸ್ಥಾನ ಭಡ್ತಿ ಪಡೆದು 15ನೇ ಸ್ಥಾನ ತಲುಪಿದ್ದಾರೆ.
ಇಂಗ್ಲೆಂಡ್ನ ಇನ್ನೋರ್ವ ಬ್ಯಾಟರ್ ಬೆನ್ ಡಕೆಟ್ ಐದು ಸ್ಥಾನ ಮೇಲಕ್ಕೇರಿ 22ನೇ ಸ್ಥಾನದಲ್ಲಿದ್ದಾರೆ. ಡಕೆಟ್ ಭಾರತ ವಿರುದ್ಧ 35 ಹಾಗೂ 47 ರನ್ ಗಳಿಸಿದ್ದರು.
ವೆಸ್ಟ್ಇಂಡೀಸ್ ವಿರುದ್ಧ ಗಾಬಾದಲ್ಲಿ ನಡೆದಿದ್ದ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಅರ್ಧಶತಕ ಗಳಿಸಿದ್ದ ಆಸ್ಟ್ರೇಲಿಯದ ಓಪನರ್ ಉಸ್ಮಾನ್ ಖ್ವಾಜಾ ಎರಡು ಸ್ಥಾನ ಮೇಲಕ್ಕೇರಿ 8ನೇ ಸ್ಥಾನದಲ್ಲಿದ್ದಾರೆ.