ಪದಕ ಗಳಿಕೆಯಲ್ಲಿ ಶತಕ ಬಾರಿಸುವ ವಿಶ್ವಾಸದಲ್ಲಿ ಭಾರತ, ಮಿಂಚಿದ ಬಿಲ್ಗಾರರು, ಸ್ಕ್ವಾಷ್ ಆಟಗಾರರು

Update: 2023-10-05 18:02 GMT

ಫೋಟೊ ಕೃಪೆ: PTI 

ಹಾಂಗ್ ಝೌ : ಏಶ್ಯನ್ ಗೇಮ್ಸ್‌ ನಲ್ಲಿ ಐತಿಹಾಸಿಕ 100 ಪದಕಗಳನ್ನು ಗೆಲ್ಲುವತ್ತ ಭಾರತ ಮುಂದಡಿ ಇಡುತ್ತಿದ್ದು ಈ ತನಕ ಒಟ್ಟು 86 ಪದಕಗಳನ್ನು(21 ಚಿನ್ನ, 32 ಬೆಳ್ಳಿ ಹಾಗೂ 33 ಕಂಚು)ಬಾಚಿಕೊಂಡಿದೆ. ಗೇಮ್ಸ್ನ 12ನೇ ದಿನವಾದ ಗುರುವಾರ ಮೂರು ಚಿನ್ನದ ಪದಕಗಳನ್ನು ಜಯಿಸಿದೆ. ದೀಪಿಕಾ ಪಲ್ಲಿಕಲ್ ಹಾಗೂ ಹರಿಂದರ್ ಪಾಲ್ ಸಿಂಗ್ (ಸ್ಕ್ವಾಷ್,ಮಿಕ್ಸೆಡ್ ಟೀಮ್), ಪುರುಷರ ಕಾಂಪೌಂಡ್ ಆರ್ಚರಿ ಟೀಮ್ ಹಾಗೂ ಮಹಿಳೆಯರ ಕಾಂಪೌಂಡ್ ಆರ್ಚರಿ ಟೀಮ್ ತಮ್ಮ ಸ್ಪರ್ಧೆಗಳಲ್ಲಿ ಮೊದಲ ಸ್ಥಾನ ಪಡೆದು ಅವಳಿ ಚಿನ್ನ ಗೆದ್ದುಕೊಂಡಿವೆ.

ಸ್ಕ್ವಾಷ್ನ ಪುರುಷರ ಸಿಂಗಲ್ಸ್‌ ನಲ್ಲಿ ಸೌರವ್ ಘೋಷಾಲ್ ಬೆಳ್ಳಿ ಪದಕ ಜಯಿಸಿದರು. ಅಂತಿಮ್ ಪಾಂಘಾಲ್ ಮಹಿಳೆಯರ ಕುಸ್ತಿ ಸ್ಪರ್ಧೆಯಲ್ಲಿ ಕಂಚು ಗೆದ್ದುಕೊಂಡರು. ಬ್ಯಾಡ್ಮಿಂಟನ್ನಲ್ಲಿ ಮಿಶ್ರ ಫಲಿತಾಂಶಗಳು ಬಂದಿದ್ದು ಎಚ್.ಎಸ್. ಪ್ರಣಯ್ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್‌ ನಲ್ಲಿ ಸೆಮಿ ಫೈನಲ್ ಪ್ರವೇಶಿಸಿದ್ದಾರೆ. ಆದರೆ ಪಿ.ವಿ. ಸಿಂಧು ಅವರ ಏಶ್ಯನ್ ಗೇಮ್ಸ್‌ ನಲ್ಲಿ ಮತ್ತೊಂದು ಪದಕ ಗೆಲ್ಲುವ ವಿಶ್ವಾಸ ಕಮರಿಹೋಗಿದೆ. ಸಿಂಧು ಮಹಿಳೆಯರ ಸಿಂಗಲ್ಸ್ ಸೆಮಿ ಫೈನಲ್ ನಲ್ಲಿ ಚೀನಾದ ಬಿಂಗ್ಜಿಯಾವೊ ವಿರುದ್ಧ ಸೋತಿದ್ದಾರೆ.


ಸ್ಕ್ವಾಷ್: ಸಿಂಗಲ್ಸ್ ವಿಭಾಗದಲ್ಲಿ ಬೆಳ್ಳಿ ಗೆದ್ದ ಸೌರವ್ ಘೋಷಾಲ್

ಹಾಂಗ್‌ ಝೌ: ಏಶ್ಯನ್ ಗೇಮ್ಸ್‌ ನಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಹಿರಿಯ ಸ್ಕ್ವಾಷ್ ಆಟಗಾರ ಸೌರವ್ ಘೋಷಾಲ್ ಬೆಳ್ಳಿ ಪದಕವನ್ನು ಗೆದ್ದುಕೊಂಡರು. 2006ರ ನಂತರ ಏಶ್ಯಾಡ್ ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಸತತ ಐದು ಪದಕಗಳನ್ನು ಗೆದ್ದಿರುವ ಮೊದಲ ಸ್ಕ್ವಾಷ್ ಆಟಗಾರನೆಂಬ ಹಿರಿಮೆಗೆ ಪಾತ್ರರಾಗಿ ಇತಿಹಾಸ ನಿರ್ಮಿಸಿದ್ದಾರೆ.

ಗುರುವಾರ ನಡೆದ ಫೈನಲ್ ಪಂದ್ಯದಲ್ಲಿ ಘೋಷಾಲ್ ಮಲೇಶ್ಯದ ಈನ್ ಯೋವ್ ವಿರುದ್ಧ 11-9, 9-11, 5-11, 7-11 ಅಂತರದಿಂದ ಸೋತಿದ್ದಾರೆ.

ಘೋಷಾಲ್ ಮೊದಲ ಗೇಮ್ 11-9 ಅಂತರದಿಂದ ಗೆದ್ದುಕೊಂಡು ಉತ್ತಮ ಆರಂಭ ಪಡೆದರು.ಆದರೆ ಮಲೇಶ್ಯದ ಆಟಗಾರ ಉಳಿದ 3 ಗೇಮ್ಗಳಲ್ಲಿ ಮೇಲುಗೈ ಸಾಧಿಸಿ ಮೊದಲ ಸ್ಥಾನ ಪಡೆದು ಚಿನ್ನ ತನ್ನದಾಗಿಸಿಕೊಂಡರು.

ಏಶ್ಯನ್ ಕ್ರೀಡಾಕೂಟದಲ್ಲಿ ಘೋಷಾಲ್ ಐದನೇ ಪದಕ ಜಯಿಸಿದರು. ಈ ಹಿಂದೆ ಘೋಷಾಲ್ 2006, 2010 ಹಾಗೂ 2018ರಲ್ಲಿ ಕಂಚಿನ ಪದಕ ಜಯಿಸಿದ್ದರು. 2014ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದ ಗೇಮ್ಸ್‌ ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.

*ಸ್ಕ್ವಾಷ್ ಆಟಗಾರರ ಶ್ರೇಷ್ಠ ಪ್ರದರ್ಶನ: ಸೌರವ್ ಘೋಷಾಲ್ ಚಿನ್ನ ಗೆಲ್ಲಲು ವಿಫಲರಾಗಿದ್ದರೂ ಏಶ್ಯನ್ ಗೇಮ್ಸ್‌ ನಲ್ಲಿ ಭಾರತೀಯ ಸ್ಕ್ವಾಷ್ ಆಟಗಾರರು ಅತ್ಯುತ್ತಮ ಪ್ರದರ್ಶನದಿಂದ ಗಮನ ಸೆಳೆದರು. 2014ರ ಇಂಚಿಯೋನ್ ಗೇಮ್ಸ್‌ ನಲ್ಲಿನ ಸಾಧನೆಯನ್ನು ಉತ್ತಮಪಡಿಸಿಕೊಂಡಿದ್ದಾರೆ. 9 ವರ್ಷಗಳ ಹಿಂದೆ ಭಾರತವು ಐತಿಹಾಸಿಕ ಚಿನ್ನದ ಪದಕವಲ್ಲದೆ 2 ಬೆಳ್ಳಿ, 1 ಕಂಚು ಜಯಿಸಿತ್ತು. ಈಗ ನಡೆಯುತ್ತಿರುವ ಗೇಮ್ಸ್‌ ನಲ್ಲಿ ಭಾರತವು ಸ್ಕ್ವಾಷ್ನಲ್ಲಿ ಎರಡು ಚಿನ್ನ, ಒಂದು ಬೆಳ್ಳಿ ಹಾಗೂ ಕಂಚು ಜಯಿಸಿದೆ.


ಬಿಲ್ಗಾರಿಕೆ: ಪುರುಷರ, ಮಹಿಳೆಯರ ಕಾಂಪೌಂಡ್ ಟೀಮ್ ಸ್ಪರ್ಧೆಯಲ್ಲಿ ಬಂಗಾರ ಗೆದ್ದ ಭಾರತೀಯರು

ಹಾಂಗ್‌ ಝೌ: ಭಾರತೀಯ ಬಿಲ್ಗಾರರು ಏಶ್ಯನ್ ಗೇಮ್ಸ್‌ ನಲ್ಲಿ ಪುರುಷರ ಹಾಗೂ ಮಹಿಳೆಯರ ಕಾಂಪೌಂಡ್ ಟೀಮ್ ಸ್ಪರ್ಧೆಗಳಲ್ಲಿ ಬಂಗಾರದ ಪದಕಕ್ಕೆ ಗುರಿ ಇಟ್ಟಿದ್ದಾರೆ. ಈ ಮೂಲಕ ಭಾರತದ ಚಿನ್ನದ ಪದಕಗಳ ಸಂಖ್ಯೆಯನ್ನು ಹೆಚ್ಚಿಸಿದ್ದಾರೆ.

ಓಜಾಸ್ ಪ್ರವೀಣ್ ದೇವತಾಳೆ, ಅಭಿಷೇಕ್ ವರ್ಮಾ ಹಾಗೂ ಪ್ರಥಮೇಶ್ ಸಮಧಾನ್ ಜಾವ್ಕರ್ ಅವರನ್ನೊಳಗೊಂಡ ಭಾರತೀಯ ಆರ್ಚರಿ ಕಾಂಪೌಂಡ್ ಟೀಮ್ ಗುರುವಾರ ಚಿನ್ನದ ಪದಕ ಬಾಚಿಕೊಂಡಿತು.

ಈ ಮೂವರು ಅಮೋಘ ಪ್ರದರ್ಶನ ನೀಡಿ ಅಗ್ರ ಸ್ಥಾನ ಪಡೆದರು. ಕೊರಿಯಾ ಸ್ಪರ್ಧಿಗಳಾದ ಜಾಹೂನ್ ಜೂ, ಜಾವೊನ್ ಯಾಂಗ್ ಹಾಗೂ ಜಾಂಘೋ ಕಿಮ್ರನ್ನು 235-230 ಅಂಕಗಳ ಅಂತರದಿಂದ ಸೋಲಿಸಿದರು. ಮೊದಲ ಸೆಟನ್ನು 58-55 ಅಂತರದಿಂದ ಗೆದ್ದುಕೊಂಡ ಭಾರತೀಯರು ಆರಂಭದಲ್ಲೇ ಪ್ರಾಬಲ್ಯ ಸಾಧಿಸಿದರು.ಆದರೆ ಎರಡನೇ ಸೆಟ್ನಲ್ಲಿ ಕೊರಿಯಾ ಸ್ಪರ್ಧಿಗಳು ಮರು ಹೋರಾಟ ನೀಡಿ 59-58 ಅಂತರದಿಂದ ಜಯ ಸಾಧಿಸಿದರು. ದೃತಿಗೆಡದ ಭಾರತೀಯ ಬಿಲ್ಗಾರರು ಮೂರನೇ ಸೆಟ್ನಲ್ಲಿ ಹಿಡಿತ ಸಾಧಿಸಿ 59-57 ಅಂತರದಿಂದ ಜಯಶಾಲಿಯಾದರು. ಅಂತಿಮ ಹಾಗೂ ನಿರ್ಣಾಯಕ ಸೆಟ್ನಲ್ಲಿ ಭಾರತವು ಎಲ್ಲ 10 ಅಂಕವನ್ನು ಗಳಿಸಿ ಚಿನ್ನದ ಪದಕ ತನ್ನದಾಗಿಸಿಕೊಂಡಿತು.

ಆರ್ಚರಿ ಕಾಂಪೌಂಡ್ ಪುರುಷರ ಸ್ಪರ್ಧೆಯ ಸೆಮಿ ಫೈನಲ್ ನಲ್ಲಿ ಭಾರತದ ಸ್ಪರ್ಧಿಗಳು ಚೈನೀಸ್ ತೈಪೆಯ ಚೆಂಗ್-ವೀ ಚಾಂಗ್, ಚೀ-ಲುನ್ ಚೆನ್ ಹಾಗೂ ಚೆಂಗ್ ಜು ಯಾಂಗ್ರನ್ನು 235-224 ಅಂತರದಿಂದ ಮಣಿಸಿದ್ದರು.

ಮಹಿಳೆಯರ ಕಾಂಪೌಂಡ್ ಟೀಮ್ ಇವೆಂಟ್ನಲ್ಲೂ ಚಿನ್ನ

ಇದಕ್ಕೂ ಮೊದಲು ನಡೆದ ಮಹಿಳೆಯರ ಕಾಂಪೌಂಡ್ ಟೀಮ್ ಸ್ಪರ್ಧೆಯಲ್ಲಿ ಭಾರತದ ಜ್ಯೋತಿ ಸುರೇಖಾ ವೆನ್ನಂ, ಅದಿತಿ ಗೋಪಿಚಂದ್ ಹಾಗೂ ಪರ್ನೀತ್ ಕೌರ್ ಚೈನೀಸ್ ತೈಪೆಯ ಯಿ-ಸುಯನ್ ಚೆನ್, ಔ ಹುಯಾಂಗ್ ಹಾಗೂ ಲು ಯುನ್ ವಾಂಗ್ರನ್ನು 230-229 ಅಂತರದಿಂದ ರೋಚಕವಾಗಿ ಸೋಲಿಸಿ ಚಿನ್ನದ ಪದಕ ಜಯಿಸಿದರು.


ಸ್ಕ್ವಾಷ್ ಮಿಕ್ಸೆಡ್ ಡಬಲ್ಸ್: ದೀಪಿಕಾ ಪಲ್ಲಿಕಲ್-ಹರಿಂದರ್ಪಾಲ್ ಸಿಂಗ್ಗೆ ಸ್ವರ್ಣ

ಹಾಂಗ್‌ ಝೌ: ಭಾರತದ ಸ್ಕ್ವಾಷ್ ಜೋಡಿ ದೀಪಿಕಾ ಪಲ್ಲಿಕಲ್ ಹಾಗೂ ಹರಿಂದರ್ ಪಾಲ್ ಸಿಂಗ್ ಸಂಧು ಏಶ್ಯನ್ ಗೇಮ್ಸ್‌ ನಲ್ಲಿ ಮಿಕ್ಸೆಡ್ ಡಬಲ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ಗುರುವಾರ ರೋಚಕವಾಗಿ ಸಾಗಿದ ಫೈನಲ್ ನಲ್ಲಿ ದೀಪಿಕಾ ಪಲ್ಲಿಕಲ್ ಹಾಗೂ ಹರಿಂದರ್ ಪಾಲ್ ಮಲೇಶ್ಯದ ಐಫಾ ಬಿಂತಿ ಅಝ್ಮಾನ್ ಹಾಗೂ ಮುಹಮ್ಮದ್ ಸೈಫಿಕ್ ಬಿನ್ ಮುಹಮ್ಮದ್ ಕಮಲ್ರನ್ನು 35 ನಿಮಿಷಗಳ ತೀವ್ರ ಹಣಾಹಣಿಯಲ್ಲಿ 11-10, 11-10 ಅಂತರದಿಂದ ಮಣಿಸಿದರು.

ಆರಂಭದಲ್ಲಿ ಭಾರತೀಯ ತಂಡವು ಸುಲಭ ಗೆಲುವಿನ ವಿಶ್ವಾಸ ಮೂಡಿಸಿತ್ತು. ಆದರೆ ಎರಡನೇ ಗೇಮ್ನಲ್ಲಿ ತನ್ನ ಏಕಾಗ್ರತೆಯನ್ನು ಕಳೆದುಕೊಂಡು ಮಲೇಶ್ಯ ಎದುರಾಳಿಗಳು ಮರಳಿ ಹೋರಾಡಲು ಅವಕಾಶ ನೀಡಿದರು. 3-9 ಹಿನ್ನಡೆಯಲ್ಲಿದ್ದ ಮಲೇಶ್ಯದ ಜೋಡಿ ಸತತ 7 ಅಂಕಗಳನ್ನು ಗಳಿಸಿ 10-9 ಮುನ್ನಡೆ ಪಡೆದರು. ಆದಾಗ್ಯೂ ದೀಪಿಕಾ ಹಾಗೂ ಹರ್ಮಿಂದರ್ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿ ಪಂದ್ಯವನ್ನು ರೋಚಕವಾಗಿ ಗೆದ್ದುಕೊಂಡರು.

ಪ್ರಸಕ್ತ ಏಶ್ಯನ್ ಗೇಮ್ಸ್ ನಲ್ಲಿ ಮಹಿಳೆಯರ ಟೀಮ್ ಸ್ಪರ್ಧೆಯಲ್ಲಿ ಕಂಚು ಜಯಿಸಿದ್ದ ದೀಪಿಕಾ ಪಲ್ಲಿಕಲ್ ಇದೀಗ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.

32ರ ಹರೆಯದ ದೀಪಿಕಾ ಏಶ್ಯನ್ ಗೇಮ್ಸ್ ನ ನಾಲ್ಕು ಆವೃತ್ತಿಗಳಲ್ಲಿ ಭಾಗವಹಿಸಿ ಒಟ್ಟು ಆರು ಪದಕಗಳನ್ನು ಜಯಿಸಿದ್ದಾರೆ. ದೀಪಿಕಾ ಈ ತನಕ ಒಂದು ಚಿನ್ನದ ಪದಕ, ಒಂದು ಬೆಳ್ಳಿ ಹಾಗೂ 4 ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಓರ್ವ ನಿಪುಣ ಸ್ಕ್ವಾಷ್ ಆಟಗಾರ್ತಿಯಾಗಿದ್ದಾರೆ.

ಏಶ್ಯನ್ ಗೇಮ್ಸ್‌ ನಲ್ಲಿ ದೀಪಿಕಾ ಪಲ್ಲಿಕಲ್ ಸಾಧನೆಯು ಭಾರತದ ಸ್ಕ್ವಾಷ್ ಯಶಸ್ಸಿನಲ್ಲಿ ಪ್ರಮುಖ ಕೊಡುಗೆ ನೀಡಿದ್ದು, ದೇಶದಲ್ಲಿ ಭವಿಷ್ಯದ ಪೀಳಿಗೆಯ ಸ್ಕ್ವಾಷ್ ಆಟಗಾರರಿಗೆ ಸ್ಫೂರ್ತಿಯಾಗಿ ಉಳಿದಿದ್ದಾರೆ.


ಮಹಿಳೆಯರ ಹಾಕಿಯಲ್ಲಿ ಭಾರತದ ಚಿನ್ನದ ಕನಸು ಭಗ್ನ: ಚೀನಾ ವಿರುದ್ಧ ಸೆಮಿ ಫೈನಲ್ ನಲ್ಲಿ ಸೋಲು

ಹಾಂಗ್‌ ಝೌ: ಏಶ್ಯನ್ ಗೇಮ್ಸ್‌ ನಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿದ್ದ ಭಾರತೀಯ ಮಹಿಳಾ ಹಾಕಿ ತಂಡವು ಗುರುವಾರ ನಡೆದ ಸೆಮಿ ಫೈನಲ್ ನಲ್ಲಿ ಆತಿಥೇಯ ಚೀನಾದ ವಿರುದ್ಧ 0-4 ಅಂತರದಿಂದ ಹೀನಾಯವಾಗಿ ಸೋತು ನಿರಾಸೆಗೊಳಿಸಿದೆ. ಈ ಸೋಲಿನೊಂದಿಗೆ ಭಾರತವು ಚಿನ್ನ ಗೆಲ್ಲುವ ಸ್ಪರ್ಧೆಯಿಂದ ನಿರ್ಗಮಿಸಿದ್ದಲ್ಲದೆ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ನೇರ ಅರ್ಹತೆ ಪಡೆಯುವ ಅವಕಾಶವೂ ಕೈತಪ್ಪಿ ಹೋಗಿದೆ.

ವಿಶ್ವ ರ್ಯಾಂಕಿಂಗ್ ನಲ್ಲಿ 7ನೇ ಸ್ಥಾನದಲ್ಲಿರುವ, ಪ್ರಸಕ್ತ ಟೂರ್ನಮೆಂಟಿನಲ್ಲಿ ಗರಿಷ್ಠ ರ್ಯಾಂಕಿನ ತಂಡವಾಗಿದ್ದ, ಕಳೆದ ಆವೃತ್ತಿಯ ಗೇಮ್ಸ್‌ ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಭಾರತೀಯ ವನಿತೆಯರು ಜಾಗತಿಕ ರ್ಯಾಂಕಿಂಗ್ನಲ್ಲಿ 11ನೇ ಸ್ಥಾನದಲ್ಲಿರುವ ಹಾಗೂ 2018ರ ಜಕಾರ್ತ ಗೇಮ್ಸ್‌ ನಲ್ಲಿ ಕಂಚಿನ ಪದಕ ಜಯಿಸಿದ್ದ ಚೀನಾ ತಂಡದ ಎದುರು ಪ್ರಬಲ ಪ್ರದರ್ಶನ ನೀಡುವಲ್ಲಿ ವಿಫಲರಾದರು.


ಕುಸ್ತಿ: ಅಂತಿಮ್ ಪಾಂಘಾಲ್ ಗೆ ಕಂಚು

ಹಾಂಗ್‌ ಝೌ: ಏಶ್ಯನ್ ಗೇಮ್ಸ್‌ ನಲ್ಲಿ ಭಾರತದ ಪ್ರತಿಭಾವಂತ ಯುವ ಕುಸ್ತಿ ತಾರೆ ಅಂತಿಮ್ ಪಾಂಘಾಲ್ ಟೋಕಿಯೊ ಒಲಿಂಪಿಕ್ಸ್ ಪದಕ ವಿಜೇತೆ ಬೊಲೊರ್ಟುಯಾ ಬ್ಯಾಟ್ ಓಚಿರ್ರನ್ನು 3-1 ಅಂತರದಿಂದ ಮಣಿಸುವುದರೊಂದಿಗೆ ಕಂಚಿನ ಪದಕ ಗೆದ್ದುಕೊಂಡರು. ಭಾರತದ ಇತರ ಕುಸ್ತಿಪಟುಗಳ ಪಾಲಿಗೆ ಗುರುವಾರ ಸವಾಲಿನ ದಿನವಾಗಿತ್ತು.

ಮಹಿಳೆಯರ ಫ್ರೀಸ್ಟೈಲ್ 57 ಕೆಜಿ ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ನಡೆದ ಹಣಾಹಣಿಯಲ್ಲಿ ಭಾರತದ ಕುಸ್ತಿಪಟು ಮಾನ್ಸಿ ಉಝ್ಬೇಕಿಸ್ತಾನದ ಲೇಲೋಖೋನ್ ಸೊಬಿರೋವಾ ವಿರುದ್ಧ ಸೋತಿದ್ದಾರೆ. ಎರಡು ಬಾರಿಯ ವಿಶ್ವ ಚಾಂಪಿಯನ್, ಜಪಾನಿನ ಅಕಾರಿ ಫುಜಿನಮಿ ವಿರುದ್ಧ ಕ್ವಾರ್ಟರ್ ಫೈನಲ್ ನಲ್ಲಿ ಸೋತಿದ್ದ ಚೊಚ್ಚಲ ಏಶ್ಯನ್ ಗೇಮ್ಸ್ ಆಡಿದ 19ರ ಹರೆಯದ ಅಂತಿಮ್ ಪಾಂಘಾಲ್ ಕಂಚಿನ ಪದಕಕ್ಕಾಗಿ ನಡೆದ ಪ್ಲೇ ಆಫ್ ಸ್ಪರ್ಧೆಯಲ್ಲಿ ಮರು ಹೋರಾಟ ನೀಡಿದರು.

ಮಹಿಳೆಯರ 53 ಕೆಜಿ ವಿಭಾಗದಲ್ಲಿ ಅಂತಿಮ್ ಸ್ಪರ್ಧೆಯಲ್ಲಿ ಹಿಡಿತ ಸಾಧಿಸಿದ್ದು, ಮಂಗೋಲಿಯದ ಎದುರಾಳಿ ಪ್ರತಿ ದಾಳಿ ನಡೆಸದಂತೆ ತಡೆದರು.


ಬ್ಯಾಡ್ಮಿಂಟನ್: ಪ್ರಣಯ್ ಸೆಮಿ ಫೈನಲ್ ಗೆ, ಪದಕ ಖಚಿತ; ಪಿ.ವಿ. ಸಿಂಧುಗೆ ಸೋಲು

ಹಾಂಗ್ಝೌ, ಅ.4: ಏಶ್ಯನ್ ಗೇಮ್ಸ್‌ ನಲ್ಲಿ ಸೆಮಿ ಫೈನಲ್ ಗೆ ಪ್ರವೇಶಿಸಿರುವ ಎಚ್.ಎಸ್.ಪ್ರಣಯ್ 41 ವರ್ಷಗಳಲ್ಲಿ ಮೊದಲ ಬಾರಿ ಏಶ್ಯನ್ ಗೇಮ್ಸ್‌ ನಲ್ಲಿ ಪುರುಷರ ಸಿಂಗಲ್ಸ್‌ ನಲ್ಲಿ ಬ್ಯಾಡ್ಮಿಂಟನ್ನಲ್ಲಿ ಪದಕ ಗೆಲ್ಲಲಿರುವ ಭಾರತದ ಮೊದಲ ಆಟಗಾರನಾಗುವ ಹಾದಿಯಲ್ಲಿದ್ದಾರೆ.

ಆದರೆ ಮಹಿಳೆಯರ ಸಿಂಗಲ್ಸ್‌ ನಲ್ಲಿ ಪಿ.ವಿ. ಸಿಂಧು ಅವರ ಹೋರಾಟ ಅಂತ್ಯವಾಗಿದೆ.

ಬೆನ್ನುನೋವಿನೊಂದಿಗೆ ಆಡಿದ ಪ್ರಣಯ್ ಗುರುವಾರ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ನಲ್ಲಿ ಮಲೇಶ್ಯದ ಆಟಗಾರ ಲೀ ಝಿ ಜಿಯಾರನ್ನು 21-16, 21-23, 22-20 ಗೇಮ್ಗಳ ಅಂತರದಿಂದ ಮಣಿಸಿದರು. ಈಗ ನಡೆಯುತ್ತಿರುವ ಏಶ್ಯನ್ ಗೇಮ್ಸ್‌ ನಲ್ಲಿ ಭಾರತಕ್ಕೆ ಬ್ಯಾಡ್ಮಿಂಟನ್ನಲ್ಲಿ 2ನೇ ಪದಕ ದೃಢಪಡಿಸಿದರು. ಭಾರತವು ಕಳೆದ ರವಿವಾರ ಪುರುಷರ ಟೀಮ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ಜಯಿಸಿತ್ತು.

ಅಂತಿಮ-4ರ ಸುತ್ತು ತಲುಪಿರುವ ಪ್ರಣಯ್ ಏಶ್ಯನ್ ಗೇಮ್ಸ್‌ ನಲ್ಲಿ ಪುರುಷರ ಸಿಂಗಲ್ಸ್‌ ನಲ್ಲಿ ದೀರ್ಘ ಕಾಲದಿಂದ ಕಾಡುತ್ತಿದ್ದ ಪದಕದ ಬರವನ್ನು ನೀಗಿಸಿದ್ದಾರೆ. ಹೊಸದಿಲ್ಲಿಯಲ್ಲಿ 1982ರಲ್ಲಿ ನಡೆದಿದ್ದ ಏಶ್ಯನ್ ಗೇಮ್ಸ್‌ ನಲ್ಲಿ ಸಯ್ಯದ್ ಮೋದಿ ಮೊದಲ ಪದಕ(ಕಂಚು)ಜಯಿಸಿದ್ದರು. ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ವಿಜೇತ ಪ್ರಣಯ್ ಬೆನ್ನುನೋವಿನಿಂದಾಗಿ ರವಿವಾರ ಟೀಮ್ ಚಾಂಪಿಯನ್ಶಿಪ್ ಫೈನಲ್ನಿಂದ ಹೊರಗುಳಿದಿದ್ದರು. ಚೀನಾ ವಿರುದ್ಧ 2-3 ಅಂತರದಿಂದ ಸೋತಿದ್ದ ಭಾರತವು ಬೆಳ್ಳಿಗೆ ತೃಪ್ತಿಪಟ್ಟುಕೊಂಡಿತ್ತು.

ಮತ್ತೊಂದೆಡೆ ಸಿಂಧು ಅವರು 9 ವರ್ಷಗಳಲ್ಲಿ ಮೊದಲ ಬಾರಿ ಪದಕ ಗೆಲ್ಲದೆ ಸ್ವದೇಶಕ್ಕೆ ವಾಪಸಾಗಲಿದ್ದಾರೆ. ಸಿಂಧು 47 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್‌ ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವದ ನಂ.5ನೇ ಆಟಗಾರ್ತಿ ಚೀನಾದ ಹೀ ಬಿಂಗ್ಜಾವೊ ವಿರುದ್ಧ 16-21, 12-21 ಗೇಮ್ಗಳ ಅಂತರದಿಂದ ಸೋತಿದ್ದಾರೆ.


ಕುಸ್ತಿ: ಅಂತಿಮ್ ಪಾಂಘಾಲ್ ಗೆ ಕಂಚು

ಹಾಂಗ್‌ ಝೌ: ಏಶ್ಯನ್ ಗೇಮ್ಸ್‌ ನಲ್ಲಿ ಭಾರತದ ಪ್ರತಿಭಾವಂತ ಯುವ ಕುಸ್ತಿ ತಾರೆ ಅಂತಿಮ್ ಪಾಂಘಾಲ್ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಪದಕ ವಿಜೇತೆ ಬೊಲೊರ್ಟುಯಾ ಬ್ಯಾಟ್ ಓಚಿರ್ರನ್ನು 3-1 ಅಂತರದಿಂದ ಮಣಿಸುವುದರೊಂದಿಗೆ ಕಂಚಿನ ಪದಕ ಗೆದ್ದುಕೊಂಡರು. ಭಾರತದ ಇತರ ಕುಸ್ತಿಪಟುಗಳ ಪಾಲಿಗೆ ಗುರುವಾರ ಸವಾಲಿನ ದಿನವಾಗಿತ್ತು. ನರಿಂದರ್ ಚೀಮಾ(ಗ್ರೀಕೊ-ರೋಮನ್ 97 ಕೆಜಿ), ನವೀನ್(ಗ್ರೀಕೊ-ರೋಮನ್ 130 ಕೆಜಿ) ಹಾಗೂ ಪೂಜಾ ಗೆಹ್ಲೋಟ್(ಮಹಿಳೆಯರ 50 ಕೆಜಿ) ಸೋತು ನಿರ್ಗಮಿಸಿದರು.

ಪೂಜಾ ಕಂಚಿನ ಪದಕಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಉಝ್ಬೇಸ್ತಾನದ ಅಕ್ಟೆಂಗ್ ವಿರುದ್ಧ 2-9 ಅಂತರದಿಂದ ಸೋತಿದ್ದಾರೆ. ಮಹಿಳೆಯರ ಫ್ರೀಸ್ಟೈಲ್ 57 ಕೆಜಿ ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ನಡೆದ ಹಣಾಹಣಿಯಲ್ಲಿ ಭಾರತದ ಕುಸ್ತಿಪಟು ಮಾನ್ಸಿ ಅಹ್ಲಾವತ್ರಿಂದ ಭಾರೀ ನಿರೀಕ್ಷೆ ಇಡಲಾಗಿತ್ತು. ಮಾನ್ಸಿ ಉಝ್ಬೇಕಿಸ್ತಾನದ ಲೇಲೋಖೋನ್ ಸೊಬಿರೋವಾ ವಿರುದ್ಧ ಕೇವಲ 70 ಸೆಕೆಂಡ್ನಲ್ಲಿ ಸೋತಿದ್ದಾರೆ.

ಎರಡು ಬಾರಿಯ ವಿಶ್ವ ಚಾಂಪಿಯನ್, ಜಪಾನಿನ ಅಕಾರಿ ಫುಜಿನಮಿ ವಿರುದ್ಧ ಕ್ವಾರ್ಟರ್ ಫೈನಲ್ ನಲ್ಲಿ ಸೋತಿದ್ದ ಚೊಚ್ಚಲ ಏಶ್ಯನ್ ಗೇಮ್ಸ್ ಆಡಿದ 19ರ ಹರೆಯದ ಅಂತಿಮ್ ಪಾಂಘಾಲ್ ಕಂಚಿನ ಪದಕಕ್ಕಾಗಿ ನಡೆದ ಪ್ಲೇ ಆಫ್ ಸ್ಪರ್ಧೆಯಲ್ಲಿ ಮರು ಹೋರಾಟ ನೀಡಿದರು. ಮಹಿಳೆಯರ 53 ಕೆಜಿ ವಿಭಾಗದಲ್ಲಿ ಅಂತಿಮ್ ಸ್ಪರ್ಧೆಯಲ್ಲಿ ಹಿಡಿತ ಸಾಧಿಸಿದ್ದು, ಮಂಗೋಲಿಯದ ಎದುರಾಳಿ ಪ್ರತಿ ದಾಳಿ ನಡೆಸದಂತೆ ತಡೆದರು.

ಏಶ್ಯನ್ ಗೇಮ್ಸ್ಗ ನೇರ ಪ್ರವೇಶ ಪಡೆದಿರುವುದಕ್ಕೆ ಟೀಕೆಗಳನ್ನು ಎದುರಿಸಿದ್ದ ಬಜರಂಗ್ ಪುನಿಯಾ(65ಕೆಜಿ)ಹಾಗೂ ಪ್ರತಿಭಾವಂತ ಕುಸ್ತಿತಾರೆ ಅಮಾನ್ ಸೆಹ್ರಾವತ್(56ಕೆಜಿ)ಶುಕ್ರವಾರ ಕುಸ್ತಿ ಕಣಕ್ಕಿಳಿಯಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News