ಭಾರತ-ಬಾಂಗ್ಲಾದೇಶ ಮಹಿಳಾ ಏಕದಿನ ಕ್ರಿಕೆಟ್ ಪಂದ್ಯ ರೋಚಕ ಟೈ

Update: 2023-07-22 16:53 GMT
Screengrab: @iam_sazzad | twitter

ಢಾಕಾ, ಜು.22: ಭಾರತ ಹಾಗೂ ಬಾಂಗ್ಲಾದೇಶ ನಡುವೆ ಶನಿವಾರ ನಡೆದ 3ನೇ ಏಕದಿನ ಪಂದ್ಯವು ರೋಚಕ ಟೈನಲ್ಲಿ ಕೊನೆಗೊಂಡಿದೆ. ಗೆಲ್ಲಲು 226 ರನ್ ಗುರಿ ಬೆನ್ನಟ್ಟಿದ ಭಾರತವು 49.3 ಓವರ್‌ಗಳಲ್ಲಿ 225 ರನ್‌ಗೆ ಆಲೌಟಾಯಿತು. ಈ ಫಲಿತಾಂಶದಿಂದಾಗಿ ಸರಣಿಯು 1-1ರಿಂದ ಸಮಬಲಗೊಂಡ ಕಾರಣ ಉಭಯ ತಂಡಗಳು ಟ್ರೋಫಿಯನ್ನು ಹಂಚಿಕೊಂಡವು. ಈ ಪಂದ್ಯದಲ್ಲಿ ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಔಟ್ ತೀರ್ಪು ನೀಡಿದ ಅಂಪೈರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ ಸ್ಟಂಪ್‌ಗೆ ಬ್ಯಾಟ್‌ನಿಂದ ಬಾರಿಸಿ ಅಶಿಸ್ತಿನ ವರ್ತನೆ ತೋರಿದರು.

34ನೇ ಓವರ್‌ನ 4ನೇ ಎಸೆತದಲ್ಲಿ ನಹಿದಾ ಅಖ್ತರ್ ಬೌಲಿಂಗ್‌ನಲ್ಲಿ ಕೌರ್ ಔಟಾದರು. ಕೌರ್ ಅವರು ನಹಿದಾ ಎಸೆತವನ್ನ್ನು ಸ್ವೀಪ್ ಮಾಡಲು ಯತ್ನಿಸಿದ್ದು ಚೆಂಡು ಗ್ಲೌಸ್‌ಗೆ ತಾಗಿದಂತೆ ಕಂಡುಬಂತು. ಆದರೆ ದೃಶ್ಯವು ಸ್ಪಷ್ಟವಾಗಿರಲಿಲ್ಲ. ನಹಿದಾ ಔಟ್‌ಗಾಗಿ ಮನವಿ ಮಾಡಿದ ತಕ್ಷಣ ಅಂಪೈರ್ ಔಟ್ ತೀರ್ಪು ನೀಡಿದರು. ಇದರಿಂದ ಕೆರಳಿದ ಕೌರ್ ಬ್ಯಾಟ್‌ನಿಂದ ಸ್ಟಂಪ್‌ಗೆ ಬಡಿದು ಅಲ್ಲೇ ಪ್ರತಿಭಟಿಸಿದರು. ಅಂಪೈರ್ ಕಡೆ ನೋಡುತ್ತಾ ಬೈಯುತ್ತಾ ಪೆವಿಲಿಯನ್‌ಗೆ ಸಾಗಿದರು.

ಭಾರತಕ್ಕೆ 19 ಎಸೆತಗಳಲ್ಲಿ ಗೆಲುವಿಗೆ 10 ರನ್ ಅಗತ್ಯವಿತ್ತು. ಆದರೆ 16 ಎಸೆತಗಳಲ್ಲಿ ಕೊನೆಯ 4 ವಿಕೆಟ್‌ಗಳನ್ನು ಕಳೆದುಕೊಂಡ ಭಾರತ ಪಂದ್ಯವನ್ನು ಟೈಗೊಳಿಸಿತು. ಸ್ಕೋರ್ ಸಮಬಲವಾಗಿ ನಿಗದಿತ ಸಮಯಕ್ಕೆ ಮುಕ್ತಾಯವಾದ ಕಾರಣ ಪಂದ್ಯ ಟೈ ಎಂದು ಘೋಷಿಸಿ ಟ್ರೋಫಿಯನ್ನು ಎರಡೂ ತಂಡಗಳಿಗೆ ಹಂಚಲಾಯಿತು.

ಒಂದು ಹಂತದಲ್ಲಿ 191 ರನ್‌ಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಭಾರತವು 48ನೇ ಓವರ್‌ನಲ್ಲಿ 217 ರನ್‌ಗೆ 9 ವಿಕೆಟ್‌ಗಳನ್ನು ಕಳೆದುಕೊಂಡಿತು. ಅಂತಿಮ 4 ಎಸೆತಗಳಲ್ಲಿ ಒಂದು ರನ್ ಅಗತ್ಯವಿದ್ದಾಗ ಮೇಘನಾ ಅವರು ವಿಕೆಟ್ ಒಪ್ಪಿಸಿದರು. ಹೀಗಾಗಿ ಸ್ಮತಿ ಮಂಧಾನ(59 ರನ್) ಹಾಗೂ ಹರ್ಲೀನ್ ಡೆವೊಲ್(77 ರನ್)ಅರ್ಧಶತಕ ವ್ಯರ್ಥವಾಯಿತು.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News