ಇಂಡಿಯಾ ಸಿ ವಿರುದ್ದ ಜಯಭೇರಿ | ದುಲೀಪ್ ಟ್ರೋಫಿ ಗೆದ್ದ ಇಂಡಿಯಾ ಎ

Update: 2024-09-22 15:45 GMT

PC ; X 

ಅನಂತಪುರ : ತನುಷ್ ಕೋಟ್ಯಾನ್ ಹಾಗೂ ಪ್ರಸಿದ್ಧ ಕೃಷ್ಣ ಅವರ ಅಮೋಘ ಬೌಲಿಂಗ್ ನೆರವಿನಿಂದ ಇಂಡಿಯಾ ಎ ತಂಡವು ಇಂಡಿಯಾ ಸಿ ತಂಡವನ್ನು 132 ರನ್ ಅಂತರದಿಂದ ಮಣಿಸಿ ದುಲೀಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಸಾಯಿ ಸುದರ್ಶನ್ ಅವರ ಶತಕ(111 ರನ್)ವ್ಯರ್ಥವಾಯಿತು.

ಇಂಡಿಯಾ ಸಿ(9 ಅಂಕ)ಗಿಂತ ಮೂರು ಅಂಕದ ಹಿನ್ನಡೆಯೊಂದಿಗೆ ಅಂತಿಮ ಸುತ್ತು ಆರಂಭಿಸಿದ ಇಂಡಿಯಾ ಎ ತಂಡವು ನಾಲ್ಕು ದಿನಗಳ ಸ್ಪರ್ಧೆಯಲ್ಲಿ ಪ್ರಾಬಲ್ಯ ಮೆರೆಯಿತು.

ಈ ಗೆಲುವಿನ ಮೂಲಕ ಇಂಡಿಯಾ ಎ ತಂಡವು 3 ಪಂದ್ಯಗಳಲ್ಲಿ ಒಟ್ಟು 12 ಅಂಕಗಳನ್ನು ಕಲೆ ಹಾಕಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು. ದುಲೀಪ್ ಟ್ರೋಫಿ ಚಾಂಪಿಯನ್‌ಶಿಪ್‌ನ್ನು ವಶಪಡಿಸಿಕೊಂಡಿದೆ.

ಕೊನೆಯ ಹಾಗೂ 4ನೇ ದಿನವಾದ ರವಿವಾರ ಗೆಲ್ಲಲು 350 ರನ್ ಗುರಿ ಚೇಸ್ ಮಾಡಿದ ಇಂಡಿಯಾ ಸಿ ತಂಡ 81.5 ಓವರ್‌ಗಳಲ್ಲಿ 217 ರನ್‌ಗೆ ಆಲೌಟಾಯಿತು.

ಪ್ರಸಿದ್ದ ಕೃಷ್ಣ 13.5 ಓವರ್‌ಗಳಲ್ಲಿ 50 ರನ್‌ಗೆ 3 ವಿಕೆಟ್‌ಗಳನ್ನು ಉರುಳಿಸಿದರು. ತನುಷ್ ಕೋಟ್ಯಾನ್ (3-47) ಹಾಗೂ ಅಕಿಬ್ ಖಾನ್(2-26) ಅವರು ಪ್ರಸಿದ್ಧ ಕೃಷ್ಣಗೆ ಉತ್ತಮ ಸಾಥ್ ನೀಡಿದರು.

ಇಂಡಿಯಾ ಸಿ ಪರ 2ನೇ ಇನಿಂಗ್ಸ್‌ನಲ್ಲಿ ಸಾಯಿ ಸುದರ್ಶನ್(111 ರನ್)ಹಾಗೂ ಋತುರಾಜ್ ಗಾಯಕ್ವಾಡ್(44 ರನ್)ಹೋರಾಟ ನೀಡಿದರು. ಆದರೆ ತಂಡಕ್ಕೆ ಗೆಲುವು ಲಭಿಸಲಿಲ್ಲ.

ಟೀ ವಿರಾಮದ ವೇಳಗೆ ಇಂಡಿಯಾ ಸಿ 3 ವಿಕೆಟ್‌ಗಳ ನಷ್ಟಕ್ಕೆ 169 ರನ್ ಗಳಿಸಿತ್ತು. ಸುದರ್ಶನ್ ಹಾಗೂ ಇಶಾನ್ ಕಿಶನ್ ಕ್ರೀಸ್‌ನಲ್ಲಿದ್ದರು. 30 ಓವರ್‌ಗಳಲ್ಲಿ ಇನ್ನೂ 182 ರನ್ ಬೇಕಾಗಿತ್ತು. ಅಗ ಕಿಶನ್(17 ರನ್)ಹಾಗೂ ಅಭಿಷೇಕ್ ಪೊರೆಲ್(0)ವಿಕೆಟ್‌ಗಳನ್ನು ಸತತ ಎಸೆತಗಳಲ್ಲಿ ಉರುಳಿಸಿದ ತನುಷ್ ಕೋಟ್ಯಾನ್ ಇಂಡಿಯಾ ಸಿ ತಂಡಕ್ಕೆ ಆಘಾತ ನೀಡಿದರು.

ಇದಕ್ಕೂ ಮೊದಲು ಋತುರಾಜ್ ಗಾಯಕ್ವಾಡ್(44)ಅಕಿಬ್ ಖಾನ್‌ಗೆ ವಿಕೆಟ್ ಒಪ್ಪಿಸಿದರು. ವಿಜಯಕುಮಾರ್(17ರನ್) ರನೌಟಾದರು. ಸುದರ್ಶನ್(111 ರನ್, 206 ಎಸೆತ, 12 ಬೌಂಡರಿ)ಇನಿಂಗ್ಸ್‌ಗೆ ಆಸರೆಯಾದರು. ಆದರೆ ಅವರಿಗೆ ಮತ್ತೊಂದು ತುದಿಯಿಂದ ಸರಿಯಾದ ಬೆಂಬಲ ಸಿಗಲಿಲ್ಲ.

78ನೇ ಓವರ್‌ನಲ್ಲಿ ಸುದರ್ಶನ್ ಅವರು ಕೃಷ್ಣಗೆ ವಿಕೆಟ್ ಒಪ್ಪಿಸಿದ ನಂತರ ಇಂಡಿಯಾ ಸಿ ಪ್ರತಿರೋಧ ಅಂತ್ಯಗೊಂಡಿತು. ಅನ್ಶುಲ್ ಕಾಂಬೊಜ್ ಹಾಗೂ ಬಾಬಾ ಇಂದ್ರಜಿತ್‌ರನ್ನು ಶೂನ್ಯಕ್ಕೆ ಔಟ್ ಮಾಡಿದ ಕೃಷ್ಣ , ಇಂಡಿಯಾ ಎಗೆ ಗೆಲುವು ತಂದುಕೊಟ್ಟರು.

ದಿನದಾರಂಭದಲ್ಲಿ ಇಂಡಿಯಾ ಎ ತಂಡ ತನ್ನ 2ನೇ ಇನಿಂಗ್ಸ್‌ನ್ನು 6 ವಿಕೆಟ್‌ಗೆ 286 ರನ್‌ಗೆ ಡಿಕ್ಲೇರ್ ಮಾಡಿತು. ರಿಯಾನ್ ಪರಾಗ್(73 ರನ್)ಹಾಗೂ ಶಾಶ್ವತ್ ರಾವತ್(53 ರನ್)ಅರ್ಧಶತಕ ಗಳಿಸಿದರು.

ವಿಕೆಟ್‌ಕೀಪರ್-ಬ್ಯಾಟರ್ ಕುಮಾರ ಕುಶಾಗ್ರ 42 ರನ್ ಗಳಿಸಿ ತನ್ನ ತಂಡದ ಒಟ್ಟಾರೆ ಮುನ್ನಡೆಯನ್ನು 349ಕ್ಕೆ ತಲುಪಿಸಿದರು.

ಸಂಕ್ಷಿಪ್ತ ಸ್ಕೋರ್

ಇಂಡಿಯಾ ಎ: 297, 286/6 ಡಿಕ್ಲೇರ್(ಪರಾಗ್ 73, ರಾವತ್ 53, ಗೌರವ್ 4-68)

ಇಂಡಿಯಾ ಸಿ: 234, 217 ರನ್(ಗಾಯಕ್ವಾಡ್ 44, ಸುದರ್ಶನ್ 111, ಪ್ರಸಿದ್ಧ ಕೃಷ್ಣ 3-50, ಅಕಿಬ್ ಖಾನ್ 2-26, ತನುಷ್ ಕೋಟ್ಯಾನ್ 3-47)

ಪಂದ್ಯಶ್ರೇಷ್ಠ: ಶಾಶ್ವತ್ ರಾವತ್(ಇಂಡಿಯಾ ಎ)

ಸರಣಿಶ್ರೇಷ್ಠ: ಅನ್ಶುಲ್ ಕಾಂಬೊಜಿ (ಇಂಡಿಯಾ ಸಿ)

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News