ಚೆಸ್ ಒಲಿಂಪಿಯಾಡ್ ಇತಿಹಾಸದಲ್ಲೇ ಮೊದಲು: ಭಾರತಕ್ಕೆ ಅವಳಿ ಚಿನ್ನ

Update: 2024-09-23 03:11 GMT

ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತದ ಪುರುಷರ ಹಾಗೂ ಮಹಿಳೆಯರ ತಂಡ ಬುಡಾಪೆಸ್ಟ್ ನಲ್ಲಿ ನಡೆದ ಚೆಸ್ ಒಲಿಂಪಿಯಾಡ್ ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿವೆ. ಈ ಸಾಧನೆ ಮಾಡಿದ ಸೋವಿಯತ್ ಒಕ್ಕೂಟ ಮತ್ತು ಚೀನಾದ ಸಾಲಿಗೆ ಮೂರನೇ ರಾಷ್ಟ್ರವಾಗಿ ಭಾರತ ಸೇರ್ಪಡೆಯಾಗಿದೆ. ಸೋವಿಯತ್ ಒಕ್ಕೂಟ 1982 ರಿಂದ 86ರವರೆಗೆ ಹಾಗೂ ಚೀನಾ 2008ರಲ್ಲಿ ಈ ಸಾಧನೆ ಮಾಡಿದ್ದವು.

ಎರಡನೇ ಶ್ರೇಯಾಂಕದ ಭಾರತೀಯ ಪುರುಷರ ತಂಡಕ್ಕೆ ಶನಿವಾರ ರಾತ್ರಿಯೇ ಅಗ್ರ ಪೋಡಿಯಂ ಸಾಧನೆ ದೃಢಪಟ್ಟಿತ್ತು. ಆದರೆ ಅಗ್ರ ಶ್ರೇಯಾಂಕದ ಭಾರತದ ಮಹಿಳಾ ತಂಡ ತೀವ್ರ ಸೆಣಸಿನ ಮೂಲಕ ಈ ಸಾಧನೆ ಮಾಡಿತು. ಭಾರತದ ಪುರುಷರ ತಂಡ ಸ್ಲೋವೇನಿಯಾ ತಂಡವನ್ನು 3.5-0.5 ಅಂಕಗಳಿಂದ ಅಂತಿಮ ಸುತ್ತಿನಲ್ಲಿ ಸೋಲಿಸಿ ಗರಿಷ್ಠ 21 ಅಂಕಗಳನ್ನು ಸಂಪಾದಿಸಿತು. ಮಹಿಳಾ ತಂಡ ಕೂಡಾ ಆಝರ್ ಬೈಜಾನ್ ವಿರುದ್ಧ 3.5-0.5 ಅಂಕದ ಗೆಲುವಿನೊಂದಿಗೆ 19 ಅಂಕ ಕಲೆಹಾಕಿ ಚಿನ್ನ ಪಡೆಯಿತು.

ಭಾರತದ ಸ್ಪರ್ಧಿಗಳಾದ ಡಿ.ಗುಕೇಶ್, ಅರ್ಜುನ್ ಎರಿಗೈಸಿ, ದಿವ್ಯಾ ದೇಶಮುಖ್ ಮತ್ತು ವಂಟಿಕಾ ಅಗರ್ ವಾಲ್ ತಮ್ಮ ತಮ್ಮ ವಿಭಾಗಗಳಲ್ಲಿ ಒಟ್ಟು ನಾಲ್ಕು ಚಿನ್ನ ಗೆದ್ದರು. 2022ರ ಚೆಸ್ ಒಲಿಂಪಿಯಾಡ್ ನಲ್ಲಿ ಭಾರತದ ಉಭಯ ತಂಡಗಳು ಕಂಚಿನ ಪದಕ ಗಳಿಸಿದ್ದು, ಇದುವರೆಗಿನ ಉತ್ತಮ ಸಾಧನೆ ಎನಿಸಿತ್ತು. ಅತ್ಯಂತ ಗಮನಾರ್ಹ ಅಂಶವೆಂದರೆ 44 ಪಂದ್ಯಗಳ ಪೈಕಿ ಭಾರತ ಒಂದು ಪಂದ್ಯದಲ್ಲಿ ಮಾತ್ರ ಸೋಲು ಕಂಡಿತ್ತು. 2014ರಲ್ಲಿ ಚೀನಾ ಈ ಹೆಗ್ಗಳಿಕೆಗೆ ಪಾತ್ರವಾಗಿತ್ತು.

Full View

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News