ಮೊದಲ ಟೆಸ್ಟ್ | ನ್ಯೂಝಿಲ್ಯಾಂಡ್ ವಿರುದ್ಧ ಶ್ರೀಲಂಕಾ ಜಯಭೇರಿ
ಗಾಲೆ : ಐದು ವಿಕೆಟ್ ಗೊಂಚಲು ಪಡೆದಿರುವ ಸ್ಪಿನ್ನರ್ ಪ್ರಭಾತ್ ಜಯಸೂರ್ಯ(5-68) ಮೊದಲ ಟೆಸ್ಟ್ ಪಂದ್ಯದ ಕೊನೆಯ ದಿನವಾದ ಸೋಮವಾರ ಬೆಳಗ್ಗೆ ಶ್ರೀಲಂಕಾ ಕ್ರಿಕೆಟ್ ತಂಡ ನ್ಯೂಝಿಲ್ಯಾಂಡ್ ತಂಡವನ್ನು 63 ರನ್ ಅಂತರದಿಂದ ಸೋಲಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
ಗೆಲ್ಲಲು 275 ರನ್ ಗುರಿ ಪಡೆದಿದ್ದ ನ್ಯೂಝಿಲ್ಯಾಂಡ್ ತಂಡ ಸೋಮವಾರ 8 ವಿಕೆಟ್ ನಷ್ಟಕ್ಕೆ 207 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿತು. ಪಂದ್ಯ ಆರಂಭವಾಗಿ 15 ನಿಮಿಷ ಕಳೆಯುವಷ್ಟರಲ್ಲಿ 211 ರನ್‌ಗೆ ಆಲೌಟಾಯಿತು. ರಚಿನ್ ರವೀಂದ್ರ(92 ರನ್)ಟಾಪ್ ಸ್ಕೋರರ್ ಎನಿಸಿಕೊಂಡರು.
ತೀವ್ರ ತಿರುವು ನೀಡುತ್ತಿದ್ದ ಗಾಲೆ ಪಿಚ್‌ನಲ್ಲಿ ರವಿವಾರ ರಚಿನ್ ರವೀಂದ್ರ ಮಾತ್ರ ಏಕಾಂಗಿ ಹೋರಾಟ ನೀಡಿದ್ದರು. ನ್ಯೂಝಿಲ್ಯಾಂಡ್ ಗಾಲೆಯಲ್ಲಿ ಈ ಹಿಂದೆ ಆಡಿರುವ ಎಲ್ಲ 4 ಟೆಸ್ಟ್ ಪಂದ್ಯಗಳನ್ನು ಸೋತಿದೆ.
ರವೀಂದ್ರ ಅವರು ಗಾಲೆ ಕ್ರೀಡಾಂಗಣದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ನ್ಯೂಝಿಲ್ಯಾಂಡ್ ಆಟಗಾರ ಎನಿಸಿಕೊಂಡು ರಾಸ್ ಟೇಲರ್ ದಾಖಲೆಯನ್ನು ಮುರಿದರು. ಟೇಲರ್ 2019ರಲ್ಲಿ 89 ರನ್ ಗಳಿಸಿದ್ದರು.
ರವೀಂದ್ರ ಅವರ ಹೋರಾಟಕಾರಿ ಬ್ಯಾಟಿಂಗ್‌ಗೆ ಪ್ರಭಾತ್ ಜಯಸೂರ್ಯ ತೆರೆ ಎಳೆದರು. ನಿನ್ನೆಯ ಸ್ಕೋರ್‌ಗೆ ಕೇವಲ ಒಂದು ರನ್ ಸೇರಿಸಿದ ರವೀಂದ್ರ ಅವರು ಜಯಸೂರ್ಯ ಬೀಸಿದ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು.
ಜಯಸೂರ್ಯ ಮೊದಲ ಟೆಸ್ಟ್ ಪಂದ್ಯದಲ್ಲಿ 9 ವಿಕೆಟ್‌ಗಳನ್ನು ಕಬಳಿಸಿದರು. ಎರಡನೇ ಇನಿಂಗ್ಸ್‌ನಲ್ಲಿ ಕಿವೀಸ್‌ನ ವಿಲಿಯಮ್ ಒ ರೂರ್ಕಿ ವಿಕೆಟನ್ನು ಉರುಳಿಸಿದ ಜಯಸೂರ್ಯ 68 ರನ್‌ಗೆ ಐದು ವಿಕೆಟ್ ಗೊಂಚಲು ಪಡೆದರು.
23ರ ಹರೆಯದ ಒ ರೂರ್ಕಿ ಪಂದ್ಯದಲ್ಲಿ ಒಟ್ಟು 8 ವಿಕೆಟ್‌ಗಳನ್ನು ಉರುಳಿಸಿ ಭರವಸೆ ಮೂಡಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಗೊಂಚಲು ಪಡೆದಿದ್ದ ಒ ರೂರ್ಕಿ ತಾನಾಡಿದ 3ನೇ ಟೆಸ್ಟ್‌ನಲ್ಲಿ ಎರಡನೇ ಬಾರಿ ಈ ಸಾಧನೆ ಮಾಡಿದರು.
ಶ್ರೀಲಂಕಾದ ಎರಡನೇ ಇನಿಂಗ್ಸ್‌ನಲ್ಲಿ ಎಡಗೈ ಸ್ಪಿನ್ನರ್ ಅಜಾಝ್ ಪಟೇಲ್ 90 ರನ್‌ಗೆ ಆರು ವಿಕೆಟ್‌ಗಳನ್ನು ಪಡೆದರು. 1998ರ ನಂತರ ಶ್ರೀಲಂಕಾದಲ್ಲಿ ಶ್ರೇಷ್ಠ ಬೌಲಿಂಗ್ ಮಾಡಿದ ನ್ಯೂಝಿಲ್ಯಾಂಡ್‌ನ ಮೊದಲ ಬೌಲರ್ ಎನಿಸಿಕೊಂಡರು. 1998ರಲ್ಲಿ ಕೊಲಂಬೊದಲ್ಲಿ ಡೇನಿಯಲ್ ವೆಟೋರಿ 64 ರನ್‌ಗೆ 6 ವಿಕೆಟ್‌ಗಳನ್ನು ಪಡೆದಿದ್ದರು.
ಪಂದ್ಯದಲ್ಲಿ ಒಟ್ಟು 9 ವಿಕೆಟ್‌ಗಳನ್ನು(4-136, 5-68)ಉರುಳಿಸಿರುವ ಪ್ರಭಾತ್ ಜಯಸೂರ್ಯ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸರಣಿಯ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವು ಇದೇ ಮೈದಾನದಲ್ಲಿ ಗುರುವಾರದಿಂದ ಆರಂಭವಾಗಲಿದೆ.
► ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ ಮೊದಲ ಇನಿಂಗ್ಸ್: 305 ರನ್
ನ್ಯೂಝಿಲ್ಯಾಂಡ್ ಮೊದಲ ಇನಿಂಗ್ಸ್: 340 ರನ್
ಶ್ರೀಲಂಕಾ ಎರಡನೇ ಇನಿಂಗ್ಸ್: 309 ರನ್
ನ್ಯೂಝಿಲ್ಯಾಂಡ್ ಎರಡನೇ ಇನಿಂಗ್ಸ್: 211 ರನ್
(ರಚಿನ್ ರವೀಂದ್ರ 92, ಕೇನ್ ವಿಲಿಯಮ್ಸನ್ 30, ಟಾಮ್ ಬ್ಲಂಡೆಲ್ 30, ಪ್ರಭಾತ್ ಜಯಸೂರ್ಯ 5-68, ರಮೇಶ್ ಮೆಂಡಿಸ್ 3-83)
ಪಂದ್ಯಶ್ರೇಷ್ಠ: ಪ್ರಭಾತ್ ಜಯಸೂರ್ಯ.