ಮೊದಲ ಟೆಸ್ಟ್ | ಗೆಲುವಿನ ಹಳಿಯಲ್ಲಿ ಶ್ರೀಲಂಕಾ

Update: 2024-09-22 15:48 GMT

PC ; PTI 

ಗಾಲೆ : ರಚಿನ್ ರವೀಂದ್ರ ಅಜೇಯ ಅರ್ಧಶತಕ(91ರನ್, 158 ಎಸೆತ)ಹೊರತಾಗಿಯೂ ನ್ಯೂಝಿಲ್ಯಾಂಡ್ ವಿರುದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡ ಗೆಲುವಿನ ಹಳಿಯಲ್ಲಿ ಉಳಿದುಕೊಂಡಿದೆ.

ಗೆಲ್ಲಲು 275 ರನ್ ಗುರಿಯನ್ನು ಬೆನ್ನಟ್ಟುತ್ತಿರುವ ನ್ಯೂಝಿಲ್ಯಾಂಡ್ ತಂಡ ಶ್ರೀಲಂಕಾದ ಸ್ಪಿನ್ನರ್‌ಗಳಾದ ಪ್ರಬಾತ್ ಜಯಸೂರ್ಯ(3-66) ಹಾಗೂ ರಮೇಶ್ ಮೆಂಡಿಸ್(3-83)ಮೋಡಿಗೆ ತತ್ತರಿಸಿ ಆರಂಭಿಕ ಆಘಾತಕ್ಕೆ ಒಳಗಾಯಿತು.

ರವಿವಾರ 4ನೇ ದಿನದಾಟದಂತ್ಯಕ್ಕೆ ನ್ಯೂಝಿಲ್ಯಾಂಡ್ 207 ರನ್‌ಗೆ 8 ವಿಕೆಟ್‌ಗಳನ್ನು ಕಳೆದುಕೊಂಡಿದೆ. ಗೆಲ್ಲಲು ಇನ್ನೂ 68 ರನ್ ಗಳಿಸುವ ಅಗತ್ಯವಿದೆ. ಸದ್ಯ ಶ್ರೀಲಂಕಾ ತಂಡ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.

ಏಕಾಂಗಿ ಹೋರಾಟ ನೀಡುತ್ತಿರುವ ರವೀಂದ್ರ 158 ಎಸೆತಗಳಲ್ಲಿ 9 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದ್ದಾರೆ. 15 ಎಸೆತಗಳನ್ನು ಎದುರಿಸಿದರೂ ಅಜಾಝ್ ಪಟೇಲ್ ಇನ್ನಷ್ಟೇ ರನ್ ಖಾತೆ ತೆರೆಯಬೇಕಾಗಿದೆ.

ಇದಕ್ಕೂ ಮೊದಲು ಉತ್ತಮ ಬೌಲಿಂಗ್ ದಾಳಿ ಸಂಘಟಿಸಿದ ಅಜಾಝ್ ಪಟೇಲ್(6-90) ಅವರು ಶ್ರೀಲಂಕಾವನ್ನು 309 ರನ್‌ಗೆ ನಿಯಂತ್ರಿಸಿದರು.

ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ಶನಿವಾರ ವಿಶ್ರಾಂತಿ ದಿನ ಘೋಷಿಸಲಾಗಿತ್ತು.

ಶ್ರೀಲಂಕಾ ತಂಡ ರವಿವಾರ 4 ವಿಕೆಟ್ ನಷ್ಟಕ್ಕೆ 237 ರನ್‌ನಿಂದ ತನ್ನ 2ನೇ ಇನಿಂಗ್ಸ್ ಮುಂದುವರಿಸಿತು. ಅನಿರೀಕ್ಷಿತ ಬ್ಯಾಟಿಂಗ್ ಕುಸಿತ ಎದುರಿಸಿದ ಶ್ರೀಲಂಕಾವು 72 ರನ್ ಸೇರಿಸುವಷ್ಟರಲ್ಲಿ ತನ್ನ ಕೊನೆಯ 6 ವಿಕೆಟ್‌ಗಳನ್ನು ಕಳೆದುಕೊಂಡಿತು.

ಪಟೇಲ್(6-90) ಈ ಕುಸಿತಕ್ಕೆ ಪ್ರಮುಖ ಕಾರಣರಾಗಿದ್ದು ಶ್ರೀಲಂಕಾದ ನಾಯಕ ಧನಂಜಯ ಡಿಸಿಲ್ವ(40 ರನ್)ಹಾಗೂ ಆ್ಯಂಜೆಲೊ ಮ್ಯಾಥ್ಯೂಸ್(50 ರನ್)ವಿಕೆಟ್‌ಗಳನ್ನು ಪಡೆದರು. ಲಂಕಾದ ಕೊನೆಯ ಆರು ವಿಕೆಟ್‌ಗಳ ಪೈಕಿ ಐದನ್ನು ಉರುಳಿಸಿದರು.

ರನ್ ಚೇಸ್ ವೇಳೆ ನ್ಯೂಝಿಲ್ಯಾಂಡ್‌ನ ಆರಂಭಿಕ ಬ್ಯಾಟರ್ ಡಿವೊನ್ ಕಾನ್ವೆ (4 ರನ್) ಬೇಗನೆ ವಿಕೆಟ್ ಒಪ್ಪಿಸಿದರು. ಉತ್ತಮ ಜೊತೆಯಾಟ ನಡೆಸಲು ಕಿವೀಸ್ ಪರದಾಟ ನಡೆಸಿತು. ಟಾಮ್ ಲ್ಯಾಥಮ್(28 ರನ್), ಕೇನ್ ವಿಲಿಯಮ್ಸನ್(30 ರನ್) ಹಾಗೂ ಟಾಮ್ ಬ್ಲಂಡೆಲ್(30 ರನ್)ಉತ್ತಮ ಆರಂಭ ಪಡೆದರೂ ದೊಡ್ಡ ಸ್ಕೋರ್ ಗಳಿಸುವಲ್ಲಿ ವಿಫಲರಾದರು.

ನ್ಯೂಝಿಲ್ಯಾಂಡ್‌ಗೆ ಈಗಲೂ ಗೆಲುವಿನ ಅವಕಾಶ ಮುಕ್ತವಾಗಿದ್ದು, ಶ್ರೀಲಂಕಾ ತಂಡವು ಐದನೇ ದಿನದ ಪಿಚ್ ಲಾಭ ಪಡೆದು ಗೆಲುವು ದಕ್ಕಿಸಿಕೊಳ್ಳಲು ಸ್ಪಿನ್ನರ್‌ಗಳನ್ನೇ ಹೆಚ್ಚು ಅವಲಂಬಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News