ರಿಷಭ್ ಪಂತ್, ಶುಭಮನ್ ಗಿಲ್ ಆಕರ್ಷಕ ಶತಕ | ಭಾರತದ ಗೆಲುವಿಗೆ ಇನ್ನು ಆರೇ ಮೆಟ್ಟಿಲು

Update: 2024-09-21 15:19 GMT

ರಿಷಭ್ ಪಂತ್, ಶುಭಮನ್ ಗಿಲ್ | PTI 

ಚೆನ್ನೈ : ತಿಂಗಳುಗಳಿಂದ ಕಾಡುತ್ತಿದ್ದ ನೋವು, ಒತ್ತಡ ಹಾಗೂ ವಿವಿಧ ಹಿನ್ನಡೆಗಳಿಂದ ಹೊರ ಬಂದಿರುವ ರಿಷಭ್ ಪಂತ್ ಹಾಗೂ ಶುಭಮನ್ ಗಿಲ್ ಬಾಂಗ್ಲಾದೇಶ ವಿರುದ್ಧ ಶನಿವಾರ ನಡೆದ ಮೊದಲ ಟೆಸ್ಟ್‌ ನ ಮೂರನೇ ದಿನದಾಟದಲ್ಲಿ ಭಾವನಾತ್ಮಕ ಶತಕ ದಾಖಲಿಸಿದರು.

ಭಾರತವು 3 ವಿಕೆಟ್‌ಗಳ ನಷ್ಟಕ್ಕೆ 81 ರನ್‌ನಿಂದ ಎರಡನೇ ಇನಿಂಗ್ಸ್ ಆರಂಭಿಸಿತು. ಪಂತ್(109 ರನ್,128 ಎಸೆತ)ಹಾಗೂ ಗಿಲ್(ಔಟಾಗದೆ 119 ರನ್, 176 ಎಸೆತ)ನಾಲ್ಕನೇ ವಿಕೆಟ್‌ಗೆ 167 ರನ್ ಸೇರಿಸಿ ತಂಡಕ್ಕೆ ಆಸರೆಯಾದರು. ರೋಹಿತ್ ಪಡೆ ತನ್ನ ಎರಡನೇ ಇನಿಂಗ್ಸ್‌ ನ್ನು 4 ವಿಕೆಟ್ ನಷ್ಟಕ್ಕೆ 287 ರನ್‌ಗೆ ಡಿಕ್ಲೇರ್ ಮಾಡಿ ಒಟ್ಟಾರೆ 514 ರನ್ ಮುನ್ನಡೆ ಸಾಧಿಸಿತು.

ಗೆಲ್ಲಲು 515 ರನ್ ಬೆನ್ನಟ್ಟಿದ ಬಾಂಗ್ಲಾದೇಶ ತನ್ನ ಎರಡನೇ ಇನಿಂಗ್ಸ್‌ ನಲ್ಲಿ ಒಂದಷ್ಟು ಹೋರಾಟ ನೀಡಿದ್ದು, ಮಂದ ಬೆಳಕಿನಿಂದಾಗಿ ಪಂದ್ಯವು ಸಂಜೆ 4:25ಕ್ಕೆ ಸ್ಥಗಿತಗೊಂಡಾಗ 4 ವಿಕೆಟ್‌ಗಳ ನಷ್ಟಕ್ಕೆ 158 ರನ್ ಗಳಿಸಿತು. ಬಾಂಗ್ಲಾಕ್ಕೆ ಗೆಲ್ಲಲು ಇನ್ನೂ 357 ರನ್ ಗಳಿಸುವ ಅಗತ್ಯವಿದೆ. ಮತ್ತೊಂದೆಡೆ ಭಾರತಕ್ಕೆ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಲು ಆರು ಮೆಟ್ಟಿಲು ಏರಬೇಕಾಗಿದೆ.

ಅಂಪೈರ್‌ ಗಳು ಆಟ ನಿಲ್ಲಿಸಲು ನಿರ್ಧರಿಸಿದಾಗ ನಜ್ಮುಲ್ ಹುಸೈನ್(51 ರನ್, 60 ಎಸೆತ)ಹಾಗೂ ಶಾಕಿಬ್ ಅಲ್ ಹಸನ್(5 ರನ್, 14 ಎಸೆತ) ಕ್ರೀಸ್‌ನಲ್ಲಿದ್ದರು. ಭಾರತದ ಪರ ಹಿರಿಯ ಸ್ಪಿನ್ನರ್ ಆರ್.ಅಶ್ವಿನ್(3-63)ಮೂರು ವಿಕೆಟ್‌ಗಳನ್ನು ಪಡೆದರು.

ಪಂತ್ ಹಾಗೂ ಗಿಲ್ ಅವರ ಶತಕವು ದಿನದ ಹೈಲೈಟ್ಸ್ ಎನಿಸಿಕೊಂಡಿದ್ದು, ಈ ಇಬ್ಬರು 3ನೇ ದಿನದಾಟದಲ್ಲಿ ವೈಯಕ್ತಿಕ ಸವಾಲುಗಳನ್ನು ಮೀರಿ ನಿಂತು ಮಿಂಚಿದರು.

2022ರ ಡಿಸೆಂಬರ್‌ನಲ್ಲಿ ಭೀಕರ ಕಾರು ಅಪಘಾತದ ನಂತರ ಪಂತ್ ಎದುರಿಸಿದ ಸಂಕಷ್ಟದ ಸರಮಾಲೆ ಕುರಿತು ಒಂದು ಸಾಕ್ಷ್ಯ ಚಿತ್ರವನ್ನೇ ರಚಿಸಬಹುದು. ಶಾಕಿಬ್ ಬೌಲಿಂಗ್‌ನಲ್ಲಿ ಎರಡು ರನ್ ಗಳಿಸಿದ ಪಂತ್ ತನ್ನ ಆರನೇ ಟೆಸ್ಟ್ ಶತಕ ಪೂರೈಸಿದರು. ಶತಕ ತಲುಪಿದ ನಂತರ ಪಿಚ್ ಮಧ್ಯೆ ನಿಂತ ಪಂತ್ ಕಣ್ಣುಗಳನ್ನು ಮುಚ್ಚಿಕೊಂಡು ಬ್ಯಾಟನ್ನು ಎತ್ತಿ ಹಿಡಿದರು. ಸ್ವಲ್ಪ ದೂರದಿಂದ ಇದನ್ನೆಲ್ಲಾ ವೀಕ್ಷಿಸುತ್ತಿದ್ದ ಗಿಲ್, ಪಂತ್ ಅವರ ವೈಯಕ್ತಿಕ ಕ್ಷಣಕ್ಕೆ ಗೌರವ ನೀಡಿದರು.

ಆ ನಂತರ ಇಬ್ಬರು ಪರಸ್ಪರ ಆಲಿಂಗಿಸಿಕೊಂಡರು. ಚೆಪಾಕ್‌ನಲ್ಲಿ ನೆರೆದಿದ್ದ ಪ್ರೇಕ್ಷಕರು ಖುಷಿಪಟ್ಟರು. ಭಾರತೀಯ ವಿಕೆಟ್‌ಕೀಪರ್-ಬ್ಯಾಟರ್ ಆಗಿ ಗರಿಷ್ಠ ಟೆಸ್ಟ್ ಶತಕ ಗಳಿಸಿರುವ ಎಂ.ಎಸ್. ಧೋನಿ ಅವರ ದಾಖಲೆಯನ್ನು ಪಂತ್ ಸರಿಗಟ್ಟಿದ್ದಾರೆ.

ಗಿಲ್ ಅವರು ಸಾಂಪ್ರದಾಯಿಕ ಟೆಸ್ಟ್ ಪಂದ್ಯದಲ್ಲಿ ಆತ್ಮವಿಶ್ವಾಸದ ಕೊರತೆಯಿಂದಾಗಿ ಮಾನಸಿಕವಾಗಿ ತೊಳಲಾಟದಲ್ಲಿದ್ದರು. ಈ ವರ್ಷಾರಂಭದಲ್ಲಿ ವಿಶಾಖಪಟ್ಟಣದಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಬಾರಿ ಶತಕ ಗಳಿಸಿದ್ದ ಗಿಲ್ ಅವರು ಮೆಹದಿ ಹಸನ್ ಬೌಲಿಂಗ್‌ನಲ್ಲಿ ಒಂದು ರನ್ ಗಳಿಸಿ ತನ್ನ ಐದನೇ ಶತಕ ಪೂರೈಸಿದರು.

ಇಂದು ಕ್ರಮವಾಗಿ 33 ಹಾಗೂ 12 ರನ್‌ನಿಂದ ಬ್ಯಾಟಿಂಗ್ ಆರಂಭಿಸಿದ ಗಿಲ್ ಹಾಗೂ ಪಂತ್ ಬಾಂಗ್ಲಾದೇಶದ ಬೌಲರ್‌ಗಳನ್ನು ಎದುರಿಸುವತ್ತ ಹೆಚ್ಚು ಗಮನಹರಿಸಿದರು. ದಿನದ ಮೊದಲ ಪಾನೀಯ ವಿರಾಮದ ವೇಳೆಗೆ ಆಫ್ ಸ್ಪಿನ್ನರ್ ಮಿರಾಝ್ ಎಸೆತದಲ್ಲಿ ಬೌಂಡರಿ ಗಳಿಸಿದ ಪಂತ್ ಅ ನಂತರ 88 ಎಸೆತಗಳಲ್ಲಿ ಅರ್ಧಶತಕ ತಲುಪಿದರು. ಅರ್ಧಶತಕ ತಲುಪಿದ ನಂತರ ಪಂತ್ ತನ್ನ ಟ್ರೇಡ್‌ಮಾರ್ಕ್ ಹೊಡೆತ ಬಾರಿಸಿದರು. ಹಸನ್ ಮಹ್ಮೂದ್ ಎಸೆತವನ್ನು ಸ್ಕೂಪ್ ಮಾಡಿ ಸಿಕ್ಸರ್ ಸಿಡಿಸಿದ ಪಂತ ನೆರೆದಿದ್ದ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದರು. 72 ರನ್ ಗಳಿಸಿದ್ದಾಗ ಜೀವದಾನ ಪಡೆದ ಪಂತ್ ಅವರು ಮೆಹದಿಗೆ ರಿಟರ್ನ್ ಕ್ಯಾಚ್ ನೀಡುವ ಮೊದಲು ತನ್ನ ಶತಕವನ್ನು ಪೂರೈಸಿದರು.

ಪಂತ್ ಔಟಾದ ನಂತರ ಕೆ.ಎಲ್.ರಾಹುಲ್(ಔಟಾಗದೆ 22, 19 ಎಸೆತ) ಜೊತೆ ಕೈಜೋಡಿಸಿದ ಗಿಲ್ 5ನೇ ವಿಕೆಟ್‌ಗೆ 51 ಎಸೆತಗಳಲ್ಲಿ 53 ರನ್ ಸೇರಿಸಿ ಭಾರತದ ಮುನ್ನಡೆಯನ್ನು 500ರ ಗಡಿ ದಾಟಿಸಿದರು.

ಗೆಲ್ಲಲು ಕಠಿಣ ಗುರಿ ಪಡೆದಿರುವ ಬಾಂಗ್ಲಾದೇಶ ಮೊದಲ ಇನಿಂಗ್ಸ್‌ ಗಿಂತ ಉತ್ತಮ ಆರಂಭ ಪಡೆಯಿತು. ಸಹ ಆಟಗಾರರಾದ ಝಾಕಿರ್ ಹಸನ್(33 ರನ್)ಹಾಗೂ ಶಾದ್‌ಮಾನ್ ಇಸ್ಲಾಮ್(35 ರನ್)ಕಳಪೆ ಹೊಡೆತಕ್ಕೆ ಕೈಹಾಕಿ ವಿಕೆಟ್ ಕೈಚೆಲ್ಲಿದಾಗ ನಜ್ಮುಲ್ ಹುಸೈನ್ ಒಂದಷ್ಟು ಪ್ರತಿರೋಧ ಒಡ್ಡಿದರು. ಅಶ್ವಿನ್ ಬೌಲಿಂಗ್‌ನಲ್ಲಿ 3 ಸಿಕ್ಸರ್ ಸಿಡಿಸಿದ ಹುಸೈನ್ 56 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News