ಶ್ರೇಯಸ್ ಅಯ್ಯರ್ಗೆ ಬಿಸಿಸಿಐಯಿಂದ ಮತ್ತೆ ಕೇಂದ್ರೀಯ ಗುತ್ತಿಗೆ: ಮಾ.29ರಂದು ಗಂಭೀರ್, ಅಗರ್ಕರ್ ರಿಂದ ಚರ್ಚೆ

ಶ್ರೇಯಸ್ ಅಯ್ಯರ್ | PC : PTI
ಮುಂಬೈ: ಭಾರತೀಯ ಕ್ರಿಕೆಟ್ ಮಂಡಳಿಯ ಉನ್ನತ ಅಧಿಕಾರಿಗಳು ಈ ವಾರ 2024-25ರ ಋತುವಿಗಾಗಿ ಉಳಿಸಿಕೊಂಡ ಆಟಗಾರರ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಲಿದ್ದು, ಈ ವೇಳೆ ಫಾರ್ಮ್ನಲ್ಲಿರುವ ಬ್ಯಾಟರ್ ಶ್ರೇಯಸ್ ಅಯ್ಯರ್ ತಮ್ಮ ಬಿಸಿಸಿಐ ಕೇಂದ್ರೀಯ ಗುತ್ತಿಗೆಯನ್ನು ಮರಳಿ ಪಡೆಯಲಿದ್ದಾರೆ ಎಂದು ವರದಿಯಾಗಿದೆ.
ಕೇಂದ್ರೀಯ ಗುತ್ತಿಗೆಯ ಕುರಿತು ಮಾ.29ರಂದು ಗುವಾಹಟಿಯಲ್ಲಿ ಚರ್ಚಿಸಲು ಬಿಸಿಸಿಐ ಕಾರ್ಯದರ್ಶಿ ದೇವಜೀತ್ ಸೈಕಿಯಾ ಅವರು ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ರನ್ನು ಭೇಟಿಯಾಗಲಿದ್ದಾರೆ.
ಗುವಾಹಟಿಯಲ್ಲಿ ಮಾ.30ರಂದು ರಾಜಸ್ಥಾನ ರಾಯಲ್ಸ್ ಹಾಗೂ ಚೆನ್ನೈಸೂಪರ್ ಕಿಂಗ್ಸ್ ನಡುವೆ ಐಪಿಎಲ್ ಪಂದ್ಯ ನಡೆಯಲಿದೆ.
ಬಿಸಿಸಿಐ ಮೂರು ದಿನಗಳ ಹಿಂದೆ ಭಾರತ ಮಹಿಳೆಯರ ಕ್ರಿಕೆಟಿಗರ ಕೇಂದ್ರೀಯ ಗುತ್ತಿಗೆಯನ್ನು ಪ್ರಕಟಿಸಿತ್ತು.
ಅಯ್ಯರ್ ಬಿಸಿಸಿಐ ಕೇಂದ್ರೀಯ ಗುತ್ತಿಗೆಯನ್ನು ಪಡೆಯಲು ಸಜ್ಜಾಗಿದ್ದಾರೆ. ಆದರೆ, ಕಳೆದ ವರ್ಷ 2023-24 ಋತುವಿನ ಕೇಂದ್ರೀಯ ಗುತ್ತಿಗೆ ಪಟ್ಟಿಯಿಂದ ಹೊರಗುಳಿದಿದ್ದ ಇಶಾನ್ ಕಿಶನ್ ಈ ಬಾರಿ ಗುತ್ತಿಗೆ ಪಡೆಯುವ ಕುರಿತು ಖಚಿತತೆ ಇಲ್ಲ. ಈ ಇಬ್ಬರು ಆಟಗಾರರು ಬಿಸಿಸಿಐನ ಸ್ಪಷ್ಟ ಸೂಚನೆಗಳ ಹೊರತಾಗಿಯೂ ಈ ಹಿಂದೆ ದೇಶೀ ಪಂದ್ಯಗಳಿಂದ ಹೊರಗುಳಿದಿದ್ದರು.
ಶ್ರೇಯಸ್ ತನ್ನ ಗುತ್ತಿಗೆಯನ್ನು ಮರು ಪಡೆಯಲು ಸಜ್ಜಾಗಿದ್ದು, ಅಗ್ರ ಶ್ರೇಣಿಯನ್ನು ಪಡೆಯಬಹುದು. ಇಶಾನ್ ವಿಚಾರದಲ್ಲಿ ಚರ್ಚೆಗಳು ಈಗಲೂ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ಕೊನೆಗೊಂಡಿರುವ 2025ರ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಯ್ಯರ್ 5 ಪಂದ್ಯಗಳಲ್ಲಿ 48.60ರ ಸರಾಸರಿಯಲ್ಲಿ 2 ಅರ್ಧಶತಕಗಳ ಸಹಿತ ಒಟ್ಟು 243 ರನ್ ಗಳಿಸಿದ್ದು, ಭಾರತವು ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕಿಶನ್ ರಾಜಸ್ಥಾನ ರಾಯಲ್ಸ್ ವಿರುದ್ಧ ಇತ್ತೀಚೆಗೆ ನಡೆದಿದ್ದ 2025ರ ಐಪಿಎಲ್ ಪಂದ್ಯದಲ್ಲಿ ಹೈದರಾಬಾದ್ ತಂಡದ ಪರ ಕೇವಲ 47 ಎಸೆತಗಳಲ್ಲಿ ಔಟಾಗದೆ 106 ರನ್ ಗಳಿಸಿದ್ದರು.
ಟಿ20 ಕ್ರಿಕೆಟ್ನಿಂದ ನಿವೃತ್ತಿಯಾಗಿರುವ ಹೊರತಾಗಿಯೂ ಭಾರತ ತಂಡದ ಏಕದಿನ ಹಾಗೂ ಟೆಸ್ಟ್ ತಂಡದ ನಾಯಕ ರೋಹಿತ್ ಶರ್ಮಾ, ಸೂಪರ್ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹಾಗೂ ಆಲ್ರೌಂಡರ್ ರವೀಂದ್ರ ಜಡೇಜ ಕೇಂದ್ರೀಯ ಗುತ್ತಿಗೆಯಲ್ಲಿ ಗರಿಷ್ಠ ‘ಎ’ ಪ್ಲಸ್ ಶ್ರೇಣಿಯನ್ನು ಉಳಿಸಿಕೊಳ್ಳುತ್ತಾರೋ ಎಂಬ ಕುರಿತು ತೀವ್ರ ಚರ್ಚೆ ನಡೆಯಬಹುದು.
ಅಕ್ಷರ್ ಪಟೇಲ್ ಭಡ್ತಿ ಪಡೆಯಬಹುದು. ವರುಣ್ ಚಕ್ರವರ್ತಿ, ಅಭಿಷೇಕ್ ಶರ್ಮಾ ಹಾಗೂ ನಿತಿಶ್ಕುಮಾರ್ ರೆಡ್ಡಿ ಮೊದಲ ಬಾರಿ ಬಿಸಿಸಿಐ ಗುತ್ತಿಗೆ ಪಡೆಯಬಹುದು.