ವಿಶ್ವಕಪ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದ ಭಾರತ

Update: 2023-10-11 03:17 GMT

Photo: twitter.com/BCCI

ಹೊಸದಿಲ್ಲಿ: ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಂಗಳವಾರ ನಡೆದ ಎರಡು ಪಂದ್ಯಗಳು ದೊಡ್ಡ ಮೊತ್ತವನ್ನು ದಾಖಲಿಸಿದ್ದು, ಶ್ರೀಲಂಕಾ ನೀಡಿದ 345 ರನ್ ಗಳ ಗುರಿಯನ್ನು ಬೆನ್ನಟ್ಟಿ ಪಾಕಿಸ್ತಾನ ಗೆಲುವು ಸಾಧಿಸಿದೆ. ಮತ್ತೊಂದು ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಬಾಂಗ್ಲಾದೇಶವನ್ನು ಸದೆ ಬಡಿದಿದೆ. ಈ ಎರಡು ಫಲಿತಾಂಶಗಳು ಭಾರತವನ್ನು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿಸಿವೆ.

ಪಾಕಿಸ್ತಾನ ಈಗ ಅಂಕಪಟ್ಟಿಯಲ್ಲಿ ನ್ಯೂಜಿಲೆಂಡ್ ಬಳಿಕ ಎರಡನೇ ಸ್ಥಾನದಲ್ಲಿದೆ. ನಾಲ್ಕನೇ ಸ್ಥಾನದಲ್ಲಿದ್ದ ಬಾಂಗ್ಲಾದೇಶ ಆರನೇ ಸ್ಥಾನಕ್ಕೆ ಕುಸಿದಿದೆ. ಇಂಗ್ಲೆಂಡ್ 10ನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಮೇಲೆ ಏರಿದ್ದರೆ, ಭಾರತ ಅಗ್ರ-4ರ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.

ಅಬ್ದುಲ್ಲಾ ಶಫೀಕ್ ಮತ್ತು ಮೊಹ್ಮದ್ ರಿಜ್ವಾನ್ ಅವರ ಶತಕಗಳು, ವಿಶ್ವಕಪ್ ನಲ್ಲಿ ಗರಿಷ್ಠ ರನ್ ಬೆನ್ನಟ್ಟಿ ಗೆಲುವು ಸಾಧಿಸಲು ಪಾಕಿಸ್ತಾನ ತಂಡಕ್ಕೆ ನೆರವಾಗಿವೆ. ಹೈದರಾಬಾದ್ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 10 ಎಸೆತಗಳು ಇರುವಂತೆಯೇ 345 ರನ್ ಗಳ ಗೆಲುವಿನ ಗುರಿಯನ್ನು ಪಾಕಿಸ್ತಾನ ತಲುಪಿದೆ. ರಿಜ್ವಾನ್ 121 ಎಸೆತಗಳಲ್ಲಿ 131 ರನ್ ಸಿಡಿಸಿದರೆ, ಆರಂಭಿಕ ದಾಂಡಿಗ ಅಬ್ದುಲ್ಲಾ ಶಫೀಕ್ 103 ಎಸೆತಗಳಲ್ಲಿ 113 ರನ್ ಗಳಿಸಿದರು.

ವಿಶ್ವಕಪ್ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದೇ ಪಂದ್ಯದಲ್ಲಿ ನಾಲ್ಕು ಶತಕಗಳು ದಾಖಲಾದವು. ಇಮಾಮ್ ಉಲ್ ಹಕ್ (1) ಮತ್ತು ಬಾಬರ್ ಅಝಂ (10) ಅವರನ್ನು ಬೇಗನೇ ಕಳೆದುಕೊಂಡರೂ, ಚೇತರಿಸಿಕೊಂಡ ಪಾಕಿಸ್ತಾನ ತಂಡ ಗೆಲುವು ಸಾಧಿಸಲು ಯಶಸ್ವಿಯಾಯಿತು.

ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ಆಡಿದ ಎರಡೂ ಪಂದ್ಯಗಳನ್ನು ಗೆದ್ದು ತಲಾ 4 ಅಂಕ ಸಂಪಾದಿಸಿದ್ದು, ರನ್ ರೇಟ್ ಆಧಾರದಲ್ಲಿ ನ್ಯೂಜಿಲೆಂಡ್ ಅಗ್ರಸ್ಥಾನಿಯಾಗಿದೆ. ದಕ್ಷಿಣ ಆಫ್ರಿಕಾ, ಭಾರತ, ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶ ತಲಾ ಎರಡು ಅಂಕ ಹೊಂದಿದ್ದರೂ, ರನ್ರೇಟ್ ಆಧಾರದಲ್ಲಿ ಕ್ರಮವಾಗಿ 3,4,5 ಮತ್ತು 6ನೇ ಸ್ಥಾನ ಹೊಂದಿವೆ. ಟೂರ್ನಿಯಲ್ಲಿ ಇನ್ನೂ ಗೆಲುವಿನ ರುಚಿ ಕಾಣದ ಆಸ್ಟ್ರೇಲಿಯಾ, ಶ್ರೀಲಂಕಾ, ಅಫ್ಘಾನಿಸ್ತಾನ ಹಾಗೂ ನೆದರ್ಲೆಂಡ್ಸ್ ಕೊನೆಯ ನಾಲ್ಕು ಸ್ಥಾನಗಳಿಗೆ ತೃಪ್ತಿಪಟ್ಟಿವೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News