2025ರ ಎಫ್ಐಎಚ್ ಹಾಕಿ ಪುರುಷರ ಜೂನಿಯರ್ ವಿಶ್ವಕಪ್ ಗೆ ಭಾರತ ಆತಿಥ್ಯ

Update: 2024-06-11 16:25 GMT

PC: scroll.in

ಹೊಸದಿಲ್ಲಿ: 2025ರ ಎಫ್ಐಎಚ್ ಹಾಕಿ ಪುರುಷರ ಜೂನಿಯರ್ ವಿಶ್ವಕಪ್ ಗೆ ಭಾರತ ಆತಿಥ್ಯವಹಿಸಿಕೊಳ್ಳಲಿದೆ ಎಂದು ಅಂತರ್ರಾಷ್ಟ್ರೀಯ ಹಾಕಿ ಒಕ್ಕೂಟ(ಎಫ್ಐಎಚ್)ಮಂಗಳವಾರ ತಿಳಿಸಿದೆ.

ಪಂದ್ಯಾವಳಿಯನ್ನು 2025ರ ಡಿಸೆಂಬರ್ನಲ್ಲಿ ಆಡಲಾಗುತ್ತದೆ. ಎಫ್ಐಎಚ್ ಹಾಕಿ ಜೂನಿಯರ್ ವಿಶ್ವಕಪ್ನಲ್ಲಿ ಇದೇ ಮೊದಲ ಬಾರಿ ಸುಮಾರು 24 ತಂಡಗಳನ್ನು ಸೇರಿಸಿಕೊಳ್ಳಲಾಗುತ್ತದೆ.

ಭಾರತವು 2013ರ ನಂತರ ನಾಲ್ಕನೇ ಬಾರಿ ಟೂರ್ನಮೆಂಟ್ ಅನ್ನು ಆಯೋಜಿಸುತ್ತಿದೆ.

ಪ್ರಮುಖ ರಾಷ್ಟ್ರೀಯ ಹಾಕಿ ಸಂಸ್ಥೆಗಳಿಗೆ ಆಡಲು ಹೆಚ್ಚಿನ ಅವಕಾಶಗಳನ್ನು ನೀಡುವುದು ನಮ್ಮ ಸಬಲೀಕರಣ ಕಾರ್ಯತಂತ್ರದ ಪ್ರಮುಖ ಆಧಾರಸ್ತಂಭಗಳಲ್ಲಿ ಒಂದಾಗಿದೆ. ಈ ವರ್ಷ ಒಮಾನ್ನಲ್ಲಿ ನಡೆದ ಎಫ್ಐಎಚ್ ಹಾಕಿ 5ಎಸ್ ವಿಶ್ವಕಪ್ ನಮ್ಮ ಸ್ಪರ್ಧೆಗಳಿಗೆ ಹೆಚ್ಚಿನ ಮೌಲ್ಯವನ್ನು ತಂದಿರುವುದನ್ನು ನಾವು ನೋಡಿದ್ದೇವೆ. ಹೀಗಾಗಿ ಎಫ್ಐಎಚ್ ಹಾಕಿ ಜೂನಿಯರ್ ವಿಶ್ವಕಪ್ಗಾಗಿ ನಾವು ಭಾಗವಹಿಸುವ ತಂಡಗಳ ಸಂಖ್ಯೆಯನ್ನು ಹೆಚ್ಚಿಸಿದ್ದೇವೆ. ಮುಂದಿನ ವರ್ಷ ನಮ್ಮ ಕ್ರೀಡೆಯ ಭವಿಷ್ಯವನ್ನು ಪ್ರತಿನಿಧಿಸುವ ಈ 24 ಯುವ ತಂಡಗಳನ್ನು ನೋಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಎಫ್ಐಎಚ್ ಅಧ್ಯಕ್ಷ ತಯ್ಯಬ್ ಇಕ್ರಾಮ್ ಹೇಳಿದ್ದಾರೆ.

ಅಂತರ್ರಾಷ್ಟ್ರೀಯ ಹಾಕಿ ಒಕ್ಕೂಟ ಪುರುಷರ ಜೂನಿಯರ್ ಹಾಕಿ ವಿಶ್ವಕಪ್-2025 ಅನ್ನು ಆಯೋಜಿಸಲು ಭಾರತವನ್ನು ಆಯ್ಕೆ ಮಾಡಿರುವುದು ನಮಗೆ ಸಂತೋಷ ತಂದಿದೆ. ಈ ಪಂದ್ಯಾವಳಿಯನ್ನು ನಮಗೆ ವಹಿಸಿದ್ದಕ್ಕಾಗಿ ಎಫ್ಐಎಚ್ ಹಾಗೂ ಅದರ ಅಧ್ಯಕ್ಷ ತಯ್ಯಬ್ ಇಕ್ರಮ್ ಅವರಿಗೆ ನಾವು ಪ್ರಾಮಾಣಿಕ ಧನ್ಯವಾದಗಳನ್ನು ವ್ಯಕ್ತಪಡಿಸಲು ಬಯಸುತ್ತೇವೆ ಎಂದು ಹಾಕಿ ಇಂಡಿಯಾದ ಅಧ್ಯಕ್ಷ ಡಾ.ದಿಲೀಪ್ ಟಿರ್ಕಿ ಹೇಳಿದ್ದಾರೆ.

ಕಳೆದ ಆವೃತ್ತಿಯ ಟೂರ್ನಮೆಂಟ್ ಮಲೇಶ್ಯದಲ್ಲಿ ನಡೆದಿತ್ತು. ಫ್ರಾನ್ಸ್ ತಂಡವನ್ನು 2-1 ಅಂತರದಿಂದ ಮಣಿಸಿದ ಜರ್ಮನಿ ಪ್ರಶಸ್ತಿ ಗೆದ್ದುಕೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News