10 ವಿಕೆಟ್ ಸೋಲಿಗೆ ಪ್ರತೀಕಾರವಾಗಿ ಇಂಗ್ಲೆಂಡ್ ನ 10 ವಿಕೆಟ್ ಕಿತ್ತ ಭಾರತ!

Update: 2024-06-28 03:32 GMT

PC:X/ SohelVkf

ಅಡಿಲೇಡ್ ನಿಂದ ಗಯಾನಾವರೆಗೆ..ರೋಹಿತ್ ಶರ್ಮಾ ಅವರ ಪ್ರತೀಕಾರ ಇದೀಗ ಪೂರ್ಣಗೊಂಡಿದೆ. 10 ವಿಕೆಟ್ ಗಳ ಹೀನಾಯ ಸೋಲಿಗೆ ಪ್ರತೀಕಾರವಾಗಿ ಗಯಾನಾದಲ್ಲಿ ಇಂಗ್ಲೆಂಡ್ ನ ಎಲ್ಲ 10 ವಿಕೆಟ್ ಗಳನ್ನು ಭಾರತೀಯ ಬೌಲರ್ ಗಳು ಕಿತ್ತರು. ಈ ಮೂಲಕ ರೋಹಿತ್ ಶರ್ಮಾ ಹಾಗೂ ಭಾರತ ತಂಡ ಟಿ20 ವಿಶ್ವಕಪ್ನ ಫೈನಲ್ ತಲುಪಿದೆ.

ವಿಶ್ವಕಪ್ ಫೈನಲ್ ತಲುಪುವ ಕನಸು ನುಚ್ಚು ನೂರಾಗುತ್ತಿದ್ದಂತೆ, ಭಾರತೀಯ ತಂಡದ ಡ್ರೆಸ್ಸಿಂಗ್ ರೂಂನಲ್ಲಿ ನಾಯಕನ ಭಾವನೆಗಳು ಕಟ್ಟೆಯೊಡೆದಿದ್ದವು. ಎರಡು ವರ್ಷ ಬಳಿಕ ಭಾರತ ಏಕಪಕ್ಷೀಯ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 68 ರನ್ ಅಂತರದಿಂದ ಮಣಿಸಿ ಫೈನಲ್ ತಲುಪಿದೆ. ಏಳು ತಿಂಗಳಲ್ಲಿ ಎರಡನೇ ಬಾರಿಗೆ ವಿಶ್ವಕಪ್ ಫೈನಲ್ ತಲುಪಿದ ಹೆಗ್ಗಳಿಕೆ ಭಾರತದ್ದು.

ಈ ಗೆಲುವು ಸಂಭ್ರಮಿಸುವಂಥದ್ದಾದರೂ, ದೊಡ್ಡ ಗುರಿ ರೋಹಿತ್ ಮತ್ತು ಅವರ ತಂಡದ ಮುಂದಿದೆ. ಈ ಗಂಭೀರತೆ ಹಿನ್ನೆಲೆಯಲ್ಲಿ ರೋಹಿತ್ ತಮ್ಮ ಸಮಾಧಾನಚಿತ್ತವನ್ನು ಪ್ರದರ್ಶಿಸಿದರು. 172 ರನ್ ಗಳ ಬೆನ್ನಟ್ಟಿದ್ದ ಇಂಗ್ಲೆಂಡ್ ತಂಡವನ್ನು 103 ರನ್ಗಳಿಗೆ ಹೆಡೆಮುಡಿ ಕಟ್ಟಿದ ಭಾರತ ತಂಡದ ಸದಸ್ಯರು ಎದುರಾಳಿ ತಂಡದ ಕೈ ಕುಲುಕುವ ಮೂಲಕ ಸಂತಸ ಹಂಚಿಕೊಂಡರು. ರೋಹಿತ್ ಅವರ ಸಹ ಆಟಗಾರರು ರೋಹಿತ್ ಮುಖದಲ್ಲಿ ನಗು ತರಿಸುವ ಪ್ರಯತ್ನ ಮಾಡಿದರು. ಆದರೆ ಸಾಧ್ಯವಾಗಲಿಲ್ಲ. ಕುರ್ಚಿಯಲ್ಲಿ ಕುಳಿತಿದ್ದ ನಾಯಕನ ಗಮನ ಶನಿವಾರ ನಡೆಯುವ ಫೈನಲ್ ಮೇಲಿತ್ತು.

"ರೋಹಿತ್ ಶರ್ಮಾ ಮುಖದಲ್ಲಿ ನಿರಾಳತೆ ಎದ್ದುಕಾಣುತ್ತದೆ. ಕುರ್ಚಿಯಲ್ಲಿ ಕುಳಿತ ಅವರು ಏನು ಯೋಚಿಸುತ್ತಿರಬಹುದು? ನಾನು ಹೇಳುತ್ತೇನೆ.. ಅವರ ದೃಷ್ಟಿ ಬ್ರಿಡ್ಜ್ ಟೌನ್. ಶನಿವಾರದತ್ತ ಅವರ ಚಿತ್ತ.. ಫೈನಲ್"- ಭಾರತ ತಂಡದ ಮಾಜಿ ಕೋಚ್ ಹಾಗೂ ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ಭಾರತದ ನಾಯಕನ ಚಿತ್ತಪ್ರವೃತ್ತಿಯನ್ನು ಸರಿಯಾಗಿ ಬಣ್ಣಿಸಿದರು.

ಕಳೆದ ವರ್ಷ ರೋಹಿತ್ ನೇತೃತ್ವದ ತಂಡ ಮೂರು ಐಸಿಸಿ ಟೂರ್ನಿಗಳ ಫೈನಲ್ ತಲುಪಿತ್ತು. 2023ರ ಜೂನ್ ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್, ನವೆಂಬರ್ ನಲ್ಲಿ 50 ಓವರ್ ಗಳ ವಿಶ್ವಕಪ್ ಹಾಗೂ ಇದೀಗ ಟಿ-20 ವಿಶ್ವಕಪ್. ಏಳು ತಿಂಗಳ ಹಿಂದೆ ವಿಶ್ವಕಪ್ ಗೆಲ್ಲುವ ಕನಸು ಫೈನಲ್ ನಲ್ಲಿ ನುಚ್ಚುನೂರಾಗಿತ್ತು. ಆದರೆ ಈ ಬಾರಿ ದಶಕದ ಪ್ರಶಸ್ತಿ ಬರ ನೀಗಿಸಿಕೊಳ್ಳುವ ಅವಕಾಶ ಸಿಕ್ಕಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News