ನಾಳೆ ಒಲಿಂಪಿಕ್ಸ್ ಅಭಿಯಾನ ಆರಂಭಿಸಲಿರುವ ಭಾರತ

Update: 2024-07-24 17:03 GMT

ಹೊಸದಿಲ್ಲಿ: ಪ್ಯಾರಿಸ್ ನಲ್ಲಿ ಗುರುವಾರ ರ್ಯಾಂಕಿಂಗ್ ರೌಂಡ್ನಲ್ಲಿ ಭಾಗವಹಿಸುವ ಮೂಲಕ ಬಿಲ್ಲುಗಾರರು ಭಾರತದ ಒಲಿಂಪಿಕ್ಸ್ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.

ಭಾರತೀಯ ಬಿಲ್ಲುಗಾರರು ಪ್ರತಿ ಬಾರಿಯಂತೆ ಈ ಸಲವೂ ಒಲಿಂಪಿಕ್ಸ್ ನಲ್ಲಿ ಮೊತ್ತ ಮೊದಲ ಪದಕ ಗೆಲ್ಲುವತ್ತ ಗುರಿ ಇಟ್ಟಿದ್ದಾರೆ. ಈ ಬಾರಿ ಬಿಲ್ಲುಗಾರರು ಒಲಿಂಪಿಕ್ ಗೇಮ್ಸ್ ನಲ್ಲಿ ತಮ್ಮ ಪದಕದ ಖಾತೆ ತೆರೆಯುತ್ತಾರೋ, ಇಲ್ಲವೋ ಎಂದು ಕಾದು ನೋಡಬೇಕಾಗಿದೆ.

ಗುರುವಾರ ಲೆಸ್ ಇನ್ವ್ಯಾಲಿಡಿಸ್ ಗ್ರೌಂಡ್ನಲ್ಲಿ ಮಹಿಳೆಯರ ವೈಯಕ್ತಿಕ ರ್ಯಾಂಕಿಂಗ್ ರೌಂಡ್ ನಲ್ಲಿ ದೀಪಿಕಾ ಕುಮಾರಿ, ಅಂಕಿತಾ ಭಕತ್, ಭಜನ್ ಕೌರ್ ಭಾಗವಹಿಸಲಿದ್ದಾರೆ. ಪುರುಷರ ವೈಯಕ್ತಿಕ ರ್ಯಾಂಕಿಂಗ್ ರೌಂಡ್ ನಲ್ಲಿ ಬಿ.ಧೀರಜ್, ತರುಣ್ದೀಪ್ ರಾಯ್, ಪ್ರವೀಣ್ ಜಾಧವ್ ಅದೃಷ್ಟದ ಪರೀಕ್ಷೆಗೆ ಇಳಿಯಲಿದ್ದಾರೆ.

ಹಲವು ವರ್ಷಗಳಿಂದ ವಿಶ್ವಮಟ್ಟದ ಹಲವು ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ಭಾರತಕ್ಕೆ ಆರ್ಚರಿಯಲ್ಲಿ ಒಲಿಂಪಿಕ್ಸ್ ಪದಕ ಗೆಲ್ಲಲು ಸಾಧ್ಯವಾಗಿಲ್ಲ.

ಭಾರತದ ಬಿಲ್ಲುಗಾರರು 1988ರಲ್ಲಿ ಚೊಚ್ಚಲ ಗೇಮ್ಸ್ ಆಡಿದ ನಂತರ ಬಹುತೇಕ ಪ್ರತಿ ಬಾರಿಯೂ ಒಲಿಂಪಿಕ್ಸ್ ನಲ್ಲಿ ಭಾಗವಹಿಸುತ್ತಿದ್ದಾರೆ.

ಪುರುಷರ ಹಾಗೂ ಮಹಿಳೆಯರ ಆರ್ಚರಿ ತಂಡಗಳು ರ್ಯಾಂಕಿಂಗ್ ಗಳ ಆಧಾರದಲ್ಲಿ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿವೆ. ಭಾರತವು 2012ರ ಲಂಡನ್ ಒಲಿಂಪಿಕ್ಸ್ ನಂತರ ಮೊದಲ ಬಾರಿ ಸಂಪೂರ್ಣ ಆರು ಸದಸ್ಯರ ತಂಡದೊಂದಿಗೆ ಕಣಕ್ಕಿಳಿದಿದೆ. ಹೀಗಾಗಿ ಎಲ್ಲ ಐದು ಸ್ಪರ್ಧೆಗಳಲ್ಲಿ ಭಾಗವಹಿಸಲಿದೆ.

ನಾಲ್ಕನೇ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಲಿರುವ ಅನುಭವಿ ಕ್ರೀಡಾಪಟುಗಳಾದ ತರುಣ್ದೀಪ್ ರಾಯ್ ಹಾಗೂ ದೀಪಿಕಾ ಕುಮಾರಿ ಯುವ ಸ್ಪರ್ಧಾಳುಗಳಿಗೆ ಮಾರ್ಗದರ್ಶನ ನೀಡಲಿದ್ದು, ಅಗ್ರ-10ರಲ್ಲಿ ಕನಿಷ್ಠ ಒಂದು ಸ್ಥಾನ ಪಡೆಯುವ ಮೂಲಕ ಪ್ರಮುಖ ಸುತ್ತಿನಲ್ಲಿ ಅರ್ಹತೆ ಪಡೆಯುವ ವಿಶ್ವಾಸದಲ್ಲಿದ್ದಾರೆ.

ಪ್ರಮುಖ ನಾಕೌಟ್ ಟೂರ್ನಮೆಂಟ್ ನಲ್ಲಿ ಸ್ಥಾನ ಗಿಟ್ಟಿಸಲು 53 ದೇಶಗಳ 128 ಅತ್ಲೀಟ್ ಗಳು ಅರ್ಹತಾ ಸುತ್ತಿನಲ್ಲಿ ಭಾಗವಹಿಸಲಿದ್ದಾರೆ. ನಾಕೌಟ್ ಸುತ್ತುಗಳು ರವಿವಾರ ಮಹಿಳೆಯರ ಟೀಮ್ ಫೈನಲ್ ನೊಂದಿಗೆ ಆರಂಭವಾಗಲಿದೆ.

ಪದೇ ಪದೇ ರ್ಯಾಂಕಿಂಗ್ ನಲ್ಲಿ ಮುಗ್ಗರಿಸಿ ಬಲಿಷ್ಠ ತಂಡ ಕೊರಿಯಾಕ್ಕೆ ಸೋಲುತ್ತಿದ್ದ ಭಾರತೀಯ ಬಿಲ್ಲುಗಾರರಿಗೆ ಅರ್ಹತಾ ಸುತ್ತು ಅತ್ಯಂತ ಮುಖ್ಯವಾಗಿದೆ.

ಪುರುಷರ ಆರ್ಚರ್ಗಳು ಅಗ್ರ-30ರಲ್ಲಿ ಸ್ಥಾನ ಪಡೆದ ನಂತರ ಟೋಕಿಯೊ ಒಲಿಂಪಿಕ್ಸ್ ನಲ್ಲಿ 9ನೇ ಶ್ರೇಯಾಂಕ ಪಡೆದಿದ್ದರು. ಆಗ ಏಕೈಕ ಮಹಿಳಾ ಆರ್ಚರ್ ದೀಪಿಕಾ ಅವರು 9ನೇ ಸ್ಥಾನ ಪಡೆದಿದ್ದರು. ಅಂತಿಮವಾಗಿ ಭಾರತವು ಕ್ವಾರ್ಟರ್ ಫೈನಲ್ ನಲ್ಲಿ ನಂ.1 ರ್ಯಾಂಕಿನ ಕೊರಿಯಾ ವಿರುದ್ಧ ಸೋತಿತ್ತು.

ಭಾರತದ ಪುರುಷರ ತಂಡ ಈ ವರ್ಷ ಶಾಂಘೈನಲ್ಲಿ ನಡೆದ ಫೈನಲ್ ನಲ್ಲಿ  ಕೊರಿಯಾವನ್ನು ಮೊದಲ ಬಾರಿ ಸೋಲಿಸಿ ಐತಿಹಾಸಿಕ ವಿಶ್ವಕಪ್ ನನ್ನು ಜಯಿಸಿತ್ತು.

ತರುಣ್ದೀಪ್ ರಾಯ್ ಹಾಗೂ ಒಲಿಂಪಿಯನ್ ಪ್ರವೀಣ್ ಜಾಧವ್ ತಂಡಕ್ಕೆ ಅನುಭವವನ್ನು ಒದಗಿಸಲಿದ್ದು, ಟೋಕಿಯೊ ಒಲಿಂಪಿಕ್ಸ್ ನಲ್ಲಿ 2ನೇ ಸ್ಥಾನ ಪಡೆದಿದ್ದ ಇಟಲಿಯ ಮೌರೊ ನೆಸ್ಪೋಲಿ ಅವರನ್ನು ತಿಂಗಳ ಹಿಂದೆ ಅಂಟಾಲಿಯದಲ್ಲಿ ನಡೆದಿದ್ದ ವರ್ಲ್ಡ್ ಸ್ಟೇಜ್-3ನಲ್ಲಿ ಮಣಿಸಿ ಕಂಚಿನ ಪದಕ ಜಯಿಸಿದ ನಂತರ ಯುವ ಆರ್ಚರಿಪಟು ಧೀರಜ್ ಬೊಮ್ಮದೇವರ ಆತ್ಮವಿಶ್ವಾಸದಲ್ಲಿದ್ದಾರೆ.

ಕಳೆದ ವರ್ಷ ಹೊಸ ಸಹ ಅತ್ಲೀಟ್ಗಳೊಂದಿಗೆ ಆಡಿದ ನಂತರ ಭರವಸೆಯ ಚಿಲುಮೆಯಾಗಿರುವ ಧೀರಜ್ ಒತ್ತಡದಲ್ಲೂ ಶಾಂತಚಿತ್ತದಿAದ ಆಡುವ ವ್ಯಕ್ತಿತ್ವ ಹೊಂದಿದ್ದಾರೆ.

ಈಗ ಎಲ್ಲರ ಚಿತ್ತ ದೀಪಿಕಾ ಕುಮಾರಿ ಅವರ ಮೇಲಿದೆ. ಮಗುವಿಗೆ ಜನ್ಮ ನೀಡಿದ 16 ತಿಂಗಳೊಳಗೆ ಈ ವರ್ಷದ ಎಪ್ರಿಲ್ನಲ್ಲಿ ಶಾಂಘೈನಲ್ಲಿ ನಡೆದಿದ್ದ ವಿಶ್ವಕಪ್ ಸ್ಟೇಜ್-1ರಲ್ಲಿ ಬೆಳ್ಳಿ ಪದಕವನ್ನು ಜಯಿಸಿ ಪುನರಾಗಮನಗೈದ ನಂತರ ದೀಪಿಕಾ ಅವರ ಮೇಲೆ ವಿಶ್ವಾಸ ಹೆಚ್ಚಾಗಿದೆ.

ದೀಪಿಕಾ ಈ ಬಾರಿ ಕೊರಿಯಾದ ಎದುರಾಳಿ ಲಿಮ್ ಸಿ ಹಿಯೊನ್ರನ್ನು ಎದುರಿಸಲಿದ್ದಾರೆ. ಹಿಯೋನ್ ಈ ವರ್ಷ ಎರಡು ಬಾರಿ ದೀಪಿಕಾರನ್ನು ಸೋಲಿಸಿದ್ದರು.

ರಿಕರ್ವ್ ಮಿಕ್ಸೆಡ್ ಟೀಮ್ ನಲ್ಲಿ ಧೀರಜ್ ಹಾಗೂ ದೀಪಿಕಾ ರ್ಯಾಂಕಿಂಗ್ ಸುತ್ತಿನಲ್ಲಿ ಜಯ ಸಾಧಿಸಬಹುದು.

ಮಹಿಳೆಯರ ತಂಡದಲ್ಲಿ ದೀಪಿಕಾ ಹೊರತುಪಡಿಸಿ ಉಳಿದವರೆಲ್ಲರೂ ಹೊಸಬರು. ಅಂಕಿತಾ ಭಕತ್ ಹಾಗೂ ಭಜನ್ ಕೌರ್ ಈವರ್ಷದ ಒಲಿಂಪಿಕ್ಸ್ ಗೀತೆ ಮೊದಲು ಸಾಕಷ್ಟು ಪಂದ್ಯಗಳನ್ನು ಆಡಿದ್ದಾರೆ. 2023ರಲ್ಲಿ ವಿಶ್ವಕಪ್ ಸ್ಟೇಜ್-4ರಲ್ಲಿ ಕಂಚಿನ ಪದಕ ಜಯಿಸಿದ್ದರು.

*ಭಾರತಕ್ಕೆ ಕ್ವಾರ್ಟರ್ ಫೈನಲ್ ನಲ್ಲಿ ಸೋಲುವ ಚಾಳಿ

ಭಾರತೀಯ ಆರ್ಚರ್ಗಳು ಒಲಿಂಪಿಕ್ಸ್ ಸ್ಪರ್ಧಾವಳಿಯಲ್ಲಿ ಕ್ವಾರ್ಟರ್ ಫೈನಲ್ ಹಂತವನ್ನು ಈ ತನಕ ದಾಟಿಲ್ಲ.

2000ರ ಸಿಡ್ನಿ ಗೇಮ್ಸ್ ಹೊರತುಪಡಿಸಿ ಎಲ್ಲ ಒಲಿಂಪಿಕ್ಸ್ಗಳಲ್ಲೂ ಭಾರತವು ಅಂತಿಮ-8ರ ಹಂತದಲ್ಲೇ ಮುಗ್ಗರಿಸಿದೆ. ಸಮಗ್ರ ಪ್ರದರ್ಶನವನ್ನು ಪರಿಗಣಿಸಿದರೆ 2021ರ ಟೋಕಿಯೊ ಗೇಮ್ಸ್ನಲ್ಲಿ ಭಾರತವು ಉತ್ತಮ ಪ್ರದರ್ಶನ ನೀಡಿದೆ. ಆ ಗೇಮ್ಸ್ನಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ ದೀಪಿಕಾ ಗಮನ ಸೆಳೆದಿದ್ದರು. ಆದರೆ ಮಿಕ್ಸೆಡ್ ಟೀಮ್ ಹಾಗೂ ಪುರುಷರ ತಂಡಗಳು ಕ್ವಾರ್ಟರ್ ಫೈನಲ್ ದಾಟುವಲ್ಲಿ ವಿಫಲವಾಗಿದ್ದವು.

ಸೋಮವಾರ ಪುರುಷರ ಟೀಮ್ ಫೈನಲ್ಸ್ ಆರಂಭವಾಗಲಿದ್ದು, ಮಂಗಳವಾರ ವೈಯಕ್ತಿಕ ಎಲಿಮಿನೇಶನ್ಸ್ ಶುರುವಾಗಲಿದೆ.

ಮಹಿಳೆಯರ ಹಾಗೂ ವೈಯಕ್ತಿಕ ವಿಭಾಗದ ಫೈನಲ್ಗಳು ವಾರಾಂತ್ಯದಲ್ಲಿ ನಡೆಯಲಿದ್ದು, ಮಿಕ್ಸೆಡ್ ಟೀಮ್ ಫೈನಲ್ ಶುಕ್ರವಾರ ನಡೆಯಲಿದೆ.

ಆರ್ಚರಿ: ಮಹಿಳೆಯರ ವೈಯಕ್ತಿಕ ರ್ಯಾಂಕಿಂಗ್ ರೌಂಡ್(ದೀಪಿಕಾಕುಮಾರಿ, ಅಂಕಿತಾ ಭಕತ್, ಭಜನ್ ಕೌರ್), ಸಮಯ: ಮಧ್ಯಾಹ್ನ 1:00

ಆರ್ಚರಿ: ಪುರುಷರ ವೈಯಕ್ತಿಕ ರ್ಯಾಂಕಿಂಗ್ ರೌಂಡ್(ಬಿ.ಧೀರಜ್, ತರುಣ್ದೀಪ್ ರಾಯ್, ಪ್ರವೀಣ್ ಜಾಧವ್) ಸಮಯ: ಸಂಜೆ 5:45

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News