ಐಪಿಎಲ್‍ನಿಂದಾಗಿ ಭಾರತೀಯ ಕ್ರಿಕೆಟ್ ಉತ್ತಮ ಸ್ಥಿತಿಯಲ್ಲಿದೆ: ಮುತ್ತಯ್ಯ ಮುರಳೀಧರನ್

Update: 2023-09-14 17:44 GMT

Photo: BCCI

ಹೊಸದಿಲ್ಲಿ, ಸೆ. 14: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಿಂದಾಗಿ ಭಾರತೀಯ ಕ್ರಿಕೆಟ್ ಉತ್ತಮ ಸ್ಥಿತಿಯಲ್ಲಿದೆ; ಈ ಪಂದ್ಯಾವಳಿಯು ಭಾರತಕ್ಕೆ ಹಲವಾರು ಕ್ರಿಕೆಟ್ ಪ್ರತಿಭೆಗಳನ್ನು ನೀಡಿದೆ ಎಂದು ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಮುತ್ತಯ್ಯ ಮುರಳೀಧರನ್ ಅಭಿಪ್ರಾಯಪಟ್ಟಿದ್ದಾರೆ.

ಮುರಳೀಧರನ್ ಎಎನ್‍ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನವೊಂದರಲ್ಲಿ, ಕ್ರಿಕೆಟ್, ಶ್ರೀಲಂಕಾ ಮತ್ತು ಅವರ ಮುಂಬರುವ ತಮಿಳು ಜೀವನಚಿತ್ರ ‘800’ ಬಗ್ಗೆ ಮಾತನಾಡಿದ್ದಾರೆ.

“ಐಪಿಎಲ್ ಆಟಗಾರರಿಗೆ ಭವಿಷ್ಯವನ್ನು ನೀಡಿದೆ. ಅದು ಅವರಿಗೆ ಅಗಾಧ ಹಣ ಮತ್ತು ಅವಕಾಶಗಳನ್ನು ಒದಗಿಸಿದೆ. ಐಪಿಎಲ್ ಭಾರತಕ್ಕೆ ತುಂಬಾ ಕ್ರಿಕೆಟ್ ಪ್ರತಿಭೆಗಳನ್ನು ನೀಡಿದೆ. ಈಗ ಭಾರತದಲ್ಲಿ ತುಂಬಾ ಪ್ರತಿಭಾವಂತ ಆಟಗಾರರಿದ್ದಾರೆ. ಈಗ ಐಪಿಎಲ್‍ನಂತೆ, ತಮಿಳುನಾಡು ಪ್ರೀಮಿಯರ್ ಲೀಗ್ (ಟಿಎನ್‍ಪಿಎಲ್)ನಂಥ ಹಲವು ಲೀಗ್‍ಗಳು ಆರಂಭಗೊಂಡಿವೆ. ಐಪಿಎಲ್‍ನಲ್ಲಿ ಆಡಲು ಇಲ್ಲಿಂದಲೂ ಆಟಗಾರರು ಸಿದ್ಧಗೊಳ್ಳುತ್ತಾರೆ. ಐಪಿಎಲ್‍ನಿಂದಾಗಿ ಭಾರತೀಯ ಕ್ರಿಕೆಟ್ ಸುಸ್ಥಿತಿಯಲ್ಲಿದೆ’’ ಎಂದು ಮುರಳೀಧರನ್ ಹೇಳಿದರು.

“ಶ್ರೀಲಂಕಾ ತಂಡದ ದೈಹಿಕ ಕ್ಷಮತೆಯ ಮಟ್ಟದ ಬಗ್ಗೆ ಮಾತನಾಡಿದ ಅವರು, 1990ರ ದಶಕದ ಮಧ್ಯ ಭಾಗದವರೆಗೂ ಆಟಗಾರರಿಗೆ ಸರಿಯಾದ ಫಿಸಿಯೊ ಇರಲಿಲ್ಲ ಎಂದರು.

“ನಾವು ಅಜೇಯ ತಂಡವಾಗಿದ್ದಾಗ ನಮ್ಮ ದೈಹಿಕ ಕ್ಷಮತೆಯ ಮಟ್ಟವೂ ಉತ್ತಮವಾಗಿತ್ತು. ಆದರೆ, ಅದಕ್ಕಿಂತಲೂ ಮೊದಲು, ನಮಗೆ ತರಬೇತಿದಾರರು ಇರಲಿಲ್ಲ. ಆಗ ಕ್ರಿಕೆಟಿಗರು ಹವ್ಯಾಸಿ ಕ್ರಿಕೆಟ್ ಆಡುತ್ತಿದ್ದರು. ಒಂದು ಪ್ರವಾಸದಲ್ಲಿ, ಎಲ್ಲಾ ಅಗತ್ಯ ವಸ್ತುಗಳನ್ನು ನಾವೇ ಖರೀದಿಸಬೇಕಾಗಿತ್ತು. ಆಗ ತಂಡದಲ್ಲಿ ಮ್ಯಾನೇಜರ್ ಮತ್ತು ಫಿಸಿಯೊ ಮಾತ್ರ ಇದ್ದರು. ತರಬೇತಿದಾರರನ್ನು ಹೊಂದುವುದು ನಮಗೆ ಸಾಧ್ಯವಿರಲಿಲ್ಲ’’ ಎಂದು ಸ್ಪಿನ್ ಮಾಂತ್ರಿಕ ಹೇಳಿದರು.

ಜಿಮ್ ಹೆಸರು ನಾನು ಕೇಳಿಯೇ ಇರಲಿಲ್ಲ!

ನಾನು ಆಡಲು ಆರಂಭಿಸಿದಾಗ ಜಿಮ್‍ನ ಹೆಸರನ್ನು ಕೇಳಿಯೇ ಇರಲಿಲ್ಲ. ಬೆಳಗ್ಗೆ ಎಲ್ಲಾ ರೀತಿಯ ಆಹಾರವನ್ನು ತಿಂದು ನಾವು ಮೈದಾನದಲ್ಲಿ ಐದು ಸುತ್ತು ಓಡುತ್ತಿದ್ದೆವು. ನಮಗೆ ಸರಿಯಾದ ಫಿಸಿಯೊ ಸಿಕ್ಕಿದ್ದು 1995ರಲ್ಲಿ. ನಮಗೆ ಮೊದಲ ಪ್ರಾಯೋಜಕರು ಸಿಕ್ಕಿದ್ದು ಕೂಡ 1995ರಲ್ಲಿ. ನನ್ನ ಮೊಟ್ಟ ಮೊದಲ ಟೆಸ್ಟ್ ಪಂದ್ಯಕ್ಕೆ ನಾನು ಸ್ವೀಕರಿಸಿದ ಹಣ 2,000 ರೂ. ಎಂದು ಮುರಳೀಧರನ್ ಹೇಳಿದರು.

ಆಗ ಭಾರತೀಯ ಕ್ರಿಕೆಟಿಗರೂ ಇಂಥದೇ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಆದರೆ, ನಮಗೆ ಹೋಲಿಸಿದರೆ ಅವರ ಪರಿಸ್ಥಿತಿ ಚೆನ್ನಾಗಿತ್ತು. ಯಾಕೆಂದರೆ ಅವರಿಗೆ ಪ್ರಾಯೋಜಕರು ಇದ್ದರು ಎಂದರು.

ದಾಲ್ಮಿಯಾ ಕಾಲದಲ್ಲಿ ಹಣ ಬಂತು:

“ಮಾಜಿ ಬಿಸಿಸಿಐ ಹಾಗೂ ಐಸಿಸಿ ಅಧ್ಯಕ್ಷ ಜಗಮೋಹನ್ ದಾಲ್ಮಿಯ ಕಾಲದಲ್ಲಿ ಕ್ರಿಕೆಟ್‍ಗೆ ಹಣ ಬಂತು. ಅವರು ವಿಲ್ಸ್ ಕಂಪೆನಿಯನ್ನು ಪ್ರಾಯೋಜಕರನ್ನಾಗಿ ಮಾಡಿದರು. ಆಗ ಟಿವಿ ಹಕ್ಕುಗಳ ವ್ಯವಹಾರವೂ ನಡೆಯಿತು. ಅವರು ಎಲ್ಲವನ್ನೂ ಸಾಧ್ಯವಾಗಿಸಿದರು. ಅವರ ವೃತ್ತಿಪರತೆಯ ಫಲವನ್ನು ನಾವಿಂದು ಉಣ್ಣುತ್ತಿದ್ದೇವೆ’’ ಎಂದು ಮುರಳೀಧರನ್ ಹೇಳಿದರು.

ಸಚಿನ್ ಮೊದಲ ದಿನದಿಂದಲೇ ಮಾಂತ್ರಿಕನಾಗಿದ್ದರು:

ಸಚಿನ್ ತೆಂಡುಲ್ಕರ್ ಮೊದಲ ದಿನದಿಂದಲೇ ಕ್ರಿಕೆಟ್ ಮಾಂತ್ರಿಕನಾಗಿದ್ದರು. ಯಾವ ಕ್ರಿಕೆಟಿಗನಿಗೂ ಅವರಂತೆ ಆಗಲು ಸಾಧ್ಯವಿಲ್ಲ ಎಂದು ಮುತ್ತಯ್ಯ ಮುರಳೀಧರನ್ ಅಭಿಪ್ರಾಯಪಟ್ಟರು.

“ಯಾವ ಕ್ರಿಕೆಟಿಗನೂ ಸಚಿನ್‍ರಂತೆ ಆಗಲು ಸಾಧ್ಯವಿಲ್ಲ. ಯಾಕೆಂದರೆ, ಅವರು 14 ವರ್ಷ ವಯಸ್ಸಿನಲ್ಲಿ ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ಶತಕ ಬಾರಿಸಿದ್ದರು ಮತ್ತು 16ನೇ ವರ್ಷದಲ್ಲಿ ದೇಶವನ್ನು ಪ್ರತಿನಿಧಿಸಿದ್ದರು. 17ನೇ ವರ್ಷದಲ್ಲಿ ದೇಶಕ್ಕಾಗಿ ಶತಕ ಬಾರಿಸಿದ್ದರು. ಇದು ಅಸಾಧಾರಣ ಸಾಧನೆ’’ ಎಂದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News