2027ರ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ಸ್ ಆತಿಥ್ಯಕ್ಕೆ ಭಾರತದಿಂದ ಬಿಡ್ಡಿಂಗ್: ನೀರಜ್ ಚೋಪ್ರಾ
ಝೂರಿಕ್ (ಸ್ವಿಟ್ಸರ್ಲ್ಯಾಂಡ್), ಆ. 31: 2027ರ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ಸ್ನ ಆತಿಥ್ಯಕ್ಕೆ ಭಾರತ ಬಿಡ್ಡಿಂಗ್ ಸಲ್ಲಿಸಲಿದೆ ಎಂದು ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ಶಿಪ್ ಚಿನ್ನದ ಪದಕ ವಿಜೇತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಸ್ವಿಟ್ಸರ್ಲ್ಯಾಂಡ್ನ್ ಝೂರಿಕ್ನಲ್ಲಿ ಬುಧವಾರ ಹೇಳಿದ್ದಾರೆ.
ಡೈಮಂಡ್ ಲೀಗ್ ಕ್ರೀಡಾಕೂಟ ಆರಂಭದ ಮುನ್ನಾ ದಿನ ಪತ್ರಿಕಾಗೋಷ್ಠಿಯಲ್ಲಿ, 2027ರ ವಿಶ್ವ ಚಾಂಪಿಯನ್ಶಿಪ್ಸ್ನ ಆತಿಥ್ಯವನ್ನು ಭಾರತ ವಹಿಸುವ ಸಾಧ್ಯತೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, “ಭಾರತ ಅದಕ್ಕಾಗಿ ಬಿಡ್ಡಿಂಗ್ ಸಲ್ಲಿಸಲಿದೆ. ಆ ಕ್ರೀಡಾಕೂಟವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ನಾನು ಅಭಿಮಾನಿಗಳಿಗೆ ಮನವಿ ಮಾಡುತ್ತೇನೆ. ಅವರು ಬರುವ ನಿರೀಕ್ಷೆಯಿದೆ’’ ಎಂದು ಹೇಳಿದರು.
“ಈಗ ಭಾರತದಲ್ಲಿ ಜಾವೆಲಿನ್ ತ್ರೋ ಪ್ರಸಿದ್ಧವಾಗಿದೆ. ನಾವು ಅತ್ಲೆಟಿಕ್ಸ್ನ್ನು ಅರಿತುಕೊಳ್ಳಬೇಕು ಮತ್ತು ಅದರ ಬಗ್ಗೆ ಹೆಚ್ಚಿನ ಜ್ಞಾನ ಹೊಂದಬೇಕು ಎಂದು ನಾನು ಭಾರತದಲ್ಲಿ ನೀಡುವ ಸಂದರ್ಶನಗಳಲ್ಲಿ ಹೇಳುತ್ತಿರುತ್ತೇನೆ. ಯಾಕೆಂದರೆ ಅತ್ಲೆಟಿಕ್ಸ್ ಎಂದರೆ ಜಾವೆಲಿನ್ ಎಸೆತ ಮಾತ್ರವೇ ಅಲ್ಲ. ಅತ್ಲೆಟಿಕ್ಸ್ನಲ್ಲಿ ತುಂಬಾ ಸ್ಪರ್ಧೆಗಳಿವೆ. ಹಾಗಾಗಿ, ಅವರು (ಅಭಿಮಾನಿಗಳು) ಬರದಿದ್ದರೆ, ಬರುವಂತೆ ನಾನು ಅವರನ್ನು ಒತ್ತಾಯಿಸುತ್ತೇನೆ’’ ಎಂದರು.